ಲೋಕಸಭೆ ಚುನಾವಣೆ 2024: ಪ್ರಹ್ಲಾದ ಜೋಶಿ ಬದಲಾವಣೆಗೆ ಲಿಂಗಾಯತ ಮಠಾಧೀಶರ ಪಟ್ಟು

ರಾಜಕಾರಣಿಗಳು ತಿಳಿದು ರಾಜಕಾರಣ ಮಾಡಬೇಕು ಹೊರತು ಇತರರನ್ನು ತುಳಿದು ರಾಜಕಾರಣ ಮಾಡಬಾರದು. ಧಾರವಾಡ ಮತಕ್ಷೇತ್ರಕ್ಕೆ ಕೇಂದ್ರ ಸಚಿವರಿಗೆ ಟಿಕೆಟ್ ಘೋಷಣೆ ಆಗಿದೆ. ಅದನ್ನು ಬದಲಾವಣೆ ಮಾಡಬೇಕು, ಬೇರೆ ಕ್ಷೇತ್ರ ಇಲ್ಲವೇ ಅವರನ್ನು ಪಕ್ಷದ ಕೆಲಸಕ್ಕೆ ಬಳಸಬೇಕು ಎಂದು ಒತ್ತಾಯಿಸಿದ ಸ್ವಾಮೀಜಿಗಳು 

Mathadishas Urge for Do not Give BJP Ticket to Pralhad Joshi in Lok Sabha Election 2024 grg

ಹುಬ್ಬಳ್ಳಿ(ಮಾ.28): ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲಿಂಗಾಯತ ಮತ್ತು ಉಳಿದ ಸಮಾಜವನ್ನು ತುಳಿಯುತ್ತಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಅವರಿಗೆ ನೀಡಿರುವ ಟಿಕೆಟ್‌ನ್ನು ಬಿಜೆಪಿ ವರಿಷ್ಠರು ಮಾ. 31ರೊಳಗೆ ಬದಲಾಯಿಸಬೇಕು. ಇಲ್ಲದಿದ್ದಲ್ಲಿ ಏ. 2ರಂದು ನಮ್ಮ ನಿರ್ಧಾರ ಪ್ರಕಟಿಸಬೇಕಾಗುತ್ತದೆ ಎಂದು ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಶ್ರೀ ಎಚ್ಚರಿಕೆ ನೀಡಿದ್ದಾರೆ. ಅವರು ಬುಧವಾರ ಇಲ್ಲಿನ ಮೂರುಸಾವಿರಮಠದ ಆವರಣದಲ್ಲಿ ವಿವಿಧ ಮಠಾಧೀಶರೊಂದಿಗೆ ಚಿಂತನ ಮಂಥನ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು. ಚಿಂತನ ಮಂಥನ ಸಭೆಯಲ್ಲಿ ಬರೋಬ್ಬರಿ ವಿವಿಧ ಜಿಲ್ಲೆಗಳ 40ಕ್ಕೂ ಹೆಚ್ಚು ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಕಳೆದ ಕೆಲ ದಿನಗಳಿಂದ ದಿಂಗಾಲೇಶ್ವರ ಶ್ರೀಗಳು ಧಾರವಾಡ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಗುಸು ಗುಸು ಶುರುವಾಗಿತ್ತು. ಭಕ್ತರು ಒತ್ತಡ ಹಾಕುತ್ತಿದ್ದಾರೆ ಎಂದು ಶ್ರೀಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಮಠಾಧೀಶರ ಚಿಂತನ ಮಂಥನ ಸಭೆಯನ್ನು ದಿಂಗಾಲೇಶ್ವರ ಶ್ರೀಗಳು ಕರೆದಿದ್ದರು. ಸಭೆಯಲ್ಲಿ ಸಾಮಾಜಿಕ, ರಾಜಕೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದರು. ಆದರೆ ಸಭೆಯಲ್ಲಿ ಬರೀ ರಾಜಕೀಯವಾಗಿ ಮಾತ್ರ ಚರ್ಚೆ ನಡೆದಿದೆ ಎಂಬುದು ಸ್ಪಷ್ಟ.

ಎನ್‌ಡಿಆರ್‌ಎಫ್ ಹಣಕ್ಕಾಗಿ ಸುಪ್ರೀಂಗೆ ಹೋಗಿರುವುದು ರಾಜಕೀಯ ತಂತ್ರಗಾರಿಕೆ: ಬೊಮ್ಮಾಯಿ

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಜೋಶಿ ಅವರಿಗೆ ಅಧಿಕಾರ ಮತ್ತು ಸಂಪತ್ತಿನ ಮದವೇರಿದೆ, ಲಿಂಗಾಯತ, ಕುರುಬ ಸೇರಿದಂತೆ ಎಲ್ಲ ಸಮುದಾಯವನ್ನು ತುಳಿದಿದ್ದಾರೆ. ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ. ನಮ್ಮ ವಿರೋಧ ಅವರ ವ್ಯಕ್ತಿತ್ವಕ್ಕೆ ಹೊರತು ಪಕ್ಷ ಅಥವಾ ಸಮಾಜಕ್ಕೆ ಅಲ್ಲ. ಶ್ರೀಮಠದಲ್ಲಿ ನಡೆದ ಚಿಂಥನ ಮಂತನ ಸಭೆಯಲ್ಲಿ ಮಠಾಧಿಪತಿಗಳು ಸೇರಿ ಈ ನಿರ್ಣಯ ಕೈಗೊಳ್ಳಲಾಗಿದೆ. ಬಿಜೆಪಿ ಹೈಕಮಾಂಡ್‌ ಪ್ರಹ್ಲಾದ ಜೋಶಿ ಅವರನ್ನು ಮಾ. 31ರೊಳಗೆ ಬದಲಿಸಿ ಬೇರೊಬ್ಬರಿಗೆ ಟಿಕೆಟ್‌ ಘೋಷಿಸಬೇಕು. ಇಲ್ಲದಿದ್ದಲ್ಲಿ ಏ. 2ರಂದು ಮತ್ತೊಮ್ಮೆ ಲಿಂಗಾಯತ ಸ್ವಾಮೀಜಿಗಳ ಸಭೆ ಕರೆದು ನಮ್ಮ ಮುಂದಿನ ನಡೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ರಾಜಕಾರಣಿಗಳು ತಿಳಿದು ರಾಜಕಾರಣ ಮಾಡಬೇಕು ಹೊರತು ಇತರರನ್ನು ತುಳಿದು ರಾಜಕಾರಣ ಮಾಡಬಾರದು. ಧಾರವಾಡ ಮತಕ್ಷೇತ್ರಕ್ಕೆ ಕೇಂದ್ರ ಸಚಿವರಿಗೆ ಟಿಕೆಟ್ ಘೋಷಣೆ ಆಗಿದೆ. ಅದನ್ನು ಬದಲಾವಣೆ ಮಾಡಬೇಕು, ಬೇರೆ ಕ್ಷೇತ್ರ ಇಲ್ಲವೇ ಅವರನ್ನು ಪಕ್ಷದ ಕೆಲಸಕ್ಕೆ ಬಳಸಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ಮಾಜಿ ಮುಖ್ಯಮಂತ್ರಿಗಳಿಗೆ ಬೇರೆ ಕ್ಷೇತ್ರ ನೀಡಿದಂತೆ, ಕಳೆದ 4 ಚುನಾವಣೆಯಲ್ಲಿ ಲಿಂಗಾಯತರೆಲ್ಲರೂ ಜೋಶಿ ಅವರ ಬೆನ್ನಿಗೆ ನಿಂತು ಗೆಲ್ಲಿಸಿ ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಆ ಉಪಕಾರಕ್ಕೆ ಜೋಶಿ ಈ ಬಾರಿ ಕ್ಷೇತ್ರ ತ್ಯಾಗ ಮಾಡಲಿ. ಲಿಂಗಾಯತ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವೇ?. ಆದರೆ ಬ್ರಾಹ್ಮಣರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಲಿಂಗಾಯತರನ್ನು ಚುನಾವಣೆಯಲ್ಲಿ ನಿಲ್ಲಿಸಿ ಆರಿಸಿ ತರಲಿ ಎಂದು ಸವಾಲು ಹಾಕಿದರು.

ಐಟಿ, ಇಡಿ ಇತರ ದಾಳಿಯ ದಾಳ ಮತ್ತು ಭಯ ಉಂಟು ಮಾಡಿ ಯಾರು ಇವರ ವಿರುದ್ಧ ಮಾತನಾಡದಂತೆ ಮಾಡುತ್ತಿದ್ದಾರೆ. ಸರ್ಕಾರಿ, ಅರೆಸರ್ಕಾರಿ ಕಚೇರಿಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಜೋಶಿ ತಮ್ಮ ಹಿಂಬಾಲಕರನ್ನು ಸೇರಿಸಿ ಪ್ರಾಮಾಣಿಕರನ್ನು ನಾಶ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಮರಳಿ ಪಕ್ಷಕ್ಕೆ ಹೋದಾಗ ಶುಭಾಶಯ ಹೇಳಲು ಮನಸ್ಸಿದ್ದರೂ ಹಿಂಬಾಲಕರು ಇವರ ಭಯಕ್ಕೆ ಯಾರೂ ಹೋಗುತ್ತಿಲ್ಲ. ಅಷ್ಟೊಂದು ಭಯ ಸೃಷ್ಟಿಸಿದ್ದಾರೆ.

ನಾವು ಈ ಹಿಂದೆ ಕೆಲಸದ ನಿಮಿತ್ತ ಕರೆ ಮಾಡಿದಾಗ ನಿಮ್ಮ ಸಮಾಜದ ನಾಯಕರು ಇಲ್ಲವೇ ಎಂದು ಹೇಳಿ ಅವಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಂದ ದೂರ ಉಳಿದು ಮೂರು ವರ್ಷ ಆಯಿತು. ಸಭೆಗಳಲ್ಲಿ ಭೇಟಿಯಾಗಿದ್ದ ವೇಳೆಯೂ ಅವರನ್ನು ಮಾತನಾಡಿಸಿಲ್ಲ. ಸ್ವಾಮೀಜಿ ವಿರೋಧ ಬೇಡ ಎಂದು ಜೋಶಿ ಅವರ ಸಹೋದರನಿಗೆ ಸಲಹೆ ಕೊಟ್ಟರೆ ಅಂತಹ ಸ್ವಾಮೀಜಿ ನಮ್ಮ ಮನೆಯ ಮುಂದೆ ಪ್ರತಿದಿನವೂ ನೂರಾರು ಜನರು ತಿರುಗಾಡುತ್ತಾರೆ ಎಂದು ಹೇಳುವ ಮೂಲಕ ಸಮಾಜದ ಶ್ರೀಗಳನ್ನು ಅವಮಾನಿಸಿದ್ದಾರೆ ಎಂದು ಕಿಡಿಕಾರಿದರು.

ಕಲಘಟಗಿಯಲ್ಲಿ ಪಕ್ಷದ ಪ್ರಚಾರದ ಕಾರ್ಯಾಲಯ ಉದ್ಘಾಟನೆಗೆ ಸುಳ್ಳು ಹೇಳಿ ನಮ್ಮ ಸ್ವಾಮೀಜಿಗಳನ್ನು ಕರೆದು ತೇಜೋವಧೆ ಮಾಡಿ, ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರೊಂದಿಗೆ ಹಲವು ಶ್ರೀಗಳು ಜೋಶಿ ಅವರ ಪುತ್ರಿ ವಿವಾಹ ಕಾರ್ಯಕ್ರಮಕ್ಕೆ ಕರೆದು ಕನಿಷ್ಠ ರೀತಿಯಲ್ಲಿ ನಡೆದು, ಭಿಕ್ಷುಕರ ಹಾಗೆ ನಡೆಸಿಕೊಂಡಿದ್ದಾರೆ ಎಂದು ಹರಿಹಾಯ್ದ ಶ್ರೀಗಳು, ನಾವು ಯಾವುದೇ ಪಕ್ಷದ ವಿರೋಧಿಗಳಲ್ಲ, ವ್ಯಕ್ತಿಯ ವ್ಯಕ್ತಿತ್ವದ ವಿರೋಧಿಗಳು, ಅದಕ್ಕೆ ಕಾರಣ ಅವರ ನಡೆ, ನುಡಿಗಳು. ವ್ಯಕ್ತಿ ಪ್ರಜ್ಞೆಗಿಂತ ಸಮಷ್ಟಿ ಪ್ರಜ್ಞೆ ನಮ್ಮದಾಗಿದೆ ಎಂದರು.

ಕರ್ನಾಟಕದಿಂದ ಗೆದ್ದ ಮೊದಲ ಮಹಿಳಾ ಎಂಪಿ ಸರೋಜಿನಿ ಮಹಿಷಿ..!

ಸಭೆಯಲ್ಲಿ ಮೂರುಸಾವಿರಮಠದ ಡಾ. ಗುರುಸಿದ್ದರಾಜಯೋಗಿಂದ್ರ ಶ್ರೀ, ಮುರುಘಾಮಠದ ಮಲ್ಲಿಕಾರ್ಜುನ ಶ್ರೀ, ರುದ್ರಾಕ್ಷಿಮಠದ ಬಸವಲಿಂಗ ಶ್ರೀ, ವಿಜಯಪುರ ಚೌಕಿಮಠದ ಕಾಶಿಲಿಂಗ ಶ್ರೀ, ನಂದಿಮಠದ ವೀರಸಿದ್ಧ ಶ್ರೀ, ಸಿದ್ಧಲಿಂಗ ಶಿವಾಚಾರ್ಯರು, ಕುಕನೂರಿನ ಡಾ. ಮಹಾದೇವ ಶ್ರೀ, ಯಲಬುರ್ಗಾದ ಬಸವಲಿಂಗ ಶಿವಾಚಾರ್ಯರು, ಬಾಗಲಕೋಟೆ ಕಸ್ತೂರಿಮಠದ ಓಹಿಲೇಶ್ವರ ಶ್ರೀ, ಹಾವೇರಿ ಹೊಸಮಠದ ಶಾಂತಲಿಂಗ ಶ್ರೀ, ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣ ಅಜ್ಜನವರು, ಬ್ಯಾಹಟ್ಟಿಯ ಮರುಳಸಿದ್ಧ ಶಿವಾಚಾರ್ಯರು, ಗಂಗಾವತಿ ಕಲ್ಮಠದ ಕೊಟ್ಟೂರೇಶ್ವರ ಶ್ರೀಗಳು ಸೇರಿದಂತೆ 40ಕ್ಕೂ ಹೆಚ್ಚು ಶ್ರೀಗಳು ಪಾಲ್ಗೊಂಡಿದ್ದರು.

ಬಿಎಸ್‌ವೈರನ್ನು ಕೆಳಗಿಳಿಸಿದ್ದು ಯಾರು ಎನ್ನುವುದು ಗೊತ್ತಿದೆ

ಬಿ.ಎಸ್‌. ಯಡಿಯೂರಪ್ಪರನ್ನು ಪಿತೂರಿ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಫಕೀರ ದಿಂಗಾಲೇಶ್ವರ ಶ್ರೀಗಳು ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಎಸ್‌ವೈ ಅವರಿಗೆ ವಯಸ್ಸಾಗಿದೆ ಎಂಬ ಸೌಜನ್ಯ ಇಲ್ಲದೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ತಾವು ಮುಖ್ಯಮಂತ್ರಿಯಾಗಬೇಕೆಂದು ಓಡಾಡಿದರು. ಯಾವಾಗ ಮಠಾಧೀಶರೆಲ್ಲ ಒಟ್ಟಾಗಿ ಯಡಿಯೂರಪ್ಪರ ಬೆನ್ನಿಗೆ ನಿಂತರೋ ಆಗ ಜೋಶಿ ತಂತ್ರ ಫಲ ನೀಡಲಿಲ್ಲ. ಜೋಶಿ ಮುಖ್ಯಮಂತ್ರಿಯಾಗಬೇಕೆಂದು ಸೂಟ್‌ ಹೊಲಿಸಿಕೊಂಡು ಸಿದ್ಧರಾಗಿದ್ದರು. ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧವಲ್ಲ ಜೋಶಿ ವಿರುದ್ಧ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios