ರಿಬ್ಬನ್ ಪಟ್ಟಿಯೊಳಗೆ ನವಜೋಡಿ, ಅರ್ಧ ಗಂಟೇಲಿ ಮುಗೀತು ಮದುವೆ..!
ಕೊರೋನಾ ಭೀತಿ ಮಧ್ಯೆಯೇ ನಡೆದ ವಿವಾಹಕ್ಕೆ ಖುದ್ದು ಪೊಲೀಸರು, ಅಧಿಕಾರಿವರ್ಗದವರೂ ಸಾಕ್ಷಿಯಾದರು. ಮುಹೂರ್ತದ ವೇಳೆ ವಧೂವರರ ಸುತ್ತ 10 ಅಡಿ ಸುತ್ತಳತೆಯಲ್ಲಿ ಕೆಂಪು ಬಣ್ಣದ ರಿಬ್ಬನ್ ಕಟ್ಟಲಾಗಿತ್ತು. ಅಕ್ಷತೆ ಹಾಕುವವರು ದೂರದಲ್ಲಿ ನಿಂತು ದಂಪತಿಗಳಿಗೆ ಅಕ್ಷತೆ ಹಾಕಿ ಶುಭ ಹಾರೈಸಿದ್ದಾರೆ.
ಚಿತ್ರದುರ್ಗ(ಮಾ.21): ಅದು ಕೆನಡಾದಲ್ಲಿ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಮದುವೆ. ಅದ್ಧೂರಿ ಏರ್ಪಾಡು ನಡೆದಿತ್ತು. ಸಾವಿರಾರು ಮಂದಿ ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇಡೀ ಕಲ್ಯಾಣಮಂಟಪವನ್ನು ಅರಮನೆಯಂತೆ ಸಿಂಗರಿಸಲಾಗಿದೆ. ಆದರೆ, ಆದದ್ದೇ ಬೇರೆ. ಮದುವೆಗೆ ಬಂದವರು ಬೆರಳೆಣಿಕೆಯಷ್ಟು. ನೂರು ಮಂದಿ ಕೂಡಾ ದಾಟಲಿಲ್ಲ. ವಧೂವರರ ಹತ್ತಿರ ಯಾರೂ ಸುಳಿಯಲಿಲ್ಲ. ದೂರದಿಂದಲೇ ನಿಂತು ಅಕ್ಷತೆ ಹಾಕಿ ಎಲ್ಲರೂ ಹಿಂದೆ ಸರಿದರು. ಮದುವೆಗೆ ಖುದ್ದು ಪೊಲೀಸರು, ಅಧಿಕಾರಿವರ್ಗ ಆಗಮಿಸಿ ನಿಗಾ ವಹಿಸಿದ್ದು ವಿಶೇಷವಾಗಿ ಕಂಡಿತು.
ಮೊಳಕಾಲ್ಮುರು ತಾಲೂಕಿನ ರಾಂಪುರ ಗ್ರಾಮದ ಪತ್ತಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯವಿದು. ಕೊರೋನಾ ಭೀತಿಯಿಂದಾಗಿ ಕೇವಲ ಬೆರಳೆಣಿಕೆಯಷ್ಟುಸಂಬಂಧಿಕರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನೆರವೇರಿ ಯುವ ಜೋಡಿಗಳು ದಾಂಪತ್ಯಕ್ಕೆ ಅಡಿ ಇಟ್ಟರು.
ಆತಂಕ ಮೂಡಿಸಿದ ವಿದೇಶಿ ಹಕ್ಕಿ ಸಾವು, ಪತ್ತೆಯಾಗದ ಕಾರಣ
ಕೆನಡಾದಲ್ಲಿ ಸಾಪ್ಟ್‌ವೇರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ರಾಂಪುರ ಗ್ರಾಮದ ಅಮರೀಶ ಎನ್ನುವ ಯುವಕನೊಂದಿಗೆ ಧಾರವಾಡ ಮೂಲದ ಯುವತಿಗೆ ವಿವಾಹ ನಿಶ್ಚಯವಾಗಿತ್ತು. ಕಳೆದ ತಿಂಗಳು ಮದುವೆಯ ದಿನ ನಿಗದಿ ಮಾಡಿ ಪತ್ತಿ ಬಸವೇಶ್ವರ ಕಲ್ಯಾಣ ಮಂಟಪವನ್ನು ಆಯ್ಕೆ ಮಾಡಲಾಗಿತ್ತು. ಕೊರೋನಾ ಭೀತಿಯಿಂದಾಗಿ ಸಂಬಂಧಪಟ್ಟತಾಲೂಕು ಅಧಿಕಾರಿಗಳ ತಂಡ ಅದ್ಧೂರಿ ಮದುವೆಗೆ ಬ್ರೇಕ್ ಹಾಕುವಂತೆ ಕಟ್ಟುನಿಟ್ಟಾಗಿ ಆದೇಶ ನೀಡಿದ್ದರ ಪರಿಣಾಮ ವಧೂವರರ ಬಂಧುಗಳು ಅನಿವಾರ್ಯವಾಗಿ ಪಾಲನೆ ಮಾಡಬೇಕಾಯಿತು.
ಮೊದಲೇ ತಪಾಸಣೆ:
ಹೊರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ವರ ಅಮರೇಶ ವಿವಾಹಕ್ಕೆಂದು ಇದೇ ತಿಂಗಳು 9ರಂದು ಆಗಮಿಸಿದ್ದರು. ಈ ವೇಳೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆಗೊಳಪಡಿಸಿ ಸೋಂಕು ಇಲ್ಲವೆಂದು ದೃಢೀಕರಣ ಪತ್ರ ನೀಡಲಾಗಿತ್ತು. ಇದರಿಂದಾಗಿ ತಾಲೂಕಿನ ಅಧಿಕಾರಿಗಳ ತಂಡ ವರನ ಮೇಲೆ ತೀವ್ರ ನಿಗಾವಹಿಸಿದ್ದರು.
ವರನ ತಂದೆ ಶ್ರೀಕಾಂತರೆಡ್ಡಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು. ಈ ಭಾಗದ ಪ್ರಮುಖರಾಗಿದ್ದು, ಪ್ರಭಾವಿ ರಾಜಕಾರಣಿಗಳ ಸಂಪರ್ಕವೂ ಇದೆ. ವಿವಾಹಕ್ಕೆ ಭಾರೀ ಜನ ಸೇರುವ ನಿರೀಕ್ಷೆಯಿಂದ ಕಳೆದ ವಾರ ತಹಸೀಲ್ದಾರ್ ಎಂ.ಬಸವರಾಜ ನೇತೃತ್ವದ ತಂಡ ವರನ ನಿವಾಸಕ್ಕೆ ತೆರಳಿ ಮದುವೆಗೆ ಬರಬಹುದಾದ ಹೊರದೇಶದ ಸ್ನೇಹಿತರ ಕುರಿತು ಚರ್ಚಿಸಿದ್ದರು. ಇದರೊಟ್ಟಿಗೆ 100ಕ್ಕೂ ಹೆಚ್ಚಿನ ಜನರನ್ನು ಸೇರಿಸದಂತೆ ತಾಕೀತು ಮಾಡಿದ್ದರು. ಮುಂಜಾಗ್ರತೆ ಕ್ರಮವಾಗಿ ಪೋಷಕರೊಡನೆ ನಿರಂತರ ಸಂಪರ್ಕ ನಡೆಸುತ್ತಾ ವಿವಾಹದ ಮೇಲೆ ತೀವ್ರಾ ನಿಗಾವಹಿಸಿದ್ದರು.
2 ರೂಪಾಯಿ ಮೊಟ್ಟೆಗೆ ಮುಗಿಬಿದ್ರು ಜನ..! ಕ್ಷಣ ಹೊತ್ತಲ್ಲಿ ಖಾಲಿ ಆಯ್ತು 90 ಸಾವಿರ ಮೊಟ್ಟೆ
ಅಧಿಕಾರಿಗಳ ಕಟ್ಟುನಿಟ್ಟಿನ ಆದೇಶದ ನಡುವೆಯೂ ಶುಕ್ರವಾರ ಮದುವೆಗೆ ಅದ್ಧೂರಿ ಸೆಟ್‌ಗಳನ್ನು ಹಾಕಿ ಸಾವಿರಾರು ಆಸನಗಳನ್ನು ಹಾಕಲಾಗಿತ್ತು. ಕಲ್ಯಾಣ ಮಂಟಪವನ್ನು ಅದ್ಧೂರಿಯಾಗಿ ಸಿಂಗರಿಸಲಾಗಿತ್ತು. ಇದರಿಂದಾಗಿ ತಾಲೂಕು ಆಡಳಿತದ ವಿವಿಧ ಅಧಿಕಾರಿಗಳ ತಂಡ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆಯಿಂದಲೇ ಬೀಡು ಬಿಟ್ಟಿದ್ದರು. ಬಂದು ಹೋಗುವವರ ಮೇಲೆ ನಿಗಾವಹಿಸಲಾಗಿತ್ತು.
ಕೆಂಪು ರಿಬ್ಬನ್ ಬ್ಯಾರಿಕೇಡ್:
ಮುಹೂರ್ತದ ವೇಳೆ ವಧೂವರರ ಸುತ್ತ 10 ಅಡಿ ಸುತ್ತಳತೆಯಲ್ಲಿ ಕೆಂಪು ಬಣ್ಣದ ರಿಬ್ಬನ್ ಕಟ್ಟಲಾಗಿತ್ತು. ಅಕ್ಷತೆ ಹಾಕುವವರು ದೂರದಲ್ಲಿ ನಿಂತು ದಂಪತಿಗಳಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು. ಮದುವೆ ಮಂಟಪ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಸಾವಿರಾರು ಕುರ್ಚಿಗಳು ಖಾಲಿಯಾಗಿದ್ದವು. ರಸ ಮಂಜರಿ ಕಾರ್ಯಕ್ರಮ ಧ್ವನಿ ಎತ್ತಲಿಲ್ಲ. ಊಟದ ಟೇಬಲ್‌ಗಳೂ ಇಲ್ಲದೆ, ಆಗಮಿಸಿದ್ದ ಬೆರಳೆಣಿಕೆಷ್ಟು ಸಂಬಂಧಿಕರು ನಿಂತೇ ಊಟ ಮಾಡಿದರು. ಅರ್ಧ ಗಂಟೆಯೊಳಗೆ ಇಡೀ ಮದುವೆ ಶಾಸ್ತ್ರ ಮುಕ್ತಾಯವಾಗಿತ್ತು.
ತಹಸೀಲ್ದಾರ್ ಎಂ.ಬಸವರಾಜ, ತಾಪಂ ಇಓ ಪ್ರಕಾಶ, ತಾಲೂಕು ವೈದ್ಯಾಧಿಕಾರಿ ಡಾ.ಪದ್ಮಾವತಿ, ಸಿಪಿಐ ಗೋಪಾಲನಾಯ್ಕ, ಪಿಎಸ್‌ಐ ಗುಡ್ಡಪ್ಪ, ಆರ್.ಐ.ಗೋಪಾಲ್, ಉಮೇಶ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ, ಡಾ.ತುಳಸೀ ರಂಗನಾಥ ಸೇರಿ ಇನ್ನಿತರರು ಮದುವೆ ಮಂಟಪದಲ್ಲಿ ಬೀಡು ಬಿಟ್ಟಿದ್ದರು.