ಮಸ್ಕಿ ಉಪ ಚುನಾವಣೆ ಘೋಷಣೆ ತಡೆ| ಕ್ಷೇತ್ರದಲ್ಲಿ ತಳಮಳ ಶುರು| ರಾಜಕೀಯ ಮುಖಂಡರಲ್ಲಿ ಹೆಚ್ಚಿದ ಕುತೂಹಲ| ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ಬಸನಗೌಡರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಭೇಟಿ ಮಾಡಿದ ಮಸ್ಕಿ ಕ್ಷೇತ್ರದ ಬಿಜೆಪಿ ಮುಖಂಡ ಆರ್.ಬಸನಗೌಡ ತುರವಿಹಾಳ |
ರಾಯಚೂರು:(ಸೆ.23) ರಾಜ್ಯದಲ್ಲಿ ನಡೆಯಬೇಕಾಗಿದ್ದ 17 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮಸ್ಕಿ ಹಾಗೂ ಬೆಂಗಳೂರಿನ ಆರ್.ಆರ್. ನಗರ ಹೊರತು ಪಡಿಸಿ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗವು ಘೋಷಣೆ ಮಾಡಿದೆ. ಇದರ ಬೆನ್ನಹಿಂದೆಯೇ ಮಸ್ಕಿ ವಿಧಾನಸಭಾ ಕ್ಷೇತ್ರಗಳ ರಾಜಕೀಯ ಪಕ್ಷಗಳು, ಕಾರ್ಯಕರ್ತರು ಹಾಗೂ ಮತದಾರರಲ್ಲಿ ತಳಮಳ ಶುರುವಾಗಿದೆ.
ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ, ಕೊಡುವ ತೀರ್ಪಿನ ಆಧಾರದ ಮೇಲೆ ಅನರ್ಹ 17 ಶಾಸಕರ ಭವಿಷ್ಯವನ್ನು ನಿರ್ಧರವಾಗಲಿದೆ. ಇದರ ಜೊತೆಗೆ ಮಸ್ಕಿಯ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ಮತ್ತೊಂದು ಕಂಟಕವು ಮುಳುವಾಗಿದ್ದು, ಮುಂದೇನಾಗುತ್ತದೆ ಎನ್ನುವ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅನರ್ಹ ಶಾಸಕರ ಪ್ರಕರಣದ ಜೊತೆಗೆ ನಕಲಿ ಮತದಾನದ ಆರೋಪ ಎದುರಿಸುತ್ತಿರುವ ಪ್ರತಾಪಗೌಡ ಪಾಟೀಲ್ ಸುಪ್ರೀಂನಲ್ಲಿ ಜಯಸಿಕ್ಕರೂ ಕಲಬುರಗಿ ಹೈಕೋರ್ಟ್‌ನಲ್ಲಿರುವ ದಾವೆಯು ಯಾವ ರೀತಿಯ ಪರಿಣಾಮಬೀರಲಿದೆ ಎನ್ನುವುದು ಚರ್ಚೆನೀಯ ಅಂಶವಾಗಿ ಮಾರ್ಪಟ್ಟಿದೆ.
ಹೀಗೊಂದು ಮೆಲಕು:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಜಯಗಳಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲ್ ಅವರು ಆಪರೇಷನ್ ಕಮಲಕ್ಕೆ ತುತ್ತಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತಗೊಳಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದರು.
ಸೇಡಿನ ರಾಜಕೀಯದ ಫಲವಾಗಿ ಅನರ್ಹತೆಯ ತೂಗುಕತ್ತಿಯನ್ನು ನೆತ್ತಿಯ ಮೇಲಿಟ್ಟುಕೊಂಡು 17 ಜನ ಅನರ್ಹ ಶಾಸಕರ ಜೊತೆ ಸೇರಿ ಸುಪ್ರೀಂ ಮೆಟ್ಟಿಲೇರಿ ವಿಚಾರಣೆ ಎದುರಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಖೊಟ್ಟಿಮತಗಳಿಂದ ಶಾಸಕರಾಗಿದ್ದಾರೆ ಎಂದು ಪ್ರತಿಸ್ಪರ್ಧಿ ಆರ್.ಬಸನಗೌಡ ತುರವಿಹಾಳ ಅವರು ಕಲಬುರಗಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದು, ಅದರಿಂದಲೆಯೇ ಮಸ್ಕಿ ಉಪಚುನಾವಣೆ ಘೋಷಣೆಯಾಗದೇ ತಡೆಯಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದರಿಂದ ಮಸ್ಕಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.
ರಾಜಕೀಯ ಚರ್ಚೆ ಬಲು ಜೋರು:
ಅನರ್ಹ ಶಾಸಕರು ಚುನಾಣೆಯಲ್ಲಿ ಸ್ಪರ್ಧಿಸಕೂಡದು ಎಂದು ಸುಪ್ರೀಂ ತೀರ್ಪು ನೀಡಿದರೆ ಪ್ರತಾಪಗೌಡರು ಮುಂದೆ ಏನು ಮಾಡುತ್ತಾರೆ. ಅವರ ಕುಟುಂಬ ಸದಸ್ಯರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತಾರೆಯೇ, ತಾವು ಎಂಎಲ್ಸಿಗಳಾಗಿ ಸಚಿವ ಸ್ಥಾನವನ್ನು ಅಲಂಕರಿಸುತ್ತಾರೆಯೇ ಇಲ್ಲವೇ ಕಳೆದ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋತಿದ್ದ ಆರ್.ಬಸನಗೌಡ ತುರವಿಹಾಳ ಅವರಿಗೆ ಬೆಂಬಲಿಸುತ್ತಾರೆಯೇ, ಕಲಬುರಗಿ ಕೋರ್ಟಿನಲ್ಲಿರುವ ದಾವೆಯಿಂದ ಅವರ ರಾಜಕೀಯ ಭವಿಷ್ಯಕ್ಕೆ ಏನಾದರು ಸಮಸ್ಯೆಯಾಗಲಿದೆಯೇ, ಮೂರು ಪಕ್ಷಗಳು ಯಾರಿಗೆ ಟಿಕೆಟ್ ನೀಡುತ್ತಾರೆ. ಕ್ಷೇತ್ರದಲ್ಲಿ ನಾಲ್ಕನೇ ಸಲ ಯಾರಿಗೆ ಮತದಾರರು ಒಲವು ತೋರುತ್ತಾರೆ ಹೀಗೆ ಹತ್ತು ಹಲವು ರಾಜಕೀಯ ಚರ್ಚಾವಿಷಯಗಳು ಕ್ಷೇತ್ರದಾದ್ಯಂತ ಬಲು ಜೋರಾಗಿ ಸಾಗಿವೆ.
ಕಟೀಲ್‌ರನ್ನು ಭೇಟಿಯಾದ ಬಸನಗೌಡ:
ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದ 15 ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಕೊಳ್ಳಲು ಆರಂಭಿಸಿವೆ. ಉಪಚುನಾವಣೆ ಘೋಷಣೆಯಾಗದಿದ್ದರೂ ಸಹ ಮಸ್ಕಿ ಕ್ಷೇತ್ರದಲ್ಲಿಯೂ ರಾಜಕೀಯ ಚಟುವಟಿಕೆಗಳು ಜೋರುಪಡೆದುಕೊಳ್ಳುತ್ತಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆರ್.ಬಸನಗೌಡ ತುರವಿಹಾಳ ಅವರು ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವಂತೆ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಿದ್ದಾರೆ.
ಆಪರೇಷನ್ ಕಮಲಕ್ಕೆ ತುತ್ತಾಗಿರುವವರು ಹಾಗೂ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವುದಕ್ಕಿಂತ ಮುಂಚೆ ಕಳೆದ ಚುನಾವಣೆಯ ಫಲಿತಾಂಶ, ಕ್ಷೇತ್ರದ ಮತದಾರರ ಒಲವನ್ನಾಧರಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ರಾಜ್ಯಾಧ್ಯಕ್ಷರೊಂದಿಗೆ ಸುದೀರ್ಘ ಚರ್ಚೆ ನಡೆಸಿರುವ ಬಸನಗೌಡರು ಉಪಚುನಾವಣೆ ತಡೆದಿರುವುದು, ಅನರ್ಹತೆ, ಕ್ಷೇತ್ರದಲ್ಲಿರುವ ವಾಸ್ತವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಸ್ಕಿ ಕ್ಷೇತ್ರದ ಬಿಜೆಪಿ ಮುಖಂಡ ಆರ್.ಬಸನಗೌಡ ತುರವಿಹಾಳ ಅವರು, ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಮಸ್ಕಿ ಉಪ ಚುನಾವಣೆ ಘೋಷಣೆ ತಡೆಹಿಯಲಾಗಿದೆ. ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿದ, ಮತದಾರರ ಒಲವು ಯಾರ ಕಡೆ ಇದೆ ಎನ್ನುವ ವಿಷಯಗಳನ್ನು ಅರಿತು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ ಎಂದು ಹೇಳಿದರು.
Last Updated Sep 23, 2019, 10:47 AM IST