ಫುಟ್ಬಾಲ್ ಮೈದಾನದಲ್ಲಿ ಮಾರುಕಟ್ಟೆ: ಮಹಾನಗರ ಪಾಲಿಕೆಗೆ ನೋಟಿಸ್
ಮಂಗಳೂರಿನ ನೆಹರು ಮೈದಾನದ ಫುಟ್ಬಾಲ್ ಮೈದಾನದಲ್ಲಿ ತರಕಾರಿ ಹಾಗೂ ಮಾಂಸ ಮಾರುಕಟ್ಟೆನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.
ಮಂಗಳೂರು(ಮೇ 30): ಮಂಗಳೂರಿನ ನೆಹರು ಮೈದಾನದ ಫುಟ್ಬಾಲ್ ಮೈದಾನದಲ್ಲಿ ತರಕಾರಿ ಹಾಗೂ ಮಾಂಸ ಮಾರುಕಟ್ಟೆನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವಿಜಯ ಸುವರ್ಣ ಸೇರಿದಂತೆ 11 ಮಂದಿ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಮಾರುಕಟ್ಟೆನಿರ್ಮಾಣ ಕಾಮಗಾರಿಯು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿತು.
ಕೊರೋನಾ ಸಾವಿನಲ್ಲೂ ಚೀನಾ ಹಿಂದಿಕ್ಕಿದ ಭಾರತ!
ಅರ್ಜಿದಾರರ ಪರ ವಕೀಲ ಎಚ್. ಸುನೀಲ್ ಕುಮಾರ್ ವಾದ ಮಂಡಿಸಿ, 100 ವರ್ಷಗಳ ಹಿಂದೆ ಬ್ರಿಟಿಷರ ಸರ್ಕಾರ ನೆಹರು ಮೈದಾನವನ್ನು ‘ಸಾರ್ವಜನಿಕ ಮೈದಾನ’ ಎಂದು ಘೋಷಿಸಿತ್ತು. ಮಂಗಳೂರು ನಗರದಲ್ಲಿ ಪ್ರಸಿದ್ಧಿ ಪಡೆದಿರುವ ಈ ಮೈದಾನವು, 21 ಎಕರೆ ವಿಸ್ತೀರ್ಣ ಹೊಂದಿದೆ. ಇದೀಗ ಈ ಮೈದಾನದಲ್ಲಿರುವ ಫುಟ್ಬಾಲ್ ಅಂಕಣದಲ್ಲಿ ಮಹಾನಗರ ಪಾಲಿಕೆ ತರಕಾರಿ ಹಾಗೂ ಮಾಂಸದ ಮಾರುಕಟ್ಟೆನಿರ್ಮಿಸಲು ಮುಂದಾಗಿದೆ. ಇದರಿಂದ ಕ್ರೀಡಾ ಚಟುವಟಿಕೆಗೆ ಹಾಗೂ ಸಾರ್ವಜನಿಕರ ವಾಯು ವಿವಾಹರಕ್ಕೆ ತೊಂದರೆ ಆಗಲಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಸೋಂಕು ದೃಢಪಟ್ಟ7 ದಿನದಲ್ಲೇ ಬಿಡುಗಡೆ!
ಅಲ್ಲದೆ, ನೆಹರು ಮೈದಾನದ ಫುಟ್ಬಾಲ್ ಅಂಕಣದಲ್ಲಿ ತರಕಾರಿ ಮತ್ತು ಮಾಂಸ ಮಾರುಕಟ್ಟೆನಿರ್ಮಾಣ ಮಾಡದಂತೆ ಸಂರಕ್ಷಿಸಬೇಕು. ಫುಟ್ಬಾಲ್ ಅಂಕಣದಲ್ಲಿ ಯಾವುದೇ ರೀತಿಯ ಶಾಶ್ವತ ಅಥವಾ ತಾತ್ಕಾಲಿಕ ನಿರ್ಮಾಣ ಕಾಮಗಾರಿ ಕೈಗೊಳ್ಳಬಾರದು. ಅರ್ಜಿ ಇತ್ಯರ್ಥಗೊಳ್ಳುವವರೆಗೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.