ಮಂಗಳೂರು(ಮಾ.15): ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಮಾ.17ರಂದು ಮಾಸ್ಕ್‌(ಮುಖಗವಸು) ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಕೊರೋನಾ ಮುಂಜಾಗ್ರತಾ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.

ಕೊರೋನಾ ಭೀತಿ, ಚೀನಾ ರೀತಿಯೇ ಮೈಸೂರಲ್ಲೂ ಹೊಸ ಆಸ್ಪತ್ರೆ

ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ವಾರ ಶಂಕಿತ ಜ್ವರದಿಂದ ಒಬ್ಬರು ದಾಖಲಾಗಿದ್ದರು. ಆದರೆ ಅಲ್ಲಿ ಅಗತ್ಯವಿರುವಷ್ಟುಮಾಸ್ಕ್‌ ಇರಲಿಲ್ಲ. ಈ ಕೊರತೆಯನ್ನು ನೀಗಿಸುವಂತೆ ಅಲ್ಲಿನ ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಎಲ್ಲಿಯೂ ಮಾಸ್ಕ್‌ ಕೊರತೆ ತಲೆದೋರದಂತೆ ಪೂರೈಕೆ ಮಾಡಲು ಸಚಿವ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಅನವಶ್ಯಕ ಮಾಸ್ಕ್‌ ಬೇಡ:

ರೋಗಪೀಡಿತರು ಹಾಗೂ ಅವರ ಕುಟುಂಬ ಮತ್ತು ವೈದ್ಯಕೀಯ ವಿಭಾಗದವರು ಮಾತ್ರ ಮಾಸ್ಕ್‌ ಧರಿಸಿದರೆ ಸಾಕಾಗುತ್ತದೆ. ಸುಮಾರು 50 ಸಾವಿರ ಮಾಸ್ಕ್‌ಗಳ ಅಗತ್ಯವಿದ್ದು, 2 ಸಾವಿರ ಮಾಸ್ಕ್‌ಗಳನ್ನು ಪೂರೈಸಲಾಗಿದೆ. ಉಳಿದ ಮಾಸ್ಕ್‌ಗಳನ್ನು ಮುಂದಿನ ವಾರದಲ್ಲಿ ಪೂರೈಸಲಾಗುವುದು ಎಂದು ಮಹಾನಗರ ಪಾಲಿಕೆ ಜಂಟಿ ಆಯುಕ್ತೆ ಗಾಯತ್ರಿ ನಾಯಕ್‌ ಹೇಳಿದರು.

ಮಾಲ್‌ ಬಂದ್‌ಗೆ ಕ್ರಮ:

ಮಾಲ್‌, ಸಿನಿಮಾ ಥಿಯೇಟರ್‌ಗಳ ವಹಿವಾಟು ಬಂದ್‌ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಬೀದಿ ಬದಿ ವ್ಯಾಪಾರಕ್ಕೂ ಅವಕಾಶ ನೀಡುವುದಿಲ್ಲ. ಆರೋಗ್ಯ ಸಿಬ್ಬಂದಿ ಹಾಗೂ ಲ್ಯಾಬ್‌ ಟೆಕ್ನಿಶಿಯನ್‌ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಗಾಯತ್ರಿ ನಾಯಕ್‌ ಹೇಳಿದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ವೇದವ್ಯಾಸ ಕಾಮತ್‌, ರಾಜೇಶ್‌ ನಾೖಕ್‌, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿಸೋಜಾ, ಫರೂಕ್‌, ಮಹಾನಗರ ಪಾಲಿಕೆ ಮೇಯರ್‌ ದಿವಾಕರ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಿಂಧು ರೂಪೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ, ಜಿ.ಪಂ. ಸಿಇಒ ಡಾ.ಸೆಲ್ವಮಣಿ, ನಗರ ಪೊಲೀಸ್‌ ಕಮಿಷನರ್‌ ಡಾ.ಹರ್ಷ, ಜಿಲ್ಲಾ ಎಸ್ಪಿ ಲಕ್ಷ್ಮೇ ಪ್ರಸಾದ್‌ ಇದ್ದರು.

ಸೋಂಕು ಇಲ್ಲದಿದ್ದರೂ ನಿಗಾ

ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಆಗಮಿಸುವವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಶುಕ್ರವಾರ ಆಸ್ಪ್ರೇಲಿಯಾ ಮತ್ತು ಇರಾನ್‌ನಿಂದ ಆಗಮಿಸಿದ ಇಬ್ಬರನ್ನು ಎರಡು ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಿ ತಪಾಸಣೆಗೆ ಗುರಿ ಪಡಿಸಲಾಗಿದೆ. ಈ ಬಗ್ಗೆ ವೈದ್ಯಕೀಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.

ವಿಮಾನದಲ್ಲಿ ವಿದೇಶದಿಂದ ಆಗಮಿಸುವವರಿಗೆ ಅನಾರೋಗ್ಯ ಇಲ್ಲದಿದ್ದರೂ ಅವರ ಮೇಲೆ ನಿಗಾ ಇರಿಸಲಾಗುತ್ತಿದೆ. ಸುಮಾರು 14 ದಿನಗಳ ಕಾಲ ಮನೆಯಿಂದ ಹೊರಗೆ ಹೋಗದಂತೆ ಹಾಗೂ ಮನೆ ಮಂದಿ ಜೊತೆಗೆ ಮುಕ್ತವಾಗಿ ಬೆರೆಯದಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಶಂಕಿತ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೆ, ಅಂತವರ ತಪಾಸಣೆ ವರದಿ ಬಂದ ಬಳಿಕ ನೆಗೆಟಿವ್‌ ಬಂದರೂ ಅವರನ್ನು 14 ದಿನಗಳ ಕಾಲ ನಿಗಾದಲ್ಲಿ ಇರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಂತೆ ಕೊರೋನಾ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗಾಯತ್ರಿ ನಾಯಕ್‌ ಸ್ಪಷ್ಟಪಡಿಸಿದರು.

ಎಲ್ಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌

ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೇನಾ ಸೋಂಕು ಪೀಡಿತರಿಗಾಗಿಯೇ 10 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ. ಇವುಗಳಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌ ಇರುತ್ತದೆ. ಇದುವರೆಗೆ 10 ಶಂಕಿತ ಪ್ರಕರಣಗಳು ಪತ್ತೆಯಾಗಿದೆ ಎಂದು ವೈದ್ಯಾಧಿಕಾರಿ ಡಾ.ರಾಜೇಶ್ವರಿದೇವಿ ಹೇಳಿದರು. ವೆನ್ಲಾಕ್‌ ಆಸ್ಪತ್ರೆ ಹಾಗೂ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಹೆಲ್ಪ್‌ ಡೆಸ್ಕ್‌ ತೆರೆಯಲಾಗಿದೆ ಎಂದರು.

ನಗರದ ಬಸ್ಟೇಂಡ್‌, ರೈಲು ನಿಲ್ದಾಣಗಳಲ್ಲಿ ಹೊರ ರಾಜ್ಯಗಳ ಪ್ರಯಾಣಿಕರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಇಲ್ಲಿಯೂ ಹೆಲ್‌್ಫಡೆಸ್ಕ್‌ ತೆರೆಯಲಾಗಿದೆ. ಸೋಂಕಿನ ಕುರಿತಂತೆ ನೆರೆಯ ಕೇರಳ ರಾಜ್ಯ ಜೊತೆ ನಿರಂತರ ಸಂಪರ್ಕ ಇರಿಸಿಕೊಳ್ಳಲಾಗಿದೆ. ಇದುವರೆಗೆ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ತಿಳಿಸಿದರು.

ಜಾತ್ರೆ, ಯಕ್ಷಗಾನಕ್ಕಿಲ್ಲ ತಡೆ

ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಜಾತ್ರೆ, ನೇಮೋತ್ಸವ ಹಾಗೂ ಯಕ್ಷಗಾನ ಪ್ರದರ್ಶನಗಳಿಗೆ ತಡೆ ನೀಡುವ ಅಗತ್ಯವಿಲ್ಲ. ಯಾಕೆಂದರೆ, ಇವು ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಇದೇ ಮಾನದಂಡವನ್ನು ಮಸೀದಿ ಹಾಗೂ ಚರ್ಚ್‌ ಕಾರ್ಯಕ್ರಮಕ್ಕೂ ಅನ್ವಯಿಸಬೇಕು.

ಇಲ್ಲೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಜನಸೇರದಂತೆ ನೋಡಿಕೊಳ್ಳಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು. ಆದರೆ ಒಳಾಂಗಣದಲ್ಲಿ ನಡೆಯುವ ನಾಟಕ, ಕ್ರೀಡೆಗಳೇ ಮೊದಲಾದ ಪ್ರದರ್ಶನಗಳಿಗೆ ಅವಕಾಶವನ್ನು ನಿರ್ಬಂಧಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಷಷ್ಟಪಡಿಸಿದರು.

ಮಂಗಳೂರಿಗೆ ವೈರಾಣು ಪರೀಕ್ಷಾ ಕೇಂದ್ರ ಬೇಡಿಕೆ

ವಿಮಾನ, ಬಂದರು, ರೈಲು ಹಾಗೂ ರಸ್ತೆ ಮಾರ್ಗ ಇರುವ ಮಂಗಳೂರಿನಲ್ಲಿ ಅವಶ್ಯಕವಾಗಿ ವೈರಾಣು ಪರೀಕ್ಷಾ ಕೇಂದ್ರ ಮಂಜೂರು ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ವಿಚಾರವನ್ನು ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ.ಅರುಣ್‌ ಸಭೆಯ ಗಮನಕ್ಕೆ ತಂದರು. ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗಗಳಲ್ಲಿ ವೈರಾಣು ಪರೀಕ್ಷಾ ಕೇಂದ್ರಗಳಿವೆ. ಆದರೆ ಮಂಗಳೂರಿನಲ್ಲಿ ಈ ಕೇಂದ್ರದ ಅಗತ್ಯವಿದೆ. ಆದಷ್ಟುಬೇಗ ಇಲ್ಲಿಗೆ ಈ ಕೇಂದ್ರವನ್ನು ಮಂಜೂರುಗೊಳಿಸಿಕೊಡುವಂತೆ ಅವರು ವಿನಂತಿಸಿದರು. ಪ್ರಸಕ್ತ ಮಂಗಳೂರಿನಲ್ಲಿ ಶಂಕಿತ ಕೊರೋನಾ ಪತ್ತೆಯಾದರೆ, ಸ್ಯಾಂಪಲ್‌ನ್ನು ಬೆಂಗಳೂರು ಬದಲು ಈಗ ಹಾಸನ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಅವರು ಹೇಳಿದರು.

27 ಸ್ಯಾಂಪಲ್‌ ರವಾನೆ

ಇದುವರೆಗೆ ವಿದೇಶದಿಂದ ವಿಮಾನದಲ್ಲಿ ಆಗಮಿಸಿದ ಸುಮಾರು 27 ಮಂದಿಯ ಗಂಟಲು ದ್ರಾವಣದ ಸ್ಯಾಂಪಲ್‌ನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ 17 ಮಂದಿಯ ವರದಿ ನೆಗೆಟಿವ್‌ ಬಂದಿದೆ. ಉಳಿದ ಸ್ಯಾಂಪಲ್‌ಗಳ ವರದಿ ಬರಲು ಬಾಕಿ ಇದೆ. ಮಾಚ್‌ರ್‍ನಿಂದಲೇ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಆಗಮಿಸುವವರು ಅರ್ಜಿ ಫಾರಂನಲ್ಲಿ ಆರೋಗ್ಯದ ಬಗ್ಗೆ ಸ್ವಯಂ ಘೋಷಣೆ ಮಾಡಬೇಕಾಗುತ್ತದೆ. ಈವರೆಗೆ ಯಾವುದೇ ದೇಶೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿಲ್ಲ ಎಂದು ಡಾ.ನವೀನ್‌ಚಂದ್ರ ಸ್ಪಷ್ಟಪಡಿಸಿದರು. ಇದೇ ರೀತಿ ವಾರಕ್ಕೊಮ್ಮೆ ಸಂಚರಿಸುವ ಲಕ್ಷದ್ವೀಪ ಹಡಗಿನ ಪ್ರಯಾಣಿಕರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಅಲ್ಲಿಯೂ ನೆಗೆಟಿವ್‌ ಪತ್ತೆಯಾಗಿಲ್ಲ. ಅಲ್ಲಿಯೂ ಸ್ಕ್ರೀನಿಂಗ್‌ ಮುಂದುವರಿದಿದೆ ಎಂದರು.

ಸಪ್ತಪದಿಗೆ ಇಲ್ಲ ತೊಡಕು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೊರೋನಾ ಸೋಂಕಿನಿಂದ ತೊಂದರೆ ಆಗದು ಎಂಬ ವಿಶ್ವಾಸವನ್ನು ಧಾರ್ಮಿಕ ದತ್ತಿ ಸಚಿವರೂ ಆದ ಕೋಟ ಶ್ರೀನಿವಾಸ ಪೂಜಾರಿ ವ್ಯಕ್ತಪಡಿಸಿದರು.

ಈಗಾಗಲೇ 3 ಸಾವಿರದಷ್ಟುಮಂದಿ ನೋಂದಾಯಿಸಿ ಅರ್ಜಿ ತೆಗೆದುಕೊಂಡಿದ್ದಾರೆ. ಮಾ.21ರ ವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಅವಶ್ಯವಾದರೆ ಆ ಬಳಿಕವೂ ಅರ್ಜಿ ಸ್ವೀಕರಿಸಲಾಗುವುದು. ಏಪ್ರಿಲ್‌ ಕೊನೆಯಲ್ಲಿ ಸಪ್ತಪದಿ ವಿವಾಹ ಕಾರ್ಯಕ್ರಮ ನಡೆಯುವುದರಿಂದ ಇನ್ನು ಒಂದೂವರೆ ತಿಂಗಳಲ್ಲಿ ರಾಜ್ಯದಲ್ಲಿ ಕೊರೋನಾ ಭೀತಿ ನಿವಾರಣೆಯಾಗಬಹುದು ಎಂದು ಸಚಿವ ಕೋಟ ಅಭಿಪ್ರಾಯಪಟ್ಟರು.