ಕೊರೋನಾ : ವಿದ್ಯಾರ್ಥಿಗಳು ಲಸಿಕೆ ಪಡೆಯಲು ಡೆಡ್ ಲೈನ್
ಕೊರೋನಾ ಮಹಾಮಾರಿ ಲಸಿಕೆ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಈ ದಿನಾಂಕದ ವರೆಗೂ ಅವಕಾಶ ಇದೆ ಎಮದು ತುಮಕೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತುಮಕೂರು (ಮಾ.02): ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ಯಾರಾಮೆಡಿಕಲ್, ಫಾರ್ಮಸಿ, ನರ್ಸಿಂಗ್, ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳ ಕುರಿತಂತೆ ಜಿಲ್ಲೆಯಲ್ಲಿನ ಪ್ಯಾರಾಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜು ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹೊರ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ವಿದ್ಯಾರ್ಥಿಗಳ ಮಾಹಿತಿ ಪಡೆದುಕೊಂಡು ಕಡ್ಡಾಯವಾಗಿ 24 ಗಂಟೆಯೊಳಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. ನೆಗೆಟಿವ್ ಬಂದವರಿಗೆ ಮಾತ್ರ ಕಾಲೇಜು ಪ್ರವೇಶಾತಿ ನೀಡಬೇಕು. ಪರೀಕ್ಷೆ ಫಲಿತಾಂಶ ಬರುವವರೆಗೂ ಪ್ರತ್ಯೇಕ ಕೊಠಡಿಯಲ್ಲಿ ಐಸೋಲೇಶನ್ ಮಾಡಬೇಕು. ಆಯಾ ಕಾಲೇಜು ಆಡಳಿತವು ಕೇರಳ, ಮಹಾರಾಷ್ಟ್ರದಿಂದ ಬರುವ ವಿದ್ಯಾರ್ಥಿಗಳಿಂದ ಪ್ರಯಾಣದ ಮಾಹಿತಿ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳಿಂದ ನನಗೆ ಯಾವುದೇ ಕೋವಿಡ್ ಲಕ್ಷಣಗಳಿರುವುದಿಲ್ಲ ಮತ್ತು ಯಾವ ವ್ಯಕ್ತಿಯ ಜೊತೆಯು ಬೇರೆಯುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವಂತೆ ಕಾಲೇಜು ಆಡಳಿತ ಸಿಬ್ಬಂದಿಗಳಿಗೆ ಅವರು ಸೂಚಿಸಿದರು.
ಕೋವಿಶೀಲ್ಡ್ ಬದಲು ಕೋವ್ಯಾಕ್ಸಿನ್ ಪಡೆದಿದ್ಯಾಕೆ ಪ್ರಧಾನಿ ಮೋದಿ.? ..
ವಿದ್ಯಾರ್ಥಿಗಳನ್ನು ನೋಡಲು ಬರುವ ಪೋಷಕರಿಗೂ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. 24 ಗಂಟೆಯೊಳಗಾಗಿ ಪರೀಕ್ಷೆ ಮಾಡಿಸಿ ವರದಿ ಪಡೆಯಬೇಕು. ನೆಗೆಟಿವ್ ಬಂದರೆ ಮಾತ್ರ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗುವುದು. ಅನುಮತಿ ಪಡೆಯದೇ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದಲ್ಲಿ ಅಂತಹ ಪೋಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೇರಳ ಹಾಗೂ ಮಹಾರಾಷ್ಟ್ರದಿಂದ ಬಂದ ಪೋಷಕರು ಮಕ್ಕಳನ್ನು ಭೇಟಿಯಾಗಲು ಹೋಟೆಲ್, ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದ್ದು, ಹೋಟೆಲ್, ಲಾಡ್ಜ್‌ಗೆ ಬಂದಾಗ ಅಂತಹವರ ಮಾಹಿತಿಯನ್ನು ಕೂಡಲೇ ಆರೋಗ್ಯ ಇಲಾಖೆ ಅಥವಾ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯ ಸಹಾಯವಾಣಿ ಸಂಖ್ಯೆ: 9449843269ನ್ನು ಸಂಪರ್ಕಿಸಿ ಹೋಟೆಲ್, ಲಾಡ್ಜ್ ಮಾಲೀಕರು ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ರಜಿನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮೋಹನ್ ದಾಸ್, ಡಾ. ಮಹಿಮಾ, ಡಾ. ಸನತ್‌ಕುಮಾರ್, ಡಾ. ಪುರುಷೋತ್ತಮ ಸೇರಿದಂತೆ ವಿವಿಧ ಕಾಲೇಜುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
6 ರವರೆಗೆ ಲಸಿಕೆ ಪಡೆಯಲು ಅವಕಾಶ : ಡಿಚ್‌ಒ ಡಾ.ನಾಗೇಂದ್ರಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಫಾರ್ಮಸಿ, ಪ್ಯಾರಾಮೆಡಿಕಲ್, ನರ್ಸಿಂಗ್ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳಿಗೆ ಲಸಿಕೆ ಪಡೆಯಲು ಮಾರ್ಚ್ 6ರವರೆಗೂ ಅವಕಾಶವಿದೆ. ಕಾಲೇಜುಗಳ ಆಡಳಿತ ಮಂಡಳಿಗಳು ಕೊರೋನಾ ಲಸಿಕೆ ಪಡೆಯಲು ಹೆಸರು ನೋಂದಾಯಿಸಲು ವಿದ್ಯಾರ್ಥಿಗಳಿಗೆ ಸೂಚಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೊರೋನಾ ಲಸಿಕೆ ನೀಡಲು ಕ್ರಮವಹಿಸಲಾಗುವುದು. 60 ವರ್ಷ ಮೇಲ್ಪಟ್ಟನಾಗರಿಕರಿಗೆ ಕೊರೋನಾ ಲಸಿಕೆ ವಿತರಿಸಲಾಗುವುದು ಹಾಗೂ ಡಯಾಬೀಟಿಸ್, ಬಿ.ಪಿ ಮತ್ತಿತರ ದೀರ್ಘಕಾಲೀನ ಕಾಯಿಲೆಗೊಳಪಟ್ಟಿರುವ 45 ವರ್ಷದಿಂದ 59 ವರ್ಷದೊಳಗಿರುವವರು ತಮ್ಮ ವೈದ್ಯರಿಂದ ಪ್ರಮಾಣ ಪತ್ರ ಪಡೆದ ದಾಖಲೆಯೊಂದಿಗೆ ಆರೋಗ್ಯ ಸೇತುವಿನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು ಎಂದು ಸಭೆಗೆ ಮಾಹಿತಿ ನೀಡಿದರು.