ಬೆಂಗಳೂರು(ಸೆ.06): ರಾಜ್ಯದ ಎಂಟು ಆನೆ ಶಿಬಿರಗಳಲ್ಲಿನ ಆನೆಗಳ ಸರಣಿ ಸಾವಿನ ಪ್ರಕರಣದ ಕುರಿತು ಅಧ್ಯಯನ ನಡೆಸಿ ವರದಿ ನೀಡುವ ಬಗ್ಗೆ ಹೈಕೋರ್ಟ್ ಸರ್ಕಾರದ ನಿಲುವು ಕೇಳಿದೆ.

ಅಧ್ಯಯನಕ್ಕೆ ತಜ್ಞರ ಅಥವಾ ತಜ್ಞ ಸಂಸ್ಥೆಯನ್ನು ನೇಮಿಸುವ ಬಗ್ಗೆ ಹೈಕೋರ್ಟ್‌ ಸರ್ಕಾರದ ನಿಲುವು ಕೇಳಿದ ವಕೀಲ ಎನ್‌.ಪಿ.ಅಮೃತೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಹಾಗೂ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ಪೀಠ, ಸೆ.11ರೊಳಗೆ ನಿಲುವು ತಿಳಿಸಲು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.

ಆನೆ ಸಾವುಗಳ ಬಗ್ಗೆ ಶಂಕೆ:

ಅರ್ಜಿದಾರ ಎನ್‌.ಪಿ.ಅಮೃತೇಶ್‌ ವಾದ ಮಂಡಿಸಿ, ಕಳೆದ ವಾರ ಸಕ್ರೆಬೈಲು ಶಿಬಿರದಲ್ಲಿ ಒಂದು ಆನೆ ಸಾವನ್ನಪ್ಪಿದೆ. ಆನೆ ಶಿಬಿರಗಳ ಕಡತಗಳನ್ನು ವೀಕ್ಷಿಸಿದಾಗ ನ್ಯಾಯಾಲಯದ ಆದೇಶದ ನಂತರ ಆನೆಗಳ ಸ್ಥಿತಿ ಕುರಿತು ಒಂದೇ ಪೆನ್ನಿನಲ್ಲಿ ಒಂದೇ ರೀತಿಯಲ್ಲಿ ಬರೆಯಲಾಗಿದೆ. ಎಲ್ಲವೂ ಒಂದೇ ಮಾದರಿಯಲ್ಲಿದೆ ಎಂದು ದೂರಿದರು.

ಆನೆ ಶಿಬಿರಕ್ಕೆ ತಲಾ ಒಬ್ಬ ಪಶು ವೈದ್ಯರು:

ಸರ್ಕಾರಿ ವಕೀಲರು ವಾದಿಸಿ, ನ್ಯಾಯಾಲಯದ ಆದೇಶದಂತೆ ಆನೆ ಶಿಬಿರಕ್ಕೆ ತಲಾ ಒಬ್ಬ ಪಶು ವೈದ್ಯರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆ ಬಗ್ಗೆ ಪಶು ವೈದ್ಯಕೀಯ ಇಲಾಖೆ ಜೊತೆಗೆ ಸಮಾಲೋಚನೆ ನಡೆಸಲಾಗುತ್ತಿದೆ. ಒಂದು ತಿಂಗಳು ಕಾಲಾವಕಾಶ ನೀಡಿದರೆ ಅಗತ್ಯ ಪಶುವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿ, ಇತ್ತೀಚೆಗೆ ಮೃತಪಟ್ಟಒಂದು ಆನೆಯ ಮರಣೋತ್ತರ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಸರ್ಕಾರಕ್ಕೆ ಕೋರ್ಟ್ ಸೂಚನೆ:

ಆಗ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿ ಸಲ್ಲಿಸಿದ ಮೇಲೆ ಎರಡು ಆನೆಗಳು ಮೃತಪಟ್ಟಿವೆ. ಇದೊಂದು ಗಂಭೀರ ವಿಚಾರ. ಆ ಕುರಿತು ಸ್ವತಂತ್ರ ಸಂಸ್ಥೆ ಅಥವಾ ತಜ್ಞರು ಶಿಬಿರಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದರೆ, ಅದನ್ನು ಆಧರಿಸಿ ಏನೇನು ಕ್ರಮ ಕೈಗೊಳ್ಳಬೇಕು ಎಂದು ಆದೇಶ ನೀಡಬಹುದು ಎಂದು ಸರ್ಕಾರಕ್ಕೆ ಸೂಚಿಸಿತು.

ಶಿವಮೊಗ್ಗ: ಗಾಂಧಿ ಪಾರ್ಕ್‌ನಲ್ಲಿ ಹೆಣ್ಮಕ್ಳ 'ಎಣ್ಣೆ ಪಾರ್ಟಿ'

ಆಹಾರ, ನೀರು ಮತ್ತು ಔಷಧ ವ್ಯವಸ್ಥೆ ಇಲ್ಲದೆ ಮೈಸೂರು, ಮಡಿಕೇರಿ, ಶಿವಮೊಗ್ಗ ಸೇರಿ ರಾಜ್ಯದ ಆನೆ ಶಿಬಿರಗಳಲ್ಲಿ ಆನೆಗಳು ಸಾವನ್ನಪ್ಪತ್ತಿವೆ. ಆ ಬಗ್ಗೆ ನಿಖರ ಕಾರಣ ತಿಳಿಯಲು ಉನ್ನತ ಮಟ್ಟದ ಸಮಿತಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.