ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಮೇ.15): ಆತ ಹುಟ್ಟಿದ್ದು ಬಡ ಕುಟುಂಬದಲ್ಲಿ. ಆತನಿಗೆ ಅಕ್ಷರ ಕಲಿಯುವ ಹಂಬಲವಿದ್ದರೂ, ಬಡತನ ಅಡ್ಡಿ ಬಂತು, ಆದರೆ ಆತನ ಕ್ರೀಡಾ ಸಾಧನೆಗೆ ಮಾತ್ರ ಬಡತನ ಅಡ್ಡಿಯಾಗಲಿಲ್ಲ.

ಬಡತನದಲ್ಲೇ ಬೆಳೆದ ಹುಡುಗನೊಬ್ಬ ಇದೀಗ ನೆರೆಹೊರೆಯವರ ಸಹಾಯದಿಂದಲೇ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಭಾರತವನ್ನು ಗೆಲ್ಲಿಸಿದ ಕೀರ್ತಿ ಪಡೆದಿದ್ದಾನೆ."

ಈತನ ಹೆಸರು ಯಲ್ಲಪ್ಪ ಪೂಜಾರಿ. ಬಾಗಲಕೋಟೆ ಜಿಲ್ಲೆಯ ಬಿಲ್‌ಕೆರೂರ ಗ್ರಾಮದ ಯುವಕ. ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ ಕಲಿತಿರುವ ಯಲ್ಲಪ್ಪ, ಚಿಕ್ಕಂದಿನಿಂದಲೇ ಕಬಡ್ಡಿ ಬಗ್ಗೆ ಆಸಕ್ತಿ ಹೊಂದಿದ್ದ ಈತನಿಗೆ ಬೆನ್ನಲುಬಾಗಿ ನಿಂತವರು ಕೋಚ್ ಬಸವರಾಜ್ ಭಜಂತ್ರಿ ಮತ್ತು ಕೃಷ್ಣಾಜಿ ಹಾಗೂ ಸಮಾಜ ಸೇವಕ ರಾಜು ನಾಯಕ್. 

ಗ್ರಾಮ, ನಗರ, ತಾಲೂಕು, ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ಚೆನ್ನಾಗಿ ಕಬಡ್ಡಿ ಆಟ ಆಡಿ ಸೈ ಎನಿಸಿಕೊಂಡಿದ್ದ ಯಲ್ಲಪ್ಪನಿಗೆ ಗ್ರಾಮಸ್ಥರು ಪ್ರೋತ್ಸಾಹ ನೀಡಿದರು. ಹೀಗಾಗಿ ಅವರಿವರ ಸಹಾಯದಿಂದಲೇ ಇಂದು ರಾಷ್ಟ್ರ ಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಲು ಕಾರಣವಾಯಿತು. 

ಇದರ ಪರಿಣಾಮ ಈ ಮೊದಲೇ ರಾಜ್ಯದ ವಿವಿಧ ಪಟ್ಟಣದ ಜೊತೆಗೆ ತೆಲಂಗಾಣ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಬಡ್ಡಿ ಪಂದ್ಯವಾಡಿದ ಯಲ್ಲಪ್ಪ ಕೊನೆಗೆ ಇತ್ತೀಚಿಗೆ ನೇಪಾಳದಲ್ಲಿ ನಡೆದ 3ನೇ ಸೌಥ್ ಏಷಿಯನ್ ಚಾಂಪಿಯನ್‌ಶಿಪ್ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ತಂಡದ ಪರವಾಗಿ ಆಟವಾಡಿ ನೇಪಾಳದ ವಿರುದ್ದ 5ಅಂಕ ಮುನ್ನಡೆ ಮೂಲಕ ನಮ್ಮ ದೇಶಕ್ಕೆ ಗೆಲವು ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಇದೆಲ್ಲಾ ನಮ್ಮೂರಿನ ಜನ್ರ ಪ್ರೋತ್ಸಾಹದಿಂದಲೇ ಕಾರಣವಾಯಿತು ಅಂತಾರೆ ಯಲ್ಲಪ್ಪ.

"

ಪ್ರಾಥಮಿಕ ಶಾಲೆ ಹಂತದಲ್ಲಿ ಗುಂಡು ಎಸೆತ, ಚಕ್ರ ಎಸೆತ, ಹ್ಯಾಮರ್ ಥ್ರೂ ಸೇರಿದಂತೆ ಅನೇಕ ಗೇಮ್ಸ್‌ಗಳಲ್ಲಿ ಸಾಧನೆ ಮಾಡಿದ್ದ ಯಲ್ಲಪ್ಪ ಹಂತಹಂತವಾಗಿ ಕಬಡ್ಡಿ ಬಗ್ಗೆ ಹೆಚ್ಚಿನ ಒಲವು ಮೂಡಿಸಿಕೊಂಡರು. ಇದರಿಂದ ಮುಂದೆ ರಾಜ್ಯ, ಅಂತಾರಾಜ್ಯ, ರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ಭಾಗವಹಿಸೋ ಮೂಲಕ ಇಂದು ನೇಪಾಳದಲ್ಲಿ ನಡೆದ 8 ರಾಷ್ಟ್ರಗಳು ಭಾಗವಹಿಸಿದ್ದ 3ನೇ ಸೌತ್ ಏಷಿಯನ್ ಕಬಡ್ಡಿ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾರತದ  ಗೆಲುವಿಗೆ ಯಲ್ಲಪ್ಪ ಕಾರಣನಾಗಿದ್ದಾನೆ.

ಇನ್ನು ಊರಿಗೆ ಬರ್ತಾನೆ ಅನ್ನೋ ಸುದ್ದಿ ಕೇಳಿ ಆತನ ಅಭಿಮಾನಿಗಳು ಬಾಗಲಕೋಟೆ ರೇಲ್ವೆ ಸ್ಟೇಷನ್‌ಗೆ ಬಂದು ಆತನಿಗೆ ಹೂಮಾಲೆ ಹಾಕಿ ಅಪ್ಪಿ, ಶುಭಾಶಯ ತಿಳಿಸಿ, ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಯಲ್ಲಪ್ಪ ಕಬಡ್ಡಿ ಪಂದ್ಯಾವಳಿ ಆಡಲು ತೆರಳುವಾಗಲು ಆರ್ಥಿಕವಾಗಿ ತೊಂದರೆಯಾದಾಗ ಬಾಗಲಕೋಟೆಯ ಸಮಾಜ ಸೇವಕ ರಾಜು ನಾಯ್ಕರ್ ಮತ್ತು ಕೃಷ್ಣಾಜಿ ಅವರು ಸಹಾಯ ಮಾಡಿ ಆತನ ಸಾಧನೆಗೆ ಪ್ರೋತ್ಸಾಹ ನೀಡಿದ್ರು.

ಇದರ ಪ್ರತಿಫಲವಾಗಿ ಇಂದು ಭಾರತ ದೇಶದ ಕಬಡ್ಡಿ ತಂಡವನ್ನು ಪ್ರತಿನಿಧಿಸಿ ನೇಪಾಳದ ವಿರುದ್ದ ಗೆಲವು ಸಾಧಿಸಿರೋ ತಂಡದಲ್ಲಿರೋ ಈತನನ್ನ ಈಗ ಕೊಂಡಾಡದವರೇ ಇಲ್ಲ. ಈ ಮಧ್ಯೆ ಯಲ್ಲಪ್ಪ ಮುಂದೆ ಪ್ರೋ ಕಬಡ್ಡಿ ಆಟ ಆಡಬೇಕೆನ್ನೋ ಹಂಬಲ ಹೊಂದಿದ್ದಾನೆ. ಇನ್ನು ರಾಜ್ಯದ ಪರವಾಗಿ ಬಾಗಲಕೋಟೆಯಿಂದ ಯಲ್ಲಪ್ಪ ಪೂಜಾರಿ ಮತ್ತು ರಾಯಚೂರಿನಿಂದ ಪ್ರಸಾದ ಸಾಗರ ಆಯ್ಕೆಯಾಗಿ ಉತ್ತಮ ಆಟವಾಡಿ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಮೊದಲು ಉಭಯ ಆಟಗಾರರು ಬಾಗಲಕೋಟೆಗೆ ಆಮಿಸುತ್ತಲೇ ಅವರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.

"

ಒಟ್ಟಿನಲ್ಲಿ ಹಳ್ಳಿಯ ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದರೂ, ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ದೇಶವನ್ನ ಪ್ರತಿನಿಧಿಸಿ ಗೆಲವು ತಂದುಕೊಟ್ಟ ಬಾಗಲಕೋಟೆಯ ಯಲ್ಲಪ್ಪ ಮತ್ತು ರಾಯಚೂರಿನ ಪ್ರಸಾದ್ ಸಾಗರ್ ಅವರ ಸಾಧನೆ ಇತರ ಕ್ರೀಡಾಪಟುಗಳಿಗೆ ಮಾದರಿಯಾಗಲಿ, ಇನ್ನಷ್ಟು ಕ್ರೀಡಾಪಟುಗಳು ದೇಶಕ್ಕಾಗಿ ಆಟವಾಡಿ ಮುನ್ನಡೆಯುವಂತಾಗಲಿ ಅನ್ನೋದೆ ನಮ್ಮೆಲ್ಲರ ಆಶಯ.