* ಕೊಣ್ಣೂರು ಗ್ರಾಮ ಹಾಗೂ ಮರಡಿಮಠ ಸೀಲ್‌ಡೌನ್ * ಅಂತ್ಯಕ್ರಿಯೆಗೆ ಜನ ಸೇರಿಸಿದವರ ವಿರುದ್ಧ ಕೇಸ್ ದಾಖಲು* ಸಾಮಾಜಿಕ ಅಂತರ ಮರೆತು ದೈವ ಕುದುರೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದ ಗ್ರಾಮಸ್ಥರು

ಬೆಳಗಾವಿ(ಮೇ.23): ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಮರಡಿಮಠದಲ್ಲಿ ದೈವ ಕುದುರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಎಲ್ಲರಿಗೂ ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುವುದು ಎಂದು ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.

"

ಎಚ್ಚೆತ್ತ ಜಿಲ್ಲಾಡಳಿತ 

ಮರಡಿಮಠ ಗ್ರಾಮಕ್ಕೆ ಗೋಕಾಕ ತಹಶೀಲ್ದಾರ್ ಪ್ರಕಾಶ್ ಹುಳೆಪ್ಪಗೋಳ, ಸಿಪಿಐ ಭೇಟಿ ನೀಡಿ ಮರಡಿಮಠ ಗ್ರಾಮವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಿದ್ದಾರೆ. ಮರಡಿಮಠ ಗ್ರಾಮ ಸೀಲ್‌ಡೌನ್ ಮಾಡಿ ಕುದುರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾದವರಿಗೆ ಕೋವಿಡ್ ಟೆಸ್ಟ್‌ ಮಾಡಲು ನಿರ್ಧಾರ ಮಾಡಲಾಗಿದೆ ದೈವ ಕುದುರೆ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಜನ ಭಾಗಿಯಾಗಿದ್ದರ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ ವಿಸ್ತೃತ ವರದಿಯನ್ನ ಪ್ರಸಾರ ಮಾಡಿತ್ತು. 

ಇಂದು(ಭಾನುವಾರ) ನಗರದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್‌ ಜೊತೆ ಮಾತನಾಡಿದ ಅವರು, ಕೊಣ್ಣೂರು ಗ್ರಾಮ ಹಾಗೂ ಮರಡಿಮಠವನ್ನ 14 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಕುದುರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಎಲ್ಲರಿಗೂ ಕೋವಿಡ್‌ ಟೆಸ್ಟ್ ಮಾಡಲಾಗುವುದು. ಕುದುರೆ ಅಂತ್ಯಕ್ರಿಯೆಗೆ ಜನ ಸೇರಿಸಿದವರ ವಿರುದ್ಧ ಕೇಸ್ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.

"

ಕೊರೋನಾ ನಿಗ್ರಹಕ್ಕೆ ರಾತ್ರಿ ಮಠದ ಕುದುರೆ ಬಿಟ್ಟ ಜನ!

ಗ್ರಾಮದಲ್ಲಿ ಕೊರೋನಾ ಸೋಂಕು ಕಡಿಮೆ ಆಗಲಿ ಎಂದು ಬುಧವಾರ ರಾತ್ರಿ ಬಿಟ್ಟಿದ್ದ ಮರಡಿಮಠದ ಕಾಡಸಿದ್ದೇಶ್ವರ ಕುದುರೆ ಸಾವನ್ನಪ್ಪಿತ್ತು. ಮಹಾಮಾರಿ ಕೊರೋನಾ ಹೋಗಲಾಡಿಸಲು ಗ್ರಾಮಸ್ಥರು ದೈವ ಕುದುರೆಯ ಮೊರೆ ಹೋಗಿದ್ದರು. ಪವಾಡೇಶ್ವರ ಶ್ರೀಗಳ ಮಾರ್ಗದರ್ಶನದಂತೆ ಮಧ್ಯರಾತ್ರಿ 12ರಿಂದ ಗುರುವಾರ ಬೆಳಗ್ಗೆ 4ರವರೆಗೆ ಸಂಚಾರಕ್ಕೆ ಕುದುರೆ ಬಿಡಲಾಗಿತ್ತು. 

ಆದರೆ ದುರದೃಷ್ಟವಶಾತ್ ಗ್ರಾಮದಲ್ಲಿ ಸಂಚಾರಕ್ಕೆ ಬಿಟ್ಟಿದ್ದ ದೈವ ಕುದುರೆ ಇಂದು(ಭಾನುವಾರ) ಸಾವನ್ನಪಿತ್ತು. ಕೊಣ್ಣೂರು, ಮರಡಿಮಠ ಗ್ರಾಮಸ್ಥರೆಲ್ಲರೂ ಸೇರಿ ಸಾಮಾಜಿಕ ಅಂತರ ಮರೆತು ದೈವ ಕುದುರೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ದೈವ ಕುದುರೆ ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನ ಭಾಗಿಯಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ.

15 ಜನರ ವಿರುದ್ಧ ಎಫ್ಐಆರ್

ಮರಡಿಮಠದಲ್ಲಿ ಮೆರವಣಿಗೆ ಮಾಡಿ ದೈವದ ಕುದುರೆ ಅಂತ್ಯಸಂಸ್ಕಾರದ ಮುಂದಾಳತ್ವ ವಹಿಸಿದ್ದ 15 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಗೋಕಾಕ ತಹಶಿಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಹೇಳಿದ್ದಾರೆ.

ಪೊಲೀಸ್ ಇಲಾಖೆ, ತಾಲೂಕು ಆಡಳಿತ ಗಮನಕ್ಕೆ ತರದೇ ಅಂತ್ಯಸಂಸ್ಕಾರ ಮಾಡಲಾಗಿದೆ. ವಿಷಯ ತಿಳಿದ ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಮರಡಿಮಠವನ್ನ ಸೀಲ್‌ಡೌನ್ ಮಾಡಿದ್ದೇವೆ. ಸುಮಾರು 400 ಜನರು ದೈವ ಕುದುರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಗ್ರಾಮದ 400 ಜನರ ಥ್ರೋಟ್ ಸ್ವ್ಯಾಬ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ವೇಳೆ ಜನ ಸೇರಬಾರದು ಅಂದರೂ ಸಾಕಷ್ಟು ಜನ ಸೇರಿದ್ದಾರೆ. ಹೀಗಾಗಿ ಮರಡಿಮಠ ಗ್ರಾಮವನ್ನ ಸೀಲ್‌ಡೌನ್ ಮಾಡಿ ಎಲ್ಲರ ಸ್ವ್ಯಾಬ್ ಟೆಸ್ಟ್‌ಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona