ಇಲ್ಲಿ ದೇವರಿಗೆ ಮಾಂಸ, ಸಾರಾಯಿಯೇ ನೈವೇದ್ಯ..!
ಅನಾದಿಕಾಲದಿಂದಲೂ ಬಾಡಪೋಲಿ ಮರಾಠಾ ಸಮುದಾಯದ ಕುಟುಂಬದಿಂದ ಆಚರಣೆ| ಉತ್ತರ ಕನ್ನಡ ಜಿfಲಲೆಯ ಜೋಯಿಡಾ ಗ್ರಾಮದಲ್ಲಿ ನಡೆಯುವ ವಿಶಿಷ್ಟ ಆಚರಣೆ| ಪ್ರತಿವರ್ಷ ಆಚರಿಸದೇ ಇದ್ದರೆ ಊರಿನಲ್ಲಿ ದನ-ಕರು, ಬೆಳೆ-ಬೇಸಾಯದಲ್ಲಿ ತೊಂದರೆ ಬರುತ್ತಿದೆ ಎಂಬುದು ಗ್ರಾಮಸ್ಥರ ನಂಬಿಕೆ|
ಜೋಯಿಡಾ(ಏ.19): ಗ್ರಾಮದ ಗಡಿ ದೇವರಿಗೆ ನೈವೇದ್ಯ ರೂಪದಲ್ಲಿ ಮಾಂಸ ಹಾಗೂ ಸಾರಾಯಿ ನೀಡುವ ವಿಶಿಷ್ಟ ಪದ್ಧತಿ ತಾಲೂಕಿನ ಬಾಡಪೋಲಿ ಮರಾಠಾ ಸಮುದಾಯದವರ ಗಡಿಹಬ್ಬದಲ್ಲಿ ಆಚರಣೆಯಲ್ಲಿದೆ.
ಬಾಡಪೋಲಿ ಮರಾಠಾ ಸಮುದಾಯದ ಕುಟುಂಬಗಳು ಅನಾದಿಕಾಲದಿಂದಲೂ ಗಡಿದೇವರಾದ ಸಿದ್ಧನಿಗೆ ಪ್ರತಿವರ್ಷ ಗಡಿಹಬ್ಬದಂದು ಸಾರಾಯಿ ಹಾಗೂ ಕೋಳಿ ಮಾಂಸದ ನೈವೇದ್ಯ ನೀಡುತ್ತಾರೆ. ಗ್ರಾಮದ ಹಿರಿಯರೆಲ್ಲರೂ ಗಡಿಹಬ್ಬದಂದು ದೇವರಿಗೆ ಹರಕೆ ರೂಪದಲ್ಲಿ ಕೋಳಿ ಕೊಟ್ಟು, ಅದರ ಮಾಂಸವನ್ನು ಅಲ್ಲಿಯೇ ಬೇಯಿಸಿ, ದೇವರಿಗೆ ನೈವೇದ್ಯರೂಪದಲ್ಲಿ ನೀಡುವುದು, ಜತೆಯಲ್ಲಿ ಸಾರಾಯಿ ಹಾಗೂ ಸೇಂದಿಯನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸುವುದು ರೂಢಿಯಲ್ಲಿದೆ. ಆನಂತರ ಹಿರಿಯರೆಲ್ಲ ಸೇರಿ ದೇವರ ಸನ್ನಿಧಿಯಲ್ಲಿ ಕುಳಿತು, ದೇವರ ಪ್ರಸಾದ ಎಂಬಂತೆ ಸಾರಾಯಿ ಹಾಗೂ ಕೋಳಿ ಮಾಂಸವನ್ನು ಸ್ವೀಕರಿಸುತ್ತಾರೆ.
ಗ್ರಾಮದ ಗಡಿಯಲ್ಲಿ ಕಾಡಂಚಿನಲ್ಲಿರುವ ಈ ಗಡಿದೇವರ ಹಬ್ಬದಲ್ಲಿ ಗ್ರಾಮದ ಪುರುಷರು ಮಾತ್ರ ಪಾಲ್ಗೊಳ್ಳುತ್ತಾರೆ. ಆದರೆ, ಊರಿಗೆ ಬಂದ ನೆಂಟರಿಷ್ಟರು ದಂಪತಿ ಸಮೇತರಾಗಿ ಮಕ್ಕಳೊಂದಿಗೆ ಈ ದೇವರ ಹಬ್ಬದಲ್ಲಿ ಪಾಳ್ಗೊಳ್ಳುವುದು ವಿಶೇಷ. ಈ ದೇವರಿಗೆ ಬೇಡಿಕೊಂಡ ಹರಕೆಯನ್ನು ನೀಡಿದ ಭಕ್ತಾದಿಗಳು ಅಲ್ಲಿಯೇ ಅಡುಗೆ ಮಾಡಿ, ಎಲ್ಲರೂ ಸೇರಿ ಊಟ ಮಾಡಿ ಮನೆಗೆ ಬರುವ ಪದ್ಧತಿ ರೂಢಿಯಲ್ಲಿದೆ.
ಈ ದೇವಿ ನೈವೇದ್ಯಕ್ಕೆ ಕೇಳೊದು ಮದ್ಯ, ಸಿಗರೇಟ್!
ವರ್ಷಕ್ಕೊಮ್ಮೆ ನಡೆಯುವ ಈ ಗಡಿಹಬ್ಬದಲ್ಲಿ ಊರಿನ ಗಡಿಭಾಗದಲ್ಲಿರುವ ಸಿದ್ಧ ಎನ್ನುವ ದೇವರು ಹಾಗೂ ಅವರ ಪರಿವಾರಕ್ಕೆ ಈ ರೀತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಗ್ರಾಮವನ್ನು, ಬೆಳೆ-ಬೇಸಾಯವನ್ನು ಸಂರಕ್ಷಿಸಿ, ಗ್ರಾಮದ ಜನತೆಗೆ ಸುಖ-ಸಮೃದ್ಧಿಯನ್ನು ನೀಡಿ, ಮಹಾಮಾರಿಯಿಂದ ಸಕಲರನ್ನು ಕಾಪಾಡುವಂತೆ ಬೇಡಿಕೊಳ್ಳುತ್ತಾರೆ. ಹರಕೆ ಹೊತ್ತ ಭಕ್ತರಿಗೆ ದೇವರು ಬೇಡಿಕೆಗೆ ಸ್ಪಂದಿಸುತ್ತಾನೆಂಬುವ ನಂಬಿಕೆ ಗ್ರಾಮಸ್ಥರಲ್ಲಿದೆ.
ತಾಲೂಕಿನಲ್ಲಿ ಮರಾಠಾ ಸಮುದಾಯದಲ್ಲಿ ಇಂತಹ ವಿಶಿಷ್ಟ ಪದ್ಧತಿ ತೀರ ಕಡಿಮೆ ಎಂದೆನಿಸಿದರೂ ಬಾಡಪೋಲಿಯಲ್ಲಿ ಮಾತ್ರ ಅನಾದಿ ಕಾಲದಿಂದ ಇದೆ. ಇದನ್ನು ಪ್ರತಿವರ್ಷ ಆಚರಿಸದೇ ಇದ್ದರೆ ಊರಿನಲ್ಲಿ ದನ-ಕರು, ಬೆಳೆ-ಬೇಸಾಯದಲ್ಲಿ ಯಾವುದಾರೊಂದು ತೊಂದರೆ ಬರುತ್ತಿದೆ ಎನ್ನುವ ಭಯ ಗ್ರಾಮಸ್ಥರಲ್ಲಿದೆ. ಹಾಗಾಗಿ ಪ್ರತಿವರ್ಷವೂ ಈ ದೇವರ ಗಡಿಹಬ್ಬವನ್ನು ತಪ್ಪದೆ ಆಚರಿಸುತ್ತಾ ಬಂದಿದ್ದಾರೆ.
ಗಡಿದೇವರ ಹಬ್ಬ ನಮ್ಮ ಸಂಪ್ರದಾಯಿಕ ಹಬ್ಬವಾಗಿದ್ದು, ಅನಾದಿ ಕಾಲದಿಂದಲೂ ಆಚರಿಸುತ್ತಾ ಬಂದಂತೆ ದೇವರಿಗೆ ಸಾರಾಯಿ, ಕೋಳಿಮಾಂಸದ ನೈವೇದ್ಯ ನೀಡುತ್ತಾ ಬಂದಿರುವ ವಾಡಿಕೆ ಇಂದಿಗೂ ನಾವು ಪಾಲಿಸುತ್ತೇವೆ. ಇದು ನಮ್ಮ ಗ್ರಾಮವನ್ನು ಕಾಯುವ ಗಡಿದೇವರಾಗಿದೆ ಎಂದು ಗ್ರಾಮದ ಧಾರ್ಮಿಕ ಪ್ರಮುಖ ಬಾಬು ಎಸು ದೇಸಾಯಿ ತಿಳಿಸಿದ್ದಾರೆ.