ಬೆಂಗಳೂರು(ಡಿ.11):  ಈವರೆಗೆ ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡುತ್ತಿದ್ದ ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‌ಬುಕ್‌ ಖಾತೆಗಳನ್ನು ಇನ್ನು ಮುಂದೆ ತಾವೇ ನಿರ್ವಹಣೆ ಮಾಡುವ ಮೂಲಕ ಪಾಲಿಕೆ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಪಾಲಿಕೆಗೆ ಮಾಸಿಕ ವೆಚ್ಚವಾಗುತ್ತಿದ್ದ 7.17 ಲಕ್ಷ ಉಳಿತಾಯ ಮಾಡಲು ನಿರ್ಧರಿಸಿದ್ದಾರೆ.

ಬಿಬಿಎಂಪಿ ಆಯುಕ್ತರ ಟ್ವಿಟರ್‌ ಮತ್ತು ಫೇಸ್‌ಬುಕ್‌ ಖಾತೆಯಲ್ಲಿ ಸಭೆ- ಸಮಾರಂಭ, ಕಾಮಗಾರಿ ತಪಾಸಣೆ ಸೇರಿದಂತೆ ಇನ್ನಿತರೆ ವಿಚಾರಗಳನ್ನು ಪ್ರಚಾರಕ್ಕೆ ಮಾಸಿಕ 7.17ಲಕ್ಷಗಳನ್ನು ಮಾರ್ಕೆಟಿಂಗ್‌ ಕಮ್ಯೂನಿಕೇಷನ್‌ ಮತ್ತು ಅಡ್ವರ್‌ಟೈಸಿಂಗ್‌ ಸಂಸ್ಥೆಗೆ ಟೆಂಡರ್‌ ನೀಡಲಾಗಿತ್ತು. ಗುತ್ತಿಗೆ ಪಡೆದ ಸಂಸ್ಥೆ ಆಯುಕ್ತರು ಪ್ರತಿ ದಿನ ನಡೆಸುವ ಸಭೆ- ಸಮಾರಂಭದ ಫೋಟೋ, ವಿಡಿಯೋಗಳಿಗೆ ತಲೆ ಬರಹ ಬರೆದು ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡುತ್ತಿತ್ತು.

'ಬೆಂಗಳೂರಲ್ಲಿ ಕೊರಿಯಾ ಕಾನ್ಸುಲ್‌ ಕಚೇರಿ ಆರಂಭಕ್ಕೆ ಅವಕಾಶ ನೀಡಿ’

ಕಳೆದ ಜುಲೈನಲ್ಲಿಯೇ ಮುಕ್ತಾಯವಾಗಿದ್ದ ಟೆಂಡರನ್ನು ಸೆಪ್ಟಂಬರ್‌ ಅಂತ್ಯದವರೆಗೆ ಮುಂದುವರಿಸಲಾಗಿತ್ತು. ಇದೀಗ ಮತ್ತೆ ಡಿಸೆಂಬರ್‌ ಅಂತ್ಯದವರೆಗೆ ಮುಂದುವರೆಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಕೇವಲ ಟ್ವಿಟರ್‌ ಮತ್ತು ಫೇಸ್‌ಬುಕ್‌ ನಿರ್ವಹಣೆಗೆ ಮಾಸಿಕ 7.17 ಲಕ್ಷ ರು. ಖರ್ಚು ಕಡಿಮೆ ಮಾಡಲು ಗುತ್ತಿಗೆ ಸಂಸ್ಥೆಗೆ ಪ್ರಚಾರ ಕಾರ್ಯ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.

ಬಿಬಿಎಂಪಿ ಆಯುಕ್ತರ ಮಾದರಿಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರ ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆ ನಿರ್ವಹಣೆಯ ದುಬಾರಿ ವೆಚ್ಚ ಕಡಿವಾಣ ಹಾಕುವ ಸಾಧ್ಯತೆ ಕಂಡು ಬರುತ್ತಿವೆ.
ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು, ಆಯುಕ್ತರ ಟ್ವಿಟರ್‌ ಮತ್ತು ಫೇಸ್‌ಬುಕ್‌ ಖಾತೆಯಲ್ಲಿ ಫೋಟೋ ಹಾಕಿ ಎರಡು ಸಾಲು ಕಾರ್ಯಕ್ರಮದ ಬಗ್ಗೆ ಬರೆಯುವುದಕ್ಕೆ ಇಷ್ಟೊಂದು ಹಣ ವೆಚ್ಚವಾಗುತ್ತಿತ್ತು. ಹಾಗಾಗಿ, ಖಾಸಗಿ ಸಂಸ್ಥೆಗೆ ನೀಡಲಾದ ನಿರ್ವಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಮುಂದೆ ತಾವೇ ತಮ್ಮ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಖಾತೆಗಳನ್ನು ನಿರ್ವಹಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.