*  ಸೋಂಕು ಹೆಚ್ಚಳ ಹಿನ್ನೆಲೆ*  ಕಠಿಣ ಕ್ರಮಕ್ಕೆ ಮುಂದಾದ ಬಿಬಿಎಂಪಿ*  ಸದ್ಯಕ್ಕೆ ದಂಡ ಹಾಕಲ್ಲ

ಬೆಂಗಳೂರು(ಜೂ.10):  ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿಯು ಮಾಲ್‌, ಸಿನಿಮಾ ಮಂದಿರದಲ್ಲಿ ಮಾಸ್ಕ್‌ ಧರಿಸುವುದು ಮತ್ತು ಲಸಿಕೆ ಪ್ರಮಾಣ ಪತ್ರ ಪರಿಶೀಲಿಸುವುದನ್ನು ಕಡ್ಡಾಯ ಮಾಡಿದೆ. ಆದರೆ ಸದ್ಯ ದಂಡ ವಿಧಿಸುತ್ತಿಲ್ಲ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶೇಷ ಆಯುಕ್ತ(ಆಡಳಿತ) ರಂಗಪ್ಪ ಅವರು, ಮಾಲ್‌, ಸಿನಿಮಾ ಮಂದಿರ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್‌್ಕ ಧರಿಸುವುದು ಕಡ್ಡಾಯ ಮಾಡಲಾಗಿದೆ. ಅದರೊಂದಿಗೆ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಪರಿಶೀಲಿಸಲು ಮಾರ್ಷಲ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

COVID CRISIS: 100 ದಿನದ ಬಳಿಕ ಬೆಂಗಳೂರಿನಲ್ಲಿ 458 ಮಂದಿಗೆ ಕೊರೋನಾ

ನಗರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳ ಆಗುತ್ತಿವೆ. ದಿನಕ್ಕೆ 30ಕ್ಕೂ ಹೆಚ್ಚು ಸೋಂಕು ಪತ್ತೆಯಾಗುತ್ತಿವೆ. ಜನರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸಾರ್ವಜನಿಕರು ಹೆಚ್ಚಾಗಿ ಸೇರುತ್ತಿರುವ ಹೋಟೆಲ್‌, ರೆಸ್ಟೋರೆಂಟ್‌ಗಳು, ಶಾಪಿಂಗ್‌ ಮಾಲ್‌ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಿದವರಿಗೆ ಮಾತ್ರ ಪ್ರವೇಶ ಅವಕಾಶ ನೀಡುವಂತೆ ಪಾಲಿಕೆಯಿಂದ ಸೂಚಿಸಲಾಗಿದೆ. ಈ ಬಗ್ಗೆ ಪಾಲಿಕೆಯ ಮಾರ್ಷಲ್‌ಗಳು, ನಿತ್ಯ ಮಾಲ್‌, ಸಿನಿಮಾ ಮಂದಿರಗಳು ಸೇರಿ ವಿವಿಧ ಪ್ರದೇಶಗಳಲ್ಲಿ ಗಸ್ತು ತಿರುಗಿ ತಪಾಸಣೆ ಮಾಡಲಿದ್ದಾರೆ ಎಂದರು.

ಸದ್ಯಕ್ಕೆ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವ ಯಾವುದೇ ಚಿಂತನೆ ಇಲ್ಲ. ಆದರೆ ಪ್ರಕರಣ ತೀವ್ರವಾಗಿ ಹೆಚ್ಚಳವಾದಲ್ಲಿ ದಂಡ ವಿಧಿಸುವುದನ್ನು ಮರು ಜಾರಿಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.