Asianet Suvarna News Asianet Suvarna News

ಕೊರೋನಾ ಕಾಟ: ಸಿಸಿಸಿ, ಐಸೋಲೇಶನ್‌ ಕೇಂದ್ರಕ್ಕೆ ಕರೆತರೋದೇ ಹರಸಾಹಸ

* ಆತಂಕ, ಊಟೋಪಚಾರದ ವ್ಯವಸ್ಥೆ ಬಗ್ಗೆ ಅಪನಂಬಿಕೆಯಿಂದ ಹಿಂದೇಟು
* ಸೋಂಕಿತರ ಮನವೊಲಿಸುತ್ತಿರುವ ಪಿಡಿಒ, ಗ್ರಾಪಂ ಅಧ್ಯಕ್ಷ, ಸದಸ್ಯರು
* ಕೋವಿಡ್‌ ಸೆಂಟರ್‌ಗಳಿಗೆ ಬರಲು ಒಪ್ಪದ ಸೋಂಕಿತರು 
 

Medical Staff Faces Problems due to Covid Patients in Hubballi grg
Author
Bengaluru, First Published May 26, 2021, 3:23 PM IST

ಮಯೂರ ಹೆಗಡೆ

ಹುಬ್ಬಳ್ಳಿ(ಮೇ.26): ಕೋವಿಡ್‌ ಸರಪಳಿ ತುಂಡರಿಸಲು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ (ಸಿಸಿಸಿ) ಮತ್ತು ಐಸೋಲೇಶನ್‌ ಸೆಂಟರ್‌ಗಳನ್ನೇನೊ ಹೆಚ್ಚಾಗಿ ಸ್ಥಾಪಿಸಲಾಗುತ್ತಿದೆ. ಆದರೆ, ಈಗ ಇಲ್ಲಿಗೆ ಸೋಂಕಿತರನ್ನು ಕರೆತರುವುದೇ ವೈದ್ಯಕೀಯ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ.

ಹುಬ್ಬಳ್ಳಿ ಧಾರವಾಡದಲ್ಲಿ ಈಗಾಗಲೇ 17 ಕೋವಿಡ್‌ ಕೇಂದ್ರಗಳಿವೆ. ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆದಿದೆ. ಗ್ರಾಮೀಣದಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಐಸೋಲೇಶನ್‌ ಸೆಂಟರ್‌ ಸ್ಥಾಪಿಸಿಕೊಳ್ಳಲಾಗುತ್ತಿದೆ. ಕುಂದಗೋಳ, ನವಲಗುಂದ ಹಾಗೂ ಕಲಘಟಗಿ, ಅಣ್ಣಿಗೇರಿ ತಾಲೂಕುಗಳಲ್ಲಿ ಕೋವಿಡ್‌ ಐಸೋಲೇಶನ್‌ ಸೆಂಟರ್‌ಗಳು ಸಿದ್ಧವಾಗುತ್ತಿದ್ದು, ಸೋಮವಾರ ತಲಾ 5ರಿಂದ 10 ಸೆಂಟರ್‌ಗಳು ಸಿದ್ಧಗೊಂಡಿವೆ. ಆದರೆ, ಹುಬ್ಬಳ್ಳಿ ನಗರದಲ್ಲಿ ಸಿಸಿಸಿ ಲಭ್ಯವಿರುವ ಕಾರಣ ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ ಐಸೋಲೇಶನ್‌ ಸೆಂಟರ್‌ಗಳನ್ನು ಈವರೆಗೆ ಮಾಡಿಕೊಂಡಿಲ್ಲ.

"

ಇವುಗಳಲ್ಲಿ ಸೋಂಕಿತರಿಗೆ ಉಚಿತವಾಗಿ ಪೌಷ್ಟಿಕ ಊಟ, ಉಪಾಹಾರ, ವಸತಿ ವ್ಯವಸ್ಥೆ ಇದೆ. ಸೋಂಕಿತರಿಗೆ ಬೇಸರವಾಗದಂತೆ ಯೋಗ, ಆಟದ ಸಾಮಗ್ರಿ, ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ಇತರೆ ಆರೋಗ್ಯ ಸಮಸ್ಯೆಗಳಿಗೂ ಇಲ್ಲಿ ಚಿಕಿತ್ಸೆ ನೀಡುವಂತೆ ಪಿಎಚ್‌ಸಿ ವೈದ್ಯರಿಗೆ ತಿಳಿಸಲಾಗಿದೆ. ಇವರ ಆರೋಗ್ಯದ ಮೇಲೆ ನಿರಂತರವಾಗಿ ನಿಗಾ ಇಡಲು ಸೂಚನೆ ನೀಡಲಾಗಿದೆ. ಆದರೆ, ಈ ಕೇಂದ್ರಗಳಿಗೆ ಬರಲು ಸೋಂಕಿತರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿರುವ ಸೋಂಕಿತರು ನಾವು ಇಲ್ಲಿವರೆಗಿನಂತೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತೇವೆ. ಕೋವಿಡ್‌ ಕಾಳಜಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಇದೆಯೊ ಇಲ್ಲವೊ ಎಂದು ಅನುಮಾನ, ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಜನರಿಗೆ ಬುದ್ಧಿ ಹೇಳುವವರಿಂದಲೇ ನಿಯಮ ಉಲ್ಲಂಘನೆ: ಪಾಲಿಕೆ, ಬಸ್‌, ವೈದ್ಯರಿಗೆ ಬಿತ್ತು ದಂಡ

ಹೀಗಾಗಿ ಗ್ರಾಮೀಣ ಮಟ್ಟದಲ್ಲಿ ಐಸೋಲೇಶನ್‌ ಕೇಂದ್ರ ಸ್ಥಾಪನೆಯಾದ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ದಾಖಲಾಗಿಲ್ಲ. ಪಿಎಚ್‌ಸಿಗಳಲ್ಲಿ ರಾರ‍ಯಟ್‌ ಹಾಗೂ ಆರ್‌ಟಿಪಿಸಿಆರ್‌ ಮೂಲಕ ಪರೀಕ್ಷೆ ಮಾಡಿಸಿಕೊಂಡು ಪಾಸಿಟಿವ್‌ ದೃಢಪಟ್ಟಶೇ. 50ರಷ್ಟು ಜನರೂ ದಾಖಲಾಗಿಲ್ಲ. ಕುಟುಂಬಸ್ಥರು ಕೂಡ ಸೋಂಕಿತರನ್ನು ಮನೆಯಲ್ಲಿ ಇಟ್ಟುಕೊಳ್ಳಲು ಹೆಚ್ಚಿನ ಒಲವು ತೋರುತ್ತಿರುವುದು ಕೂಡ ಇದಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನವೊಲಿಕೆ:

ಐಸೋಲೇಶನ್‌ ಸೆಂಟರ್‌ಗೆ ದಾಖಲಿಸಲು ಹೀಗೆ ಸೋಂಕಿತರ ಹಾಗೂ ಕುಟುಂಬಸ್ಥರನ್ನು ಮನವೊಲಿಸಲು ತಹಸೀಲ್ದಾರ್‌ಗಳು ಹರಸಾಹಸ ಪಡುವಂತಾಗಿದೆ. ನವಲಗುಂದ ತಹಸೀಲ್ದಾರ್‌ ನವೀನ್‌ ಹುಲ್ಲೂರ ಮಾತನಾಡಿ, ಸೋಂಕಿತರು ಸೆಂಟರ್‌ಗಳಿಗೆ ಬರಲು ಒಪ್ಪುತ್ತಿಲ್ಲ. ಅವರನ್ನು ದಾಖಲಿಸಲು ಪಂಚಾಯಿತಿ ಅಧ್ಯಕ್ಷರು, ಪಿಡಿಒಗಳಿಗೆ ಮನವೊಲಿಸಲು ಹೇಳಿದ್ದೇವೆ. ಇವರನ್ನೀಗ ಐಸೋಲೇಶನ್‌ ಸೆಂಟರ್‌ಗೆ ದಾಖಲಿಸಿಕೊಳ್ಳಲು ಗುದ್ದಾಟ ಮಾಡಬೇಕಾಗಿದೆ ಎಂದು ಪರಿಸ್ಥಿತಿ ವಿವರಿಸಿದರು.

ಕುಂದಗೋಳ ತಹಸೀಲ್ದಾರ್‌ ಡಾ. ನಯನಾ ಮಾತನಾಡಿ, ತಾಲೂಕಿನಲ್ಲಿ ಯಲಿವಾಳ, ಬೆಟದೂರು ಹಾಗೂ ಇಂಗಳಗಿಯಲ್ಲಿ ಐಸೋಲೇಶನ್‌ ಸೆಂಟರ್‌ ಸ್ಥಾಪನೆಯಾಗಿದೆ. ಗ್ರಾಪಂ ಸದಸ್ಯರ ಮೂಲಕ ಮನವೊಲಿಸಿ ಸೋಂಕಿತರನ್ನು ಸೆಂಟರ್‌ಗೆ ದಾಖಲಿಸಿದ್ದೇವೆ. ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲೇ ಇರುವುದರಿಂದ ಹೆಚ್ಚಿನವರು ಯಾವುದೇ ಹಿಂಜರಿಕೆ ಇಲ್ಲದೆ ಬಂದು ದಾಖಲಾಗಿದ್ದಾರೆ ಎಂದರು.

ಸೋಂಕಿತರು ಮನೆಗಳಲ್ಲಿಯೆ ದಾಖಲಾದರೆ ಮನೆ ಇತರ ಸದಸ್ಯರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು. ನಿಮ್ಮಲ್ಲಿ ಹರ್ಡ್‌ ಇಮ್ಯುನಿಟಿ ಇದ್ದು ನೀವು ಸೋಂಕಿಂದ ಪಾರಾದ ಹಾಗೆ ಮನೆ ಸದಸ್ಯರಿಗೆ ಆಗದೆ ಅವರು ಗಂಭೀರ ಸ್ಥಿತಿಗೆ ತಲುಪಬಹುದು. ಇದರಿಂದ ಸೋಂಕಿತರ ಸಂಖ್ಯೆಯೂ ಗ್ರಾಮದಲ್ಲಿ ಹೆಚ್ಚಬಹುದು. ಹೀಗಾಗಿ ಐಸೋಲೇಶನ್‌ ಸೆಂಟರ್‌ನಲ್ಲಿ ಸಕಲ ವ್ಯವಸ್ಥೆ ಇದ್ದು ಇಲ್ಲಿಗೆ ಬಂದು ದಾಖಲಾಗಿ ಎಂದು ಹುಬ್ಬಳ್ಳಿ ತಹಸೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios