ಪಿಯುಸಿ ಪೂರ್ಣಗೊಳಿಸಿದ ಬಳಿಕ ಅಖಿಲ ಭಾರತ ಮಟ್ಟದ UPSC ಪರೀಕ್ಷೆಯಲ್ಲಿ 42ನೇ ರ‍್ಯಾಂಕ್ ಪಡೆದು, ಇದೀಗ ಭಾರತೀಯ ವಾಯುಪಡೆಯ ಅತ್ಯಾಧುನಿಕ ರಫೇಲ್ ಯುದ್ಧವಿಮಾನದ ಸಂಪೂರ್ಣ ಕಾರ್ಯಾಚರಣಾ ಪೈಲಟ್ ಆಗಿ ಗುರುತಿಸಿಕೊಂಡಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ.

ಪಿಯುಸಿ ಪೂರ್ಣಗೊಳಿಸಿದ ಬಳಿಕ ಅಖಿಲ ಭಾರತ ಮಟ್ಟದ UPSC ಪರೀಕ್ಷೆಯಲ್ಲಿ 42ನೇ ರ‍್ಯಾಂಕ್ ಪಡೆದು, ಇದೀಗ ಭಾರತೀಯ ವಾಯುಪಡೆಯ ಅತ್ಯಾಧುನಿಕ ರಫೇಲ್ ಯುದ್ಧವಿಮಾನದ ಸಂಪೂರ್ಣ ಕಾರ್ಯಾಚರಣಾ ಪೈಲಟ್ ಆಗಿ ಗುರುತಿಸಿಕೊಂಡಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ. ಶೈಕ್ಷಣಿಕ ಸಾಧನೆ, ಶಿಸ್ತು ಮತ್ತು ಸತತ ಪರಿಶ್ರಮದ ಮೂಲಕ ಅವರು ಸಾಧಿಸಿರುವ ಈ ಮೈಲಿಗಲ್ಲು ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯವರಾದ ಪ್ರಜ್ವಲ್ ಶೆಟ್ಟಿ, ಪಿಯುಸಿ ಶಿಕ್ಷಣ ಮುಗಿಸಿದ ಬಳಿಕ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA), ಪುಣೆಗೆ ಪ್ರವೇಶ ಪಡೆಯಲು ನಡೆದ ಅಖಿಲ ಭಾರತ UPSC ಪರೀಕ್ಷೆಯಲ್ಲಿ 42ನೇ ರ‍್ಯಾಂಕ್ ಗಳಿಸಿದ್ದರು. ಬಳಿಕ ಎನ್‌ಡಿಎಯಲ್ಲಿ ಮೂರು ವರ್ಷಗಳ ಕಠಿಣ ಸೇನಾ ತರಬೇತಿ ಪಡೆದರು. ಈ ಅವಧಿಯಲ್ಲಿ ಸೂಪರ್ ಡಿಮೋನಾ ವಿಮಾನದಲ್ಲಿ ಹಾರಾಟದ ತರಬೇತಿಯನ್ನೂ ಪಡೆದು, ತಮ್ಮ ಭವಿಷ್ಯದ ವಾಯುಪಡೆಯ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಂಡರು.

ವಾಯುಪಡೆ ಅಕಾಡೆಮಿಯಲ್ಲಿ ಪ್ರಥಮ ಸ್ಥಾನ

ಎನ್‌ಡಿಎ ತರಬೇತಿ ಪೂರ್ಣಗೊಳಿಸಿದ ಬಳಿಕ ಹೈದರಾಬಾದ್‌ನ ವಾಯುಪಡೆ ಅಕಾಡೆಮಿಗೆ ಸೇರ್ಪಡೆಯಾದ ಪ್ರಜ್ವಲ್, ಅಲ್ಲಿ ಒಂದು ವರ್ಷದ ಹಾರಾಟದ ತರಬೇತಿ ಪಡೆದರು. ಈ ಸಂದರ್ಭದಲ್ಲಿ ಪಿಲಾಟಸ್ ಮತ್ತು ಕಿರಣ್ ವಿಮಾನಗಳಲ್ಲಿ ತರಬೇತಿ ಪಡೆದ ಅವರು, ವಾಯುಯಾನ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು. ಜೊತೆಗೆ ಬಿ.ಟೆಕ್ ಪದವಿಯನ್ನೂ ಪಡೆದುಕೊಂಡರು. 2022ರ ಡಿಸೆಂಬರ್‌ನಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ಅಧಿಕಾರಿಯಾಗಿ ನೇಮಕಗೊಂಡರು. ನಂತರ ಪಶ್ಚಿಮ ಬಂಗಾಳದ ಕಲೈಕುಂಡಾದಲ್ಲಿ ಹಾಕ್ ವಿಮಾನದಲ್ಲಿ ಒಂದು ವರ್ಷದ ಮೂಲ ಯುದ್ಧವಿಮಾನ ತರಬೇತಿ ಪಡೆದರು. ಇಲ್ಲಿಯೂ ವಾಯುಯಾನ ವಿಷಯಗಳಲ್ಲಿ ಮೊದಲ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಈಗ ರಫೇಲ್ ಯುದ್ಧವಿಮಾನದ ಸಂಪೂರ್ಣ ಕಾರ್ಯಾಚರಣಾ ಪೈಲಟ್

ಹಂತ ಹಂತವಾಗಿ ಕಠಿಣ ತರಬೇತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಜ್ವಲ್ ಅವರಿಗೆ ಭಾರತೀಯ ವಾಯುಪಡೆಯ ಅತ್ಯಾಧುನಿಕ ಬಹುಪಾತ್ರ ನಿರ್ವಹಣೆಯ ರಫೇಲ್ ಯುದ್ಧವಿಮಾನವನ್ನು ಹಾರಿಸುವ ಅವಕಾಶ ದೊರೆಯಿತು. ಹರಿಯಾಣದ ಅಂಬಾಲಾ ವಾಯುನೆಲೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ಭಾರತೀಯ ವಾಯುಪಡೆಯ 17ನೇ ಸ್ಕ್ವಾಡ್ರನ್‌ಗೆ ಅವರು ನಿಯೋಜನೆಗೊಂಡರು. ಈ ಸ್ಕ್ವಾಡ್ರನ್‌ ಅನ್ನು 'ಗೋಲ್ಡನ್ ಆರೋಸ್' ಎಂದೇ ಕರೆಯಲಾಗುತ್ತದೆ.ರಫೇಲ್ ವಿಮಾನದಲ್ಲಿ ಅಗತ್ಯವಿರುವ ವಿಶೇಷ ತರಬೇತಿ ಹಾಗೂ ಕನ್ವರ್ಷನ್ ತರಬೇತಿಯನ್ನು ಪೂರ್ಣಗೊಳಿಸಿರುವ ಪ್ರಜ್ವಲ್, ಇದೀಗ ಸಂಪೂರ್ಣ ಕಾರ್ಯಾಚರಣೆಗೆ ಸಿದ್ಧವಾಗಿರುವ ರಫೇಲ್ ಫೈಟರ್ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

'ವಿಂಗ್ಸ್ ಓವರ್ ಗಂಗಾಸ್' ವೈಮಾನಿಕ ಪ್ರದರ್ಶನದಲ್ಲಿ ಪ್ರಜ್ವಲ್ ಸಾಧನೆ

ಪ್ರಜ್ವಲ್ ಅವರ ವೃತ್ತಿಜೀವನದ ಮತ್ತೊಂದು ಪ್ರಮುಖ ಸಾಧನೆ ಎಂದರೆ 2026ರ ಅಕ್ಟೋಬರ್ 25ರಂದು ವಾರಾಣಸಿಯಲ್ಲಿ ನಡೆದ 'ವಿಂಗ್ಸ್ ಓವರ್ ಗಂಗಾಸ್' ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದು. ಭಾರತೀಯ ವಾಯುಪಡೆಯ 94ನೇ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ ಈ ಪ್ರದರ್ಶನ ಆಯೋಜಿಸಲಾಗಿತ್ತು. ಮೂರು ರಫೇಲ್ ಯುದ್ಧವಿಮಾನಗಳನ್ನು ಒಳಗೊಂಡ 'ನೀಲಕಂಠ' ರಚನೆಯ ಭಾಗವಾಗಿ ಪ್ರಜ್ವಲ್ ಹಾರಾಟ ನಡೆಸಿದರು. ಈ ತಂಡದಲ್ಲಿ ಅವರು ಮಧ್ಯದ ಪ್ರಮುಖ ಸ್ಥಾನವನ್ನು (ಲೀಡ್ ಪೊಸಿಷನ್) ವಹಿಸಿದ್ದರು. ಇಂತಹ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲು ಅತ್ಯಂತ ನಿಖರತೆ, ಸಮನ್ವಯ ಮತ್ತು ವೃತ್ತಿಪರ ಕೌಶಲ್ಯದ ಅಗತ್ಯವಿರುತ್ತದೆ. ಪ್ರಜ್ವಲ್ ಅವರ ಭಾಗವಹಿಸುವಿಕೆ ಅವರ ತರಬೇತಿ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ದಕ್ಷಿಣ ಕನ್ನಡದ ಕುಟುಂಬಕ್ಕೆ ಹೆಮ್ಮೆ ತಂದ ಸಾಧನೆ

ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಉಳಿತೊಟ್ಟಿನ ರಮೇಶ್ ಶೆಟ್ಟಿ ಮತ್ತು ಕೊಡೇತೂರು ಮೂಡು ದೇವಸ್ಯದ ಸೀತಾ ಆರ್. ಶೆಟ್ಟಿ ದಂಪತಿಯ ಪುತ್ರ. ಪಿಯುಸಿ ಬಳಿಕ UPSC ಪರೀಕ್ಷೆಯಲ್ಲಿ 42ನೇ ರ‍್ಯಾಂಕ್ ಪಡೆದು, ಎನ್‌ಡಿಎಯಲ್ಲಿ ತರಬೇತಿ ಮುಗಿಸಿ, ಇದೀಗ ದೇಶದ ಅತ್ಯಾಧುನಿಕ ರಫೇಲ್ ಯುದ್ಧವಿಮಾನದ ಕಾರ್ಯಾಚರಣಾ ಪೈಲಟ್ ಆಗಿರುವ ಅವರ ಸಾಧನೆ ಕುಟುಂಬದ ಜೊತೆಗೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದೆ.

ಪ್ರಜ್ವಲ್ ಅವರ ಈ ಯಶೋಗಾಥೆ ಭಾರತೀಯ ಸೇನೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಕನಸು ಕಾಣುತ್ತಿರುವ ಯುವಜನರಿಗೆ ದೊಡ್ಡ ಪ್ರೇರಣೆಯಾಗಿದೆ. ಗುರಿಯ ಬಗ್ಗೆ ಸ್ಪಷ್ಟತೆ, ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಪ್ರಯತ್ನವಿದ್ದರೆ ಎಂತಹ ಎತ್ತರದ ಸಾಧನೆಯನ್ನೂ ಮಾಡಬಹುದು ಎಂಬುದಕ್ಕೆ ಅವರ ಪಯಣವೇ ಸಾಕ್ಷಿ.