Karnataka Politics : ಹಾಲಿ ಶಾಸಕರ ವಿರುದ್ಧ ಸ್ವಪಕ್ಷೀಯರ ಬಂಡಾಯ
ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷದ ವರಿಷ್ಠರು ಸೂಕ್ತ ನಿರ್ಣಯ ಕೈಗೊಳ್ಳದಿದ್ದಲ್ಲಿ, ಜ.20ರ ನಂತರ ಅಂತಿಮ ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ (ಜ. 06): ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷದ ವರಿಷ್ಠರು ಸೂಕ್ತ ನಿರ್ಣಯ ಕೈಗೊಳ್ಳದಿದ್ದಲ್ಲಿ, ಜ.20ರ ನಂತರ ಅಂತಿಮ ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರ ನಿರ್ಣಯದ ಮೇರೆಗೆ ದೊಡ್ಡಬಳ್ಳಾಪುರ ವಿಧಾನಸಭೆ ಚುನಾವಣೆಗೆ (Assrmbly Election ) ಕಾಂಗ್ರೆಸ್ ಅಭ್ಯರ್ಥಿಯಾಗಲು ಅರ್ಜಿ ಸಲ್ಲಿಸಿದ್ದೇನೆ. ಆದರೆ ಆಕಾಂಕ್ಷಿಯಾಗಿದ್ದಕ್ಕೆ ಪಕ್ಷದ ವರಿಷ್ಠರು ಅಗೌರವ ತೋರುತ್ತಿದ್ದಾರೆ. ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ ಕಾರಣ ಕೆ ಪಿ ಸಿ ಸಿ ಕಚೇರಿಯಲ್ಲಿ ಅಭಿಪ್ರಾಯ ಕೇಳಲು ಕರೆದಿದ್ದರು. ಆ ವೇಳೆ ನನ್ನ ಒಬ್ಬನನ್ನೆ ಬರಲು ಹೇಳಿದ್ದರು. ಆದರೆ ಅಲ್ಲಿ ನೋಡಿದರೆ ಮತ್ತೊಂದು ಅರ್ಜಿ ಸಲ್ಲಿಸಿದ್ದ ಶಾಸಕರ ಪರವಾಗಿ ವಕಾಲತ್ತು ವಹಿಸಲು ಅನೇಕ ಬೆಂಬಲಿಗರು ಸೇರಿದ್ದರು. ಇದು ಬೇಸರಕ್ಕೆ ಕಾರಣವಾಯಿತು. ಮೊದಲೇ ಹೇಳಿದ್ದರೆ ನನ್ನ ಬೆಂಬಲಿಗರನ್ನು ಕರೆತರುತ್ತಿದ್ದೆ ಎಂದು ವರುಷ್ಠರಿಗೆ ತಿಳಿಸಿದ್ದೆ. ಇದಕ್ಕೆ ಮತ್ತೊಂದು ದಿನಾಂಕದಲ್ಲಿ ಕರೆತರುವಂತೆ ಸೂಚಿಸಿದರು. ಇದು ವರಿಷ್ಠರ ದ್ವಿಮುಖ ನಿಲುವಾಗಿದೆ ಎಂದರು.
ಶಾಸಕರ ಹಿಂದೆ ಶೇ.60 ಬೆನ್ನಿಗೆ ಚೂರಿ ಹಾಕುವವರೆ ಇದ್ದಾರೆ. ಇತ್ತೀಚೆಗಷ್ಟೆಶಾಸಕರನ್ನು ಬೈದುಕೊಂಡು ಓಡಾಡುತ್ತಿದ್ದವರು ಈಗ ಅವರ ಪರ ಮಾತಾಡುತ್ತಿದ್ದಾರೆ. ಆದರೆ ನನಗೆ ಬೆಂಬಲ ನೀಡಿ, ಇಂದು ಈ ಸುದ್ದಿಗೋಷ್ಠಿಗೆ ಬಂದಿರುವ ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರೆಲ್ಲ ಪಕ್ಷದ ನಿಷ್ಠರೇ ಹೊರತು, ದುಡ್ಡಿಗಾಗಿ ಮಾರಿಕೊಳ್ಳುವವರಲ್ಲ. ಸುದ್ದಿಗೋಷ್ಠಿ ನಡೆಸಲು ಸ್ವಾಭಿಮಾನಿ ಕಾಂಗ್ರೆಸ್‌ನ 25 ಮುಖಂಡರು ನಿರ್ಣಯಿಸಿದರು. ಆದರೆ ಇಲ್ಲಿ ಸೇರಿರುವ ಮುಖಂಡರನ್ನು ಗಮನಿಸಿದಾಗ ಪಕ್ಷದಲ್ಲಿ ಶಾಸಕರ ವಿರುದ್ಧ ಎಷ್ಟುಅಸಮಾಧಾನ ಇದೆ ಎಂದು ತಿಳಿಯುತ್ತದೆ. ಈ ಹಿಂದೆ ಉಸ್ತುವಾರಿಯಾಗಿದ್ದ ಕೃಷ್ಣಭೈರೇಗೌಡ ಅವರಿಗೆ ತಾಲೂಕಿನ ವಾಸ್ತವದ ಅರಿವಿತ್ತು. ಆದರೆ ಈಗಿನ ಉಸ್ತುವಾರಿ ಎಸ್.ರವಿ ಅವರು ಏಕೆ ವಾಸ್ತವ ಅರಿತುಕೊಳ್ಳುತ್ತಿಲ್ಲ ಎಂಬುದೇ ತಿಳಿಯದಾಗಿದೆ. ಈ ನಿಟ್ಟಿನಲ್ಲಿ ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರ ನಿರ್ಣಯದಂತೆ ಜನವರಿ 20ರ ಒಳಗಾಗಿ ಪಕ್ಷದ ವರಿಷ್ಠರು ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ನಮ್ಮ ನಿರ್ಣಯವನ್ನು ತಿಳಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ತಿ.ರಂಗರಾಜ್, ಬಿ.ಹೆಚ್.ಕೆಂಪಣ್ಣ, ಮಧುರೆ ಶನಿಮಹಾತ್ಮ ದೇವಾಲಯದ ಧರ್ಮದರ್ಶಿ ಪ್ರಕಾಶ್, ನಗರಸಭೆ ಸದಸ್ಯ ಎ.ಜಿ.ಶ್ರೀನಿವಾಸ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆಂಜನಪ್ಪ, ತಾಪಂ ಮಾಜಿ ಸದಸ್ಯ ಹಸನ್ ಘಟ್ಟರವಿ, ಮುಖಂಡರಾದ ವೆಂಕಟರಾಮ್, ಆನಂದ್, ಭೈರೇಗೌಡ, ಮನ್ಸೂರು, ಶಶಿಧರ್ ಗೌಡ, ಹರೀಶ್ ಇತರರು ಹಾಜರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಬದಲಿಸಿ: ಕೆಪಿಸಿಸಿಗೆ ಗಡುವು
ಜನವರಿ 20ರ ಒಳಗಾಗಿ ಮುಂಬರುವ ದೊಡ್ಡಬಳ್ಳಾಪುರ ವಿಧಾನ ಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸುವಂತೆ ನಗರಸಭೆ ಸದಸ್ಯ ಎಂ.ಜಿ.ಶ್ರೀನಿವಾಸ್, ಕೆಪಿಸಿಸಿಗೆ ಗಡುವು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಿದ ನಾವಿಂದು ಕವಲು ದಾರಿಯಲ್ಲಿ ನಿಂತಿದ್ದೇವೆ. ಶಾಸಕ ಟಿ.ವೆಂಕಟರಮಣಯ್ಯ ನಡುವಳಿಕೆಯಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಕೆಪಿಸಿಸಿ ಆಕಾಂಕ್ಷಿಗಳ ಸಭೆ ಕರೆದಿದ್ದರು. ಈ ಸಭೆಗೆ ಆನಂದ್ ಒಬ್ಬರನ್ನೇ ಬರುವಂತೆ ಹೇಳಿ, ಹಾಲಿ ಶಾಸಕರನ್ನು ಬೆಂಬಲಿಗರೊಂದಿಗೆ ಕರೆಸಿ ಅವರ ಪರವಾಗಿ ಜೈಕಾರ ಹಾಕಿಸಲು ಕರೆಸಿದ್ದು, ಪಕ್ಷದಲ್ಲಿ ಒಡಕನ್ನುಂಟು ಮಾಡಲು ಪಕ್ಷದ ವರಿಷ್ಠರೇ ಕಾರಣರಾಗಿದ್ದಾರೆಂದು ಆರೋಪಿಸಿದ ಅವರು, ಜ.20ರ ಒಳಗಾಗಿ ಅಭ್ಯರ್ಥಿ ಬದಲಾವಣೆ ಮಾಡದಿದ್ದರೆ ಮುಂದಿನ ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.