Chamarajanagara: ದೇವರೇ ನನ್ನ ಮೂರ್ತಿಯೇ ನನ್ನ ಕುತ್ತಿಗೆಗೆ ತಾಳಿ ಕಟ್ಟಲಿ: ದೇವರ ಹುಂಡಿಯಲ್ಲಿ ವಿಚಿತ್ರ ಹರಕೆ ಪತ್ರ
ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು! ಎಂದು ಪ್ರೇಮಿಯೊಬ್ಬಳು ದೇವರಿಕೆ ಹರಕೆ ಕಟ್ಟಿಕೊಂಡು ಹುಂಡಿಗೆ ಚೀಟಿಯನ್ನು ಹಾಕಿರುವುದು ಬೆಳಕಿಗೆ ಬಂದಿದೆ.
ಚಾಮರಾಜನಗರ (ಡಿ.30): ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು! ಎಂದು ಪ್ರೇಮಿಯೊಬ್ಬಳು ದೇವರಿಕೆ ಹರಕೆ ಕಟ್ಟಿಕೊಂಡು ಹುಂಡಿಗೆ ಚೀಟಿಯನ್ನು ಹಾಕಿರುವುದು ಬೆಳಕಿಗೆ ಬಂದಿದೆ.
ಪ್ರೀತಿ, ಪ್ರೇಮ ಕುರುಡು ಎಂದು ಹೇಳುವುದು ಸಾಮಾನ್ಯ. ಆದರೆ, ಈಗ ಪ್ರೀತಿಯ ಕುರಿತಾಗಿ ದೇವರಲ್ಲಿ ಹರಕೆ ಹೊತ್ತು ಪ್ರೀತಿಸಿದವನನ್ನೇ ತಾನು ಮದುವೆ ಆಗಬೇಕು ಎಂಬ ನಿಟ್ಟಿನಲ್ಲಿ ಪ್ರೇಯಸಿಯೊಬ್ಬರು ಹೆಣ್ಣು ದೇವರ ಹುಂಡಿಗೆ ತನ್ನ ಪ್ರಯತಮನೇ ತನ್ನ ಕುತ್ತಿಗೆಗೆ ತಾಳಿ ಕಟ್ಟಬೇಕು ಎಂದು ಪತ್ರ ಬರೆದಿದ್ದಾಳೆ. ಇನ್ನು ಹುಡುಗಿ ತನ್ನ ಹೆಸರು ಮತ್ತು ಬೇರೆ ಯಾವುದೇ ಮಾಹಿತಿಯನ್ನು ಹೆಚ್ಚು ಬಹಿರಂಗ ಮಾಡಿಲ್ಲ. ಆದರೆ, ತನ್ನ ಪ್ರಿಯಕರನ ಹೆಸರನ್ನು ಉಲ್ಲೇಖ ಮಾಡಿದ್ದಾಳೆ. ಆದರೆ, ಇಂತಹ ಪ್ರೀತಿಯನ್ನು ಮುಗ್ಧ ಪ್ರೀತಿ ಎನ್ನಬೇಕೋ ಅಥವಾ ವಿಚಿತ್ರ ಪ್ರೀತಿ ಎನ್ನಬೇಕೋ ತಿಳಿಯುತ್ತಿಲ್ಲ.
ಪತ್ರದಲ್ಲೇನಿದೆ ಒಮ್ಮೆ ನೋಡಿ: ಚಾಮರಾಜನಗರ ತಾಲೋಕಿನ ಮುಕ್ಕಡಹಳ್ಳಿಯ ಮಾಯಮ್ಮದೇವಮ್ಮ ದೇವತೆಗೆ ಪ್ರೇಮಿಯೊಬ್ಬಳ ಹರಕೆ ಚೀಟಿ ಲಭ್ಯವಾಗಿದೆ. ಹುಂಡಿಯ ಹಣ ಎಣಿಕೆ ಸಂದರ್ಭದಲ್ಲಿ ಪ್ರೇಮಿಯ ಚೀಟಿ ಲಭ್ಯವಾಗಿದೆ. ತನ್ನ ಹರಕೆಯ ಚೀಟಿಯಲ್ಲಿ 'ನನ್ನ ಮೂರ್ತಿನ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರು ತಾಳಿ ಕಟ್ಟಬಾರದು' ಬರೆದು ಹುಂಡಿಗೆ ಚೀಟಿಯನ್ನು ಹಾಕಿದ್ದಾಳೆ. ಇನ್ನು ಇತ್ತೀಚೆಗೆ ದೇವರೆ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಮೊನ್ನೆ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಲ್ಲಿ ಮತ್ತೊಂದು ರೀತಿಯ ಪತ್ರ ಲಭ್ಯವಾಗಿದೆ.
ಶಿವನೇ ನನಗೆ ಹುಡುಗಿ ಕರುಣಿಸು, ಶ್ರೀ ಚಾಮರಾಜೇಶ್ವರನಿಗೆ ಪತ್ರ ಬರೆದು ಹುಂಡಿಗೆ ಹಾಕಿದ ಭೂಪ!
ಒಂದು ವಾರದ ಹಿಂದೆ ಹುಡುಗಿ ಕರುಣಿಸುವಂತೆ ಪತ್ರ: ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ವೇಳೆ ಚಿತ್ರ ವಿಚಿತ್ರ ಪತ್ರಗಳು ಸಿಕ್ಕಿದ್ದು, ರಾಜೇಂದ್ರ ಉಪ್ಪಾರ ಬೀದಿ ಎಂದು ಬರೆದಿರುವ ಪತ್ರದಲ್ಲಿ ನನಗೆ ಹುಡುಗಿ ಕರುಣಿಸು ಎಂದು ಉಲ್ಲೇಖಿಸಲಾಗಿದೆ. ದೇವರ ರಾಜ್ಯವು ಸಮೀಪಿಸಿದೆ ಎಂಬ ಒಕ್ಕಣೆಯುಳ್ಳ ಮತ್ತೊಂದು ಪತ್ರವೂ ಪತ್ತೆಯಾಗಿದೆ. ಮನುಷ್ಯ ದೇವರಿಗೆ ಅವಿಧೇಯನಾಗಿ ನಡೆದುಕೊಂಡು ದೇವರ ಪ್ರೀತಿ ಕಳೆದು ಕೊಂಡ ಎಂದು ಪತ್ರದಲ್ಲಿ ಬರೆದಿರುವುದು ಕಂಡುಬಂದಿತ್ತು.
ಹುಂಡಿಯಲ್ಲಿ ಪ್ರೇಮಪತ್ರ, ಯುವತಿ ಫೋಟೋ!: ಇನ್ನು ಪ್ರೇಮ ಪತ್ರದ ಜೊತೆಗೆ ತನ್ನ ಹುಡುಗಿಯ ಪೋಟೋವನ್ನು ಕೂಡ ಹುಂಡಿಯಲ್ಲಿ ಹಾಕಿದ್ದನು. ಚಾಮರಾಜನಗರ ತಹಶಿಲ್ದಾರ್ ಬಸವರಾಜ್ ನೇತೃತ್ವದಲ್ಲಿ ಅರ್ಚಕ ರಾಮಕೃಷ್ಣ ಭಾರದ್ವಜ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್ ಹಾಗೂ ಇನ್ನಿತರರು 7 ತಾಸು ಹುಂಡಿ ಎಣಿಕೆ ಕಾರ್ಯ ನಡೆಸಿದ್ದು 7,61,641 ರು. ಹಣ ಸಂಗ್ರಹವಾಗಿದೆ. ಸರಿಸುಮಾರು ಒಂದೂವರೆ ವರ್ಷಗಳ ಬಳಿಕ ಎಣಿಕೆ ಕಾರ್ಯ ಗುರುವಾರ ನಡೆದಿರುವುದರಿಂದ ಇದುವರೆಗೆ ಸಂಗ್ರಹವಾಗಿದ್ದ ಅತಿಹೆಚ್ಚು ಹಣ ಇದಾಗಿದೆ. ದೇವಾಲಯ ಜೀರ್ಣೋದ್ಧಾರ ಹಾಗೂ ರಥೋತ್ಸವ ನಡೆದಿದ್ದರಿಂದ ಇಷ್ಟುಹಣ ಸಂಗ್ರಹವಾಗಿದೆ ಎನ್ನಲಾಗಿತ್ತು.