ಹಲವು ಮುಖಂಡರು ಜೆಡಿಎಸ್, ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆ
ಮಾಯಸಂದ್ರ ಹೋಬಳಿಯ ಮಣಿಚೆಂಡೂರು, ನಾಗೇಗೌಡನ ಪಾಳ್ಯ, ಕಣಕೂರು, ಅಜ್ಜೇನಪಾಳ್ಯ ಸೇರಿದಂತೆ ಹಲವಾರು ಗ್ರಾಮಗಳ ನೂರಾರು ಮಂದಿ ಜೆಡಿಎಸ್ ಮತ್ತು ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ತುರುವೇಕೆರೆ : ಮಾಯಸಂದ್ರ ಹೋಬಳಿಯ ಮಣಿಚೆಂಡೂರು, ನಾಗೇಗೌಡನ ಪಾಳ್ಯ, ಕಣಕೂರು, ಅಜ್ಜೇನಪಾಳ್ಯ ಸೇರಿದಂತೆ ಹಲವಾರು ಗ್ರಾಮಗಳ ನೂರಾರು ಮಂದಿ ಜೆಡಿಎಸ್ ಮತ್ತು ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ವಕೀಲ ನಟರಾಜ್ ನೇತೃತ್ವದಲ್ಲಿ ಹಲವಾರು ಮಂದಿ ಕಾಂಗ್ರೆಸ್ ಅಭ್ಯರ್ಥಿ ಬೆಮಲ್ ಕಾಂತರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಎಚ್.ಕೆ.ನಾಗೇಶ್ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯ ಮುರುಳೀಕುಪ್ಪೆ ಶ್ರೀನಿವಾಸ್ ಸಮ್ಮುಖ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಮುಂಬರುವ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್ ಎಂದೆಂದೂ ಬಡವರ ಪರವಾಗಿರುವ ಪಕ್ಷವಾಗಿದೆ. ಗರೀಬ್ ಹಠಾವೋ ಎಂದು ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿಯವರು ಪ್ರಾರಂಭ ಮಾಡಿದ್ದ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಮುಂದುವರೆಸಿಕೊಂಡು ಬಂದಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಮನೆಗೆ 200 ಯುನಿಟ್ ಉಚಿತ ಕರೆಂಟ್, ಪ್ರತಿ ಮನೆಯ ಮಹಿಳೆಗೆ 2 ಸಾವಿರ ರು, ನಿರುದ್ಯೋಗಿಗಳಿಗೆ ಸೂಕ್ತ ತರಬೇತಿ ನೀಡಿ ಕೆಲಸ ಸಿಗುವವರೆಗೂ ನಿರುದ್ಯೋಗ ಭತ್ಯೆ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.
ಡಬ್ಬಲ್ ಎಂಜಿನ್ ಸರ್ಕಾರ ಎಂದು ಹೇಳುತ್ತಿರುವ ಬಿಜೆಪಿ ಸರ್ಕಾರದಲ್ಲಿ ಬಡವರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಎರಡೂ ಸರ್ಕಾರಗಳು ಬಡವರನ್ನು ಕಿತ್ತು ತಿನ್ನುತ್ತಿವೆ. ಬದುಕೇ ಬೇಡ ಎಂಬ ಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್, ಡೀಸೆಲ್, ಪೆಟ್ರೋಲ್, ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೊಳ್ಳುವ ಸಾಮರ್ಥ್ಯ ಬಡವರಿಗೆ ಇಲ್ಲದಾಗಿದೆ. ಹಾಗಾಗಿ ರಾಜ್ಯದಲ್ಲಿ ಬಿಜೆಪಿಯ ವಿರುದ್ಧ ಬಿರುಗಾಳಿ ಎದ್ದಿದ್ದು ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರ ಧೂಳೀಪಟವಾಗಲಿದೆ ಎಂದು ಬೆಮಲ್ ಕಾಂತರಾಜ್ ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಕುಮಾರ್, ಎಚ್.ಕೆ.ನಾಗೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮುರುಳೀಕುಪ್ಪೆ ಶ್ರೀನಿವಾಸ್, ಗೊಟ್ಟೀಕೆರೆ ನಾರಾಯಣ್ ಗೌಡ, ಗೋಣಿತುಮಕೂರು ಲಕ್ಷ್ಮೇಕಾಂತ್, ಕೆ.ಬಿ.ಹನುಮಂತಯ್ಯ ಸೇರಿದಂತೆ ಹಲವಾರು ಮುಖಂಡರು ಇದ್ದರು.
ಅಸಮಾಧಾನಿತರು ಕೈ ನತ್ತ ವಲಸೆ
ಬೆಂಗಳೂರು(ಏ.13): ಬಿಜೆಪಿ ಟಿಕೆಟ್ ವಂಚಿತರು ದೊಡ್ಡ ಪ್ರಮಾಣದಲ್ಲೇ ಕಾಂಗ್ರೆಸ್‌ನತ್ತ ದಾಪುಗಾಲು ಹಾಕುವ ಲಕ್ಷಣಗಳು ಗೋಚರಿಸಿದ್ದು, ಮುಖ್ಯವಾಗಿ ಬಿಜೆಪಿ ವಿರುದ್ಧ ಬಂಡೆದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ನಾಯಕರ ಸಂಪರ್ಕ ಸಾಧಿಸಿ ಟಿಕೆಟ್ ಬಯಕೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮತ್ತೊಬ್ಬ ಟಿಕೆಟ್ ವಂಚಿತ ಕುಂದಗೋಳದ ಎಸ್.ಐ.ಚಿಕ್ಕನಗೌಡರ ಸಹ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.
ಬಿಜೆಪಿ ನಾಯಕತ್ವದ ವಿರುದ್ಧ, ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿಡಿದೆದ್ದಿರುವ ಲಕ್ಷ್ಮಣ ಸವದಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಣದ ಸಂಪರ್ಕಕ್ಕೆ ಬಂದಿದ್ದು, ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್ ನಡೆಸಿದ್ದ ಸರ್ವೇಗಳ ಪ್ರಕಾರ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಅವರಿಗಿಂತ ಅವರ ಪುತ್ರ ಚಿದಾನಂದಗೆ ಉತ್ತಮ ಅವಕಾಶಗಳಿವೆ ಎಂಬ ವರದಿಯಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಚಿದಾನಂದ ಸವದಿ ಅವರಿಗೆ ಟಿಕೆಟ್ ನೀಡುವ ಪ್ರಸ್ತಾಪವನ್ನು ಸವದಿ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಬಿಜೆಪಿ 2ನೇ ಪಟ್ಟಿ ಬಿಡುಗಡೆಯಾದ್ರೂ ಇನ್ನೂ 12 ಕ್ಷೇತ್ರಗಳ ಟಿಕೆಟ್ ನಿಗೂಢ..!
ಈ ಬಗ್ಗೆ ಲಕ್ಷ್ಮಣ ಸವದಿ ಅವರು ಇನ್ನೂ ನಿರ್ಧಾರ ಕೈಗೊಳ್ಳಬೇಕು ಎನ್ನಲಾಗಿದೆ. ಇದೇ ವೇಳೆ ಸವದಿ ಅವರು ಕಾಂಗ್ರೆಸ್ ಸೇರುವ ಆಕಾಂಕ್ಷೆ ವ್ಯಕ್ತಪಡಿಸಿರುವುದನ್ನು ರಾಜ್ಯ ನಾಯಕರು ಹೈಕಮಾಂಡ್ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಮೂಲಗಳು ಹೇಳಿವೆ.
ಇದಲ್ಲದೆ, ಕಾಂಗ್ರೆಸ್‌ನ ಹಾಲಿ ಶಾಸಕಿ ಕುಸುಮಾ ಶಿವಳ್ಳಿ ಅವರ ಕುಂದಗೋಳ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿಯ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಅವರು ಸಹ ಪಕ್ಷದ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಬಾರಿ ಕುಂದಗೋಳ ಕ್ಷೇತ್ರದಲ್ಲಿ ಹಾಲಿ ಶಾಸಕರನ್ನು ಬದಲಾಯಿಸುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕತ್ವವಿದೆ. ಇದೇ ವೇಳೆ ಬಿಜೆಪಿ ಟಿಕೆಟ್ ವಂಚಿತ ಚಿಕ್ಕನಗೌಡರ ಅವರು ಸಹ ಪಕ್ಷದ ಸಂಪರ್ಕಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಸುಮಾ ಬದಲಾಗಿ ಚಿಕ್ಕನಗೌಡರ ಅವರಿಗೆ ಟಿಕೆಟ್ ನೀಡುವ ಪ್ರಸ್ತಾಪವನ್ನು ರಾಜ್ಯ ನಾಯಕತ್ವ ಹೈಕಮಾಂಡ್ ಮುಂದಿಟ್ಟಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಆ ಪಕ್ಷದಲ್ಲಿ ಬಿರುಗಾಳಿ ಆರಂಭವಾಗಿದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರುವ ನಾಯಕರ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ. ಪರಿಣಾಮ ಸಾವಿರಾರು ಬಿಜೆಪಿ ನಾಯಕರು, ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಅಚ್ಚರಿ ಹೆಸರುಗಳನ್ನು ಮುಂದೆ ತೆರೆದಿಡುತ್ತೇನೆ. ಈ ಬೆಳವಣಿಗೆಯಿಂದ ಬಿಜೆಪಿಯವರಿಗೆ ನಡುಕ ಹುಟ್ಟಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.