Asianet Suvarna News

'ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿಂಧೂರಿ ಹೊರಿಸಿದ ಆರೋಪ ಸುಳ್ಳು'

  • ಶಾಸಕ ಸಾ.ರಾ. ಮಹೇಶ್‌ ಮತ್ತು ನನ್ನ ನಡುವೆ  ವ್ಯವಹಾರ  ಇಲ್ಲ
  • ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌ ಸ್ಪಷ್ಟನೆ
  • ಸಾ.ರಾ. ಮಹೇಶ್‌ ಮತ್ತು ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌ ವ್ಯವಹಾರದಲ್ಲಿ ಪಾಲುದಾರರು ಎಂದಿದ್ದ ರೋಹಿಣಿ
MDA president HV rajeev rejects IAS Rohini sindhuri Allegations snr
Author
Bengaluru, First Published Jun 18, 2021, 11:58 AM IST
  • Facebook
  • Twitter
  • Whatsapp

ಮೈಸೂರು (ಜೂ.18):  ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌ ಮತ್ತು ನನ್ನ ನಡುವೆ ಒಂದು ರೂಪಾಯಿಯ ವ್ಯವಹಾರವೂ ಇಲ್ಲ ಎಂದು ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌ ಸ್ಪಷ್ಟಪಡಿಸಿದ್ದಾರೆ.

ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಶಾಸಕ ಸಾ.ರಾ. ಮಹೇಶ್‌ ಮತ್ತು ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌ ವ್ಯವಹಾರದಲ್ಲಿ ಪಾಲುದಾರರು ಎಂದಿದ್ದಾರೆ. ನನ್ನ ಹೆಸರು ಪ್ರಸ್ತಾಪಿಸಿರುವ ಕುರಿತು ಅವರನ್ನೇ ಕೇಳಬೇಕು. ಸಿಂಧೂರಿ ಅವರ ಆರೋಪದಿಂದ ನೋವಾಗಿದೆ. ನನ್ನ ಎಲ್ಲಾ ವ್ಯವಹಾರವನ್ನೂ ಕಾನೂನು ಚೌಕಟ್ಟಿನಲ್ಲಿಯೇ ನಡೆಸಿಕೊಂಡು ಬಂದಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ರೋಹಿಣಿ ಸಿಂಧೂರಿಯಿಂದ ನಿಯಮ ಉಲ್ಲಂಘನೆ' ...

ನನ್ನ ಆಪ್ತರು ಹಾಗೂ ಪಕ್ಷದ ಹಿರಿಯರ ಜೊತೆ ಮಾತುಕತೆ ನಡೆಸಿ ಬಳಿಕ ಕಾನೂನಿನ ಹೋರಾಟದ ಬಗ್ಗೆ ಚಿಂತನೆ ನಡೆಸುತ್ತೇನೆ ಅವರು ತಿಳಿಸಿದರು. ನನ್ನ ಬಗ್ಗೆ ಏಕವಚನ ಪದಪ್ರಯೋಗ ಮಾಡಿದ್ದಾರೆ. ಇದು ಅವರ ಸಂಸ್ಕೃತಿ ತೋರಿಸುತ್ತದೆ. ಆ ಕುರಿತು ನಾನು ಮಾತನಾಡುವುದಿಲ್ಲ. ಆದರೆ ನಾನು ಏನು ಎಂಬುದನ್ನು ಹೇಳುವ ಸಮಯ ಇದು. ಕಳೆದ ಹತ್ತು ವರ್ಷಗಳಲ್ಲಿ ಹೇಗಿದ್ದವರು ಹೇಗಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸಾವಿರಾರು ಮನೆ ನಿರ್ಮಿಸಿ ಸರ್ಕಾರದ ದರಕ್ಕಿಂತ ಕಡಿಮೆ ದರದಲ್ಲಿಯೇ ಜನರಿಗೆ ವಸತಿ ಸೌಲಭ್ಯ ನೀಡಿರುವ ತೃಪ್ತಿ ಇದೆ. ಮೈಸೂರು ಹಸಿರೀಕರಣಕ್ಕಾಗಿ ತನ್ನ . 75 ಲಕ್ಷ ಸ್ವಂತ ಹಣದಿಂದ ಗಿಡಗಳನ್ನು ನೆಟ್ಟಿದ್ದೇನೆ ಎಂದು ಅವರು ಹೇಳಿದರು.

'ಸೇವೆಯಿಂದ ರೋಹಿಣಿ ಸಿಂಧೂರಿ ವಜಾ ಮಾಡಿ' ...

ನನ್ನ ಮೇಲೆ ಇಲ್ಲಸಲ್ಲದ ಆರೋಪ ಕೇಳಿ ಬಂದಿದೆ. ಮೈಸೂರಿನ ಜನತೆ ಯಾರೋ ಹೇಳಿದ್ದನ್ನು ನಂಬಿಕೊಳ್ಳುವ ಬದಲಿಗೆ ವಾಸ್ತವವಾಗಿ ನಾನೇನು ಕೆಲಸ ಮಾಡಿದ್ದೇನೆ ಎಂಬುದನ್ನು ಗಮನಿಸಬೇಕು. ಯಾವುದೇ ಜಾತಿ, ಧರ್ಮ, ಮೌಢ್ಯದ ಎಲ್ಲೆ ಮೀರಿ ಕೆಲಸ ಮಾಡಿದ್ದೇನೆ ಎಂದರು.

ಕೇರ್ಗಳ್ಳಿ ಬಡಾವಣೆ- ತನಿಖೆಯಾಗಲಿ :  ಕೇರ್ಗಳ್ಳಿ ಬಡಾವಣೆ ಕುರಿತು ಸಂಪೂರ್ಣ ತನಿಖೆ ಆಗಲಿ. 2013ರವರೆಗೂ ಈ ಬಡಾವಣೆಗೆ ಪರಿಹಾರ ನೀಡಲಾಗಿದೆ. ಭೂಮಿ ಇಲ್ಲದಿದ್ದರೂ ಪರಿಹಾರ ಪಡೆದಿದ್ದಾರೆ. ಇಬ್ಬರು . 21 ಲಕ್ಷ ಪರಿಹಾರದ ಹಣ ಪಡೆದಿದ್ದಾರೆ. ಆದರೆ ಒಟ್ಟು 12 ಎಕರೆಗೆ ಆರ್‌ಟಿಸಿ ಇದ್ದರೂ, ಭೂಮಿ ಇಲ್ಲದಿರುವುದು ಗೊತ್ತಾಗಿದೆ. ಇದರಲ್ಲಿ 7 ಎಕರೆಗೆ ಪರಿಹಾರದ ಹಣ ಪಡೆದಿದ್ದಾರೆ. ಹಾಗಾಗಿ ಈ 2013ರ ಈ ಯೋಜನೆಯ ಸಂಪೂರ್ಣ ತನಿಖೆಗೆ ಆದೇಶ ನೀಡುತ್ತಿದ್ದೇನೆ ಎಂದರು.

ಭೂಮಿ ಇಲ್ಲದಿದ್ದರೂ ಪರಿಹಾರ ಪಡೆದಿದ್ದಾರೆ ಎಂದು ದೂರು ಕೊಟ್ಟಿದ್ದಾರೆ ಎಂದು ನಿರ್ಗಮಿತ ಡಿಸಿಗೆ ದೂರು ಕೊಡಲಾಗಿದೆ. ಹಾಗಾಗಿ ಈ ದೂರಿಗಿಂತ ಮುನ್ನ ನಾನು ನಮ್ಮ ಅಧಿಕಾರಿಗಳು ಈ ನಕ್ಷೆ ಮಾಡಿದ್ದಾರೆ. ಕೇರ್ಗಳ್ಳಿ ಭೂಮಿಯ ನಕ್ಷೆ ಮಾಡಿಸಿದ ಬಳಿಕ ಈ ಸುಳ್ಳು ಮಾಹಿತಿ ಗೊತ್ತಾಗಿದೆ. ಹಾಗಾಗಿ ಇದನ್ನು ಮುಂದೆ ಹೇಗೆ ತನಿಖೆ ಮಾಡಿಸಬೇಕು ಎಂದು ಮುಂದಿನ ಸಭೆಯ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಹಿಂಪಡೆಯಲು ತೀರ್ಮಾನ:  ಇಲ್ಲಿನ 230.05 ಎಕರೆ ಪೈಕಿ ಭೂ ಸ್ವಾಧೀನದಿಂದ ಕೈಬಿಟ್ಟ44.20 ಎಕರೆ ಹೊರತುಪಡಿಸಿ ಉಳಿಕೆ 185.25 ಎಕರೆ ಪೈಕಿ ಭೂ ಪರಿಹಾರ ವಿತರಿಸಿರುವ ಒಟ್ಟು 140.18 ಎಕರೆಯಲ್ಲಿ ಭೌತಿಕವಾಗಿ ಲಭ್ಯವಿಲ್ಲದ 3 ಎಕರೆ ಭೂ ಮಾಲೀಕರಿಗೆ ಭೂ ಪರಿಹಾರ ವತಿರಿಸಿರುವುದು ಕ್ರಮ ಬದ್ಧವಾಗಿಲ್ಲವಾದ್ದರಿಂದ ಈಗಾಗಲೇ ಅನೇಕ ಬಾರಿ ನೊಟೀಸು ನೀಡಲಾಗಿದ್ದು, ಅಕ್ರಮವಾಗಿ ಪಡೆದ ಭೂ ಪರಿಹಾರವನ್ನು ವಸೂಲಾತಿಗೆ ಕ್ರಮ ಜರುಗಿಸಿದ್ದು, ಅಂತೆಯೇ ಭೌತಿಕವಾಗಿ ಲಭ್ಯವಿಲ್ಲದ 4 ಎಕರೆಗೆ ನ್ಯಾಯಾಲಯದಲ್ಲಿ ಠೇವಣೀಕರಿಸಿರುವುದು ಕ್ರಮಬದ್ಧವಲ್ಲವಾದ್ದರಿಂದ ಪ್ರಾಧಿಕಾರದಿಂದ ಈ ಭೂ ಪರಿಹಾರವನ್ನು ನ್ಯಾಯಾಲಯದಿಂದ ಹಿಂದಕ್ಕೆ ಪಡೆಯಲು ತೀರ್ಮಾನಿಸಲಾಗಿದೆ.

ಯಡಹಳ್ಳಿ ಗ್ರಾಮದ ಸರ್ವೇ ನಂ. 69ಕ್ಕೆ ಸಂಬಂಧಿಸಿದಂತೆ ಕಂದಾಯ ದಾಖಲೆಯಲ್ಲಿ ಇರುವಂತೆ ಖರಾಬ್‌ ಭೂಮಿಯೇ ಎಂಬ ಬಗ್ಗೆ ಪರಿಶೀಲಿಸಬೇಕಿದೆ. ಈ ಬಡಾವಣೆ ನಿರ್ಮಿಸುವ ವೇಳೆ ಖರಾಬ್‌ ಭೂಮಿ ಬಳಸಿ ಬಡಾವಣೆ ರಚಿಸಲಾಗಿರುವ ಕುರಿತು ಪರಿಶೀಲಿಸಿ ವರದಿ ಈಡಲು ಪ್ರಾಧಿಕಾರದಿಂದ, ನಗರ ಭೂ ಮಾಪನ ಯೋಜನಾಧಿಕಾರಿ ಕಚೇರಿ ಮತ್ತು ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ ಅವರನ್ನು ಒಳಗೊಂಡ ತಂಡ ರಚಿಸಿ ಜೂ. 19 ರಂದು ಜಂಟಿ ಪರಿಶೀಲನಾ ಕಾರ್ಯ ನಡೆಸಲಾಗುವುದು.

ಲಿಂಗಾಂಬುದಿ ಪಾಳ್ಯದ ಸರ್ವೇ ನಂ. 66ಮತ್ತು 68ಕ್ಕೆ ಸಂಬಂಧಿಸಿದಂತೆ ಸರ್ಕಾರಿ ಗೋ ಮಾಳ ಒತ್ತುವರಿಯಾಗಿದೆಯೇ ಎಂಬುದರ ಕುರಿತು ವಸ್ತುನಿಷ್ಠ ವರದಿ ನೀಡಲು ಎಂಡಿಎ ವತಿಯಿಂದ ನಗರ ಭೂ ಮಾಪನ ಯೋಜನಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ ಅವರನ್ನೊಳಗೊಂಡ ತಂಡ ರಚಿಸಿ, ಜೂ. 18 ರಂದು ಜಂಟಿ ಪರಿಶೀಲನೆ ನಡೆಸಲಾಗುವುದು. ಅಂದೆಯೇ ಸರ್ವೇ ನಂ. 124/2ರಲ್ಲಿ 1.39 ಎಕರೆಗೆ ಸಂಬಂಧಿಸಿದ ವಸತಿ ಉದ್ದೇಶಕ್ಕೆ 2016ರಲ್ಲಿ ಭೂ ಪರಿವರ್ತನೆ ಆದ ಆದೇಶವನ್ನು 2021ರ ಜೂ. 4 ರಂದು ಜಿಲ್ಲಾಧಿಕಾರಿ ರದ್ದುಪಡಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲು ಪ್ರಾಧಿಕಾರದ ಸಭೆಗೆ ಮಂಡಿಸುವುದಾಗಿ ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂಡಿಎ ಆಯುಕ್ತ ಡಾ.ಡಿ.ಬಿ. ನಟೇಶ್‌, ಸದಸ್ಯರಾದ ಲಕ್ಷ್ಮೀದೇವಿ, ಕೆ. ಮಾದೇಶ್‌ ಮೊದಲಾದವರು ಇದ್ದರು.

Follow Us:
Download App:
  • android
  • ios