ಬೆಂಗಳೂರು [ಮಾ.16]:  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮದುವೆಗಳಿಗೆ ವಿಧಿಸಿದ್ದ ನಿರ್ಬಂಧ ಸಡಿಲಗೊಳಿಸಿರುವ ಬಿಬಿಎಂಪಿ ಮುಂದಿನ ಆದೇಶದವರೆಗೆ ಯಾವುದೇ ಹೊಸ ಬುಕ್ಕಿಂಗ್‌ ಮಾಡಿಕೊಳ್ಳದಂತೆ ಕಲ್ಯಾಣ ಮಂಟಪಗಳ ಮಾಲೀಕರಿಗೆ ಸೂಚಿಸಿದೆ.

ಆರೋಗ್ಯಇಲಾಖೆ ಮಾ.13ರಂದು ಹೊರಡಿಸಿದ ಆದೇಶದಲ್ಲಿ ಮದುವೆ ಸಮಾರಂಭಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಿತ್ತು. ಇದರಿಂದ ಈಗಾಗಲೇ ಕಲ್ಯಾಣಮಂಟಪ, ಪಾರ್ಟಿ ಹಾಲ್‌, ಹೋಟೆಲ್‌ ಸೇರಿದಂತೆ ಇನ್ನಿತರೆಡೆ ಮದುವೆ ಸಮಾರಂಭಕ್ಕೆ ಬುಕ್ಕಿಂಗ್‌ ಮಾಡಿಕೊಂಡು ಸಿದ್ಧತೆ ಮಾಡಿಕೊಂಡವರಿಗೆ ತೊಂದರೆ ಉಂಟಾಗಲಿದೆ ಎಂಬ ಕಾರಣಕ್ಕೆ ಬಿಬಿಎಂಪಿ ಸ್ವಲ್ಪಮಟ್ಟಿಗೆ ಸಡಲಿಕೆ ನೀಡಿದೆ. ಮದುವೆ ಸಮಾರಂಭದಲ್ಲಿ 100ಕ್ಕಿಂತ ಹೆಚ್ಚಿನ ಜನ ಸೇರದಂತೆ ನೋಡಿಕೊಂಡು ಮದುವೆ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡಿದೆ.

ನಿಯಮಿತಿವಾಗಿ ಸ್ವಚ್ಛತೆ ಮತ್ತು ಗುಣಮಟ್ಟಕಾಯ್ದುಕೊಳ್ಳಬೇಕು. 100ಕ್ಕಿಂತ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಬೇಕು. ಕೆಮ್ಮು, ಶೀತ, ಜ್ವರದ ಲಕ್ಷಣ ಕಂಡು ಬಂದವರನ್ನು ತಕ್ಷಣ ಸಮಾರಂಭದಿಂದ ಹೊರ ಹೋಗುವಂತೆ ಸೂಚನೆ ನೀಡಬೇಕು ಎಂದು ಕಲ್ಯಾಣ ಮಂಟಪ ಹಾಗೂ ಪಾರ್ಟಿ ಹಾಲ್‌ಗಳಿಗೆ ಸೂಚಿಸಲಾಗಿದೆ.

ಮದುವೆಗೆ ನಿರ್ಬಂಧ : ಕಲ್ಯಾಣ ಮಂಟಪಗಳಿಗೆ 50 ಕೋಟಿ ನಷ್ಟ!...

ಆದೇಶ ಮೀರಿ ಹೊಸ ಬುಕ್ಕಿಂಗ್‌ ಮಾಡಿಕೊಂಡರೆ ಆಗುವ ಅನಾಹುತಗಳಿಗೆ ಕಲ್ಯಾಣ ಮಂಟಪದ ಮಾಲೀಕರೆ ಹೊಣೆಯಾಗಿರುತ್ತಾರೆ. ಅಂತವರ ವಿರುದ್ಧ ಬಿಬಿಎಂಪಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ಸಾರ್ವನಿಕರು ಸಹಕಾರ ನೀಡುವಂತೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರವಿಕುಮಾರ್‌ ಸುರಪುರ ಮನವಿ ಮಾಡಿದ್ದಾರೆ.

ಸ್ವಚ್ಛತೆ ಕಾಪಾಡುವಂತೆ ನೋಟಿಸ್‌:

ನಗರದಲ್ಲಿರುವ ಎಲ್ಲ ಕಲ್ಯಾಣ ಮಂಟಪ, ಪಾರ್ಟಿ ಹಾಲ್‌ಗಳಿಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸ್‌ ಇಲಾಖೆಯಿಂದ ನೋಟಿಸ್‌ ನೀಡುತ್ತಿದ್ದಾರೆ. ಜತೆಗೆ ಕೊರೋನಾ ಹರಡದಂತೆ ಸ್ವಚ್ಛತೆ, ಹೆಚ್ಚಿನ ಜನ ಸೇರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ.

ಗೊಂದಲ, ವಾಗ್ವಾದ

ಮಾ.13 ರಂದು ಆರೋಗ್ಯ ಇಲಾಖೆ ಹೊರಡಿಸಿದ ಆದೇಶದಲ್ಲಿ ಮದುವೆ ಸಮಾರಂಭಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಸರಳವಾಗಿ ಆಚರಣೆ ಮಾಡಿಕೊಳ್ಳುವಂತೆ ಮೌಖಿಕವಾಗಿ ತಿಳಿಸಿದರು. ಆರೋಗ್ಯ ಇಲಾಖೆಯ ಆದೇಶದಂತೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರು ಮಾ.14ರ ಶನಿವಾರ ನಗರದ ವಿವಿಧ ಕಲ್ಯಾಣ ಮಂಟಪ, ಪಾರ್ಟಿ ಹಾಲ್‌ಗಳಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭ ನಿಲ್ಲಿಸುವುದಕ್ಕೆ ಹೋಗಿದ್ದರು. ಈ ವೇಳೆ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ಉಂಟಾಗಿತ್ತು. ಹಾಗಾಗಿ, ಬಿಬಿಎಂಪಿ ಭಾನುವಾರ ಸ್ಪಷ್ಟಆದೇಶ ಹೊರಡಿಸಿದೆ.

ಮದುವೆಗೆ ಬಾರದ ಜನರು

ಕಲ್ಯಾಣ ಮಂಟಪ, ಪಾರ್ಟಿ ಹಾಲ್‌ಗಳಲ್ಲಿ ಅನೇಕ ಕಡೆದ ಭಾನುವಾರವೂ ಮದುವೆ ಸಮಾರಂಭಗಳು ನಡೆದವು. ಆದರೆ, ವಿವಾಹ ಸಮಾರಂಭಗಳಿಗೆ ಹತ್ತಿರದ ಸಂಬಂಧಿಕರು ಮಾತ್ರ ಆಗಮಿಸಿದ್ದರು. ಇದರಿಂದ ವಧು-ವರ ಸೇರಿದಂತೆ ಕುಟುಂಬಸ್ಥರು ಬೇಸರಗೊಂಡ ಘಟನೆ ನಡೆಯಿತು. ಬಿಬಿಎಂಪಿ ಆರೋಗ್ಯಾಧಿಕಾರಿಗಳು ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಮದುವೆ ಆಯೋಜಕರಿಗೆ ಕಲ್ಯಾಣ ಮಂಟಪ ಹಾಗೂ ಪಾರ್ಟಿ ಹಾಲ್‌ಗಳ ಮಾಲೀಕರು ಮತ್ತು ಸಿಬ್ಬಂದಿ ಹೆಚ್ಚಿನ ಜನ ಸೇರದೆ ಮದುವೆ ಶಾಸ್ತ್ರ ಮುಗಿಸಿಕೊಳ್ಳುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ವಧು-ವರನ ಪೋಷಕರೇ ತಮ್ಮ ಸಂಬಂಧಿಗೆ ಫೋನ್‌ ಮಾಡಿ ಮದುವೆ ಬರುವುದು ಬೇಡ ಎಂದು ಹೇಳುವ ಪರಿಸ್ಥಿತಿ ಬಂದೊದಗಿತು.

ಪ್ಯಾನಲ್‌ ಕೋಟ್‌

ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಹೆಚ್ಚಿನ ಜನ ಮದುವೆ ಮನೆಯಲ್ಲಿ ಸೇರದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ವಧು-ವರನ ಪೋಷಕರಿಗೆ ಸೂಚನೆ ನೀಡಲಾಗಿತ್ತು. ಕೆಲವೇ ಮಂದಿ ಮಧ್ಯಾಹ್ನ ಎರಡು ಗಂಟೆ ಒಳಗೆ ವಿವಾಹ ಮುಗಿಸಿಕೊಂಡು ಕಲ್ಯಾಣ ಮಂಟಪ ಖಾಲಿ ಮಾಡಿದ್ದಾರೆ. ಈ ರೀತಿ ಈ ಹಿಂದೆ ಯಾವಾಗಲೂ ಆಗಿರಲಿಲ್ಲ.

- ನಾರಾಯಣ್‌, ವ್ಯವಸ್ಥಾಪಕ, ಪಾರ್ವತಿ ಕಲ್ಯಾಣ