ಕರಾವಳಿಯ ಮೊದಲ ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ರೈಲು ವೇಳಾಪಟ್ಟಿ, ಟಿಕೆಟ್‌ ದರ ಇಲ್ಲಿದೆ

ಮಂಗಳೂರು-ಮಡ್ಗಾಂವ್‌ ಸೇರಿದಂತೆ ದೇಶದ ಆರು ಕಡೆಗಳಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ಎರಡು ಅಮೃತ್‌ ಭಾರತ್‌ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶನಿವಾರ ಹಸಿರು ನಿಶಾನೆ ತೋರಿಸಿದರು.

Mangaluru-Madgaon coastal karnataka first Vande Bharat Express ticket price gow

ಮಂಗಳೂರು (ಡಿ.31): ಮಂಗಳೂರು-ಮಡ್ಗಾಂವ್‌ ಸೇರಿದಂತೆ ದೇಶದ ಆರು ಕಡೆಗಳಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ಎರಡು ಅಮೃತ್‌ ಭಾರತ್‌ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶನಿವಾರ ಹಸಿರು ನಿಶಾನೆ ತೋರಿಸಿದರು. ಇದರೊಂದಿಗೆ ಮಂಗಳೂರು-ಗೋವಾ ಪ್ರಧಾನ ನಗರಗಳನ್ನು ಬೆಸೆಯುವ ಸೆಮಿ ಹೈಸ್ಪೀಡ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಿಂದ ಮಡ್ಗಾಂವ್‌ಗೆ ಪ್ರಥಮ ಪ್ರಯಾಣ ಆರಂಭಿಸಿತು. ಕರ್ನಾಟಕ ಕರಾವಳಿಯಲ್ಲಿ ಆರಂಭವಾದ ಮೊದಲ ವಂದೇ ಭಾರತ್‌ ರೈಲು ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಒಂದನೇ ಫ್ಲ್ಯಾಟ್‌ ಫಾರಂನಲ್ಲಿ ನಡೆದ ಔಪಚಾರಿಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್‌, ದೇಶದಲ್ಲಿ 2014ರ ಬಳಿಕ ಪರಿವರ್ತನೆ ಯುಗ ಆರಂಭವಾಗಿದೆ. ರೈಲ್ವೆ ಇಲಾಖೆಯಲ್ಲಿ ಅದ್ಭುತ ಪರಿವರ್ತನೆ, ಆಮೂಲಾಗ್ರ ಬದಲಾವಣೆ ಆಗಿದೆ ಎಂದರು.

ಏಪ್ರಿಲ್‌ಗೆ ಬೆಂಗಳೂರಿಗೆ ವಂದೇ ಭಾರತ್‌:

ಮಂಗಳೂರಿನಿಂದ ಬೆಂಗಳೂರಿಗೆ ವಂದೇ ಭಾರತ್ ರೈಲಿನ ಬೇಡಿಕೆ ಇದೆ. ರೈಲ್ ಹಳಿ 90 ಕಿ.ಮೀ.ನಷ್ಟು ವಿದ್ಯುದೀಕರಣ ಬಾಕಿ ಇದ್ದು, ಮಾರ್ಚ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹಾಗಾದರೆ ಏಪ್ರಿಲ್‌ನಲ್ಲಿ ಬೆಂಗಳೂರಿಗೆ ವಂದೇ ಭಾರತ್ ಸಂಚಾರ ಆರಂಭ ಆಗಲಿದೆ ಎಂದರು.

ಮಡ್ಗಾಂವ್‌ನಿಂದ ಮುಂಬೈ ಲಿಂಕ್‌ ರೈಲು:

ತಿರುವನಂತಪುರ-ಕಾಸರಗೋಡು ವಂದೇ ಭಾರತ್‌ ರೈಲು ಮಂಗಳೂರಿಗೆ ವಿಸ್ತರಣೆ, ಕೊಚ್ಚಿನ್‌-ಮಂಗಳೂರು ವಂದೇ ಭಾರತ್‌ ರೈಲಿಗೆ ಬೇಡಿಕೆ ಸಲ್ಲಿಸಲಾಗಿದೆ. ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ರೈಲಿಗೆ ಮಡ್ಗಾಂವ್‌ನಿಂದ ಮುಂಬೈ ಪ್ರಯಾಣಕ್ಕೆ ಇನ್ನೊಂದು ವಂದೇ ಭಾರತ್‌ ರೈಲು ಸಂಪರ್ಕ ಸಾಧ್ಯವಿದೆ. ಇದು ಕೇವಲ 10 ಗಂಟೆಯಲ್ಲಿ ಮುಂಬೈ ತಲುಪಲು ಸಾಧ್ಯವಾಗಲಿದೆ ಎಂದರು.

ಮಂಗಳೂರಿನಲ್ಲಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ 2,637 ಕೋಟಿ ರು. ಮೊತ್ತ ನೀಡಿದೆ. ಹೊಸ ಫ್ಲ್ಯಾಟ್‌ಫಾರಂ ರಚನೆ, ಸೆಂಟ್ರಲ್‌, ಜಂಕ್ಷನ್‌, ಸುಬ್ರಹ್ಮಣ್ಯ ಮಾರ್ಗ, ಪುತ್ತೂರು, ಬಂಟ್ವಾಳ ನಿಲ್ದಾಣಗಳ ಅಭಿವೃದ್ಧಿ, ರೈಲ್ವೆ ಮೇಲ್ಸೇತುವೆ, ಕೆಳಸೇತುವೆ ರಚನೆಗೆ ಅನುದಾನ ನೀಡಲಾಗಿದೆ ಎಂದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಮಾತನಾಡಿ, 35 ವರ್ಷಗಳಲ್ಲಿ ಹೊಸ ಫ್ಲ್ಯಾಟ್‌ ಫಾರ್ಮ್ ಆಗಿರಲಿಲ್ಲ. ಇದೀಗ 4 ಮತ್ತು 5 ಫ್ಲ್ಯಾಟ್ ಫಾರ್ಮ್ ಆಗಿದೆ. ಈ ಮೂಲಕ ಮಂಗಳೂರು, ಗೋವಾ ಸೇರಿದಂತೆ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಸಿಗಲಿದೆ ಎಂದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಮಂಗಳೂರು-ಮುಂಬೈ ನಡುವೆ ಅಮೃತ್ ಭಾರತ್‌ ರೈಲು ಸಂಚಾರ ಆರಂಭವಾಗಲಿದ್ದು, ಇದು ಕೂಡ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದರು.

ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಉಪ ಮೇಯರ್ ಸುನೀತ, ಪಾಲಿಕೆ ಸದಸ್ಯ ವಿನಯ್ ರಾಜ್, ಫಾಲ್ಫಾಟ್ ವಿಭಾಗೀಯ ಡಿಆರ್‌ಎಂ ಅರುಣ್ ಕುಮಾರ್ ಚತುರ್ವೇದಿ, ಎಡಿಆರ್‌ಎಂ ಜಯಕೃಷ್ಣನ್ ಇದ್ದರು.

ಕೇವಲ 4.12 ಗಂಟೆಯಲ್ಲಿ ಮಡ್ಗಾಂವ್‌ ತಲುಪಿದ ರೈಲು

ಮಂಗಳೂರು ಸೆಂಟ್ರಲ್‌ನಿಂದ ವಂದೇ ಭಾರತ್‌ ಉದ್ಘಾಟನಾ ರೈಲು ಬೆಳಗ್ಗೆ 11 ಗಂಟೆಗೆ ಹೊರಡುವುದಾಗಿ ನಿಗದಿಪಡಿಸಲಾಗಿತ್ತು. ಬಳಿಕ ಬೇಗನೆ ಉದ್ಘಾಟನಾ ಕಾರ್ಯಕ್ರಮ ನೆರವೇರುವುದರಿಂದ 10.30ಕ್ಕೆ ಹೊರಡುವುದು ಎಂದು ತಿಳಿಸಲಾಗಿತ್ತು. ಆದರೆ ಉದ್ಘಾಟನಾ ಕಾರ್ಯಕ್ರಮ ವಿಳಂಬವಾಗಿ ನೆರವೇರಿದ ಕಾರಣ ವಂದೇ ಭಾರತ್ ರೈಲು ಮಧ್ಯಾಹ್ನ 12.12ಕ್ಕೆ ಸೆಂಟ್ರಲ್‌ನಿಂದ ಪ್ರಥಮ ಯಾನ ಆರಂಭಿಸಿತು.

ಸುರತ್ಕಲ್‌ನಲ್ಲಿ ಈ ರೈಲಿಗೆ ಪುಷ್ಪವೃಷ್ಟಿ ಮಾಡಲಾಯಿತು. ಉಡುಪಿಗೆ ಮಧ್ಯಾಹ್ನ 1.22ಕ್ಕೆ ತಲುಪಿ, 1.30ಕ್ಕೆ ಹೊರಟಿತು. ಅಲ್ಲಿ ಕೂಡ ರೈಲಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಯಶ್‌ಪಾಲ್‌ ಸುವರ್ಣ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ರೈಲ್ವೆ ಹೋರಾಟಗಾರರು ಸ್ವಾಗತ ಕೋರಿದರು. ಕಾರವಾರಕ್ಕೆ ಸಂಜೆ 3.30ಕ್ಕೆ ತಲುಪಿದ್ದು, ಅಲ್ಲಿ ಕೂಡ ರೈಲಿಗೆ ಸ್ವಾಗತ ಸಿಕ್ಕಿತು. ಅಲ್ಲಿಂದ 3.40ಗೆ ಹೊರಟು, ಸಂಜೆ 4.24ಕ್ಕೆ ಮಡ್ಗಾಂವ್‌ ತಲುಪಿತು. ಈ ರೈಲು ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸಿದ್ದು, ಸರಾಸರಿ ಸಂಚಾರದ ವೇಗ 69.5 ಕಿ.ಮೀ. ಆಗಿದೆ. ಈ ರೈಲು ಒಟ್ಟು 8 ಕೋಚ್‌ಗಳನ್ನು ಹೊಂದಿದೆ. ಉದ್ಘಾಟನಾ ರೈಲನ್ನು ಲೋಕೋ ಪೈಲಟ್‌ ಆಗಿ ಎಚ್‌.ಎಸ್‌.ಪಡುವಳ್‌ ಮತ್ತು ಸಿ.ದಿನೇಶ್‌ ಮುನ್ನಡೆಸಿದ್ದರು, ರೈಲು ಮೆನೇಜರ್‌ ದತ್ತಾತ್ರೇಯ ಹೆಗಡೆ ಇದ್ದರು.

ಮಂಗಳೂರು-ಮಡ್ಗಾಂವ್‌ ನಡುವಿನ 319 ಕಿ.ಮೀ. ದೂರವನ್ನು ಈ ರೈಲು 4.35 ಗಂಟೆಯಲ್ಲಿ ಕ್ರಮಿಸಲಿದೆ. ಗುರುವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ರೈಲು ಸಂಚಾರ ಇರುತ್ತದೆ. ಮಂಗಳೂರು ಸೆಂಟ್ರಲ್‌-ಮುಂಬೈ ಸಿಎಸ್‌ಟಿ ರೈಲು ಮಡ್ಗಾಂವ್‌ ಕ್ರಮಿಸಲು 5.55 ಗಂಟೆ ತೆಗೆದುಕೊಳ್ಳುತ್ತದೆ, ವಂದೇ ಭಾರತ್‌ ಸಂಚಾರದಲ್ಲಿ 1.10 ಗಂಟೆ ಉಳಿತಾಯವಾಗಲಿದೆ.

ಪಾಸ್‌ ಇದ್ದರೂ ರೈಲು ಹತ್ತಲಾಗದೆ ನಿರಾಶೆ

ಉದ್ಘಾಟನಾ ರೈಲಿನಲ್ಲಿ ಜನಪ್ರತಿನಿಧಿಗಳು, ಮಾಧ್ಯಮ, ರೈಲ್ವೆ ಹೋರಾಟಗಾರರು ಸೇರಿದಂತೆ ಜನಸಾಮಾನ್ಯರೂ ಪ್ರಯಾಣಿಸಿದರು. ಉದ್ಘಾಟನಾ ರೈಲಿನಲ್ಲಿ ಉಚಿತ ಸಂಚಾರದ ಅವಕಾಶ ಇದ್ದರೂ ರೈಲ್ವೆ ಅಧಿಕಾರಿಗಳು ಎಲ್ಲರಿಗೆ ಪಾಸ್‌ ವಿತರಿಸಿ ಸೀಟು ನಿಗದಿಪಡಿಸಿದ್ದರು. ಹೀಗಿದ್ದರೂ ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಹೊರಡುವಾಗ ಕಿಕ್ಕಿರಿದ ಪ್ರಯಾಣಿಕರು ಇದ್ದುದರಿಂದ ಪಾಸ್‌ ಪಡೆದ ಕೆಲವು ಮಂದಿಗೆ ರೈಲು ಹತ್ತಲಾಗದೆ ನಿರಾಶೆ ಪಡಬೇಕಾಯಿತು. 600ರಷ್ಟು ಸೀಟು ಲಭ್ಯತೆ ಈ ರೈಲಿನಲ್ಲಿ ಎಲ್ಲ 8 ಕೋಚ್‌ಗಳೂ ಭರ್ತಿಯಾಗಿ ಪ್ರಯಾಣಿಕರು ನಿಂತುಕೊಂಡೇ ಪ್ರಯಾಣಿಸಿದರು.

ರೈಲಿನಲ್ಲಿ ಘೋಷಣೆ, ಸೆಲ್ಫಿ ಸಂಭ್ರಮ: ಮಂಗಳೂರಿನಿಂದ ಹೊರಟ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲಿನಲ್ಲಿ ಉದ್ಘಾಟನಾ ಸಂಭ್ರಮದ ಘೋಷಣೆ, ಸೆಲ್ಫಿ ಸಂಭ್ರಮಕ್ಕೆ ಸಾಕ್ಷಿಯಾಯಿತು. ಮಂಗಳೂರಿನಿಂದ ರೈಲು ಹೊರಡುತ್ತಿದ್ದಂತೆ ಭಾರತ್‌ ಮಾತಾಕೀ ಜೈ, ಪ್ರಧಾನಿ ನರೇಂದ್ರ ಮೋದಿ, ಸಂಸದ ನಳಿನ್‌ ಕುಮಾರ್‌, ಶಾಸಕ ವೇದವ್ಯಾಸ್ ಕಾಮತ್‌ಗೆ ಜೈಕಾರ ಕೇಳಿಬಂತು. ರೈಲು ಉಡುಪಿ ನಿಲ್ದಾಣ ತಲುಪುತ್ತಿದ್ದಂತೆ ಮೋದಿ, ಮೋದಿ ಘೋಷಣೆ ಮುಗಿಲು ಮುಟ್ಟಿತ್ತು. ಶಾಲಾ ಮಕ್ಕಳ ದಂಡು, ಬಿಜೆಪಿ ಪಕ್ಷದ ಕಾರ್ಯಕರ್ತರು ಕೂಡ ಘೋಷಣೆ ಕೂಗಿದರು.

ಸಂಸದ ನಳಿನ್‌ ಕುಮಾರ್‌, ಶಾಸಕ ವೇದವ್ಯಾಸ್‌ ಕಾಮತ್‌ ಎಲ್ಲ ಕೋಚ್‌ಗಳಿಗೆ ತೆರಳಿ ಪ್ರಯಾಣಿಕರ ಅನುಭವ ತಿಳಿದುಕೊಂಡರು. ವಂದೇ ಭಾರತ್‌ ರೈಲು ಸುಗಮ, ತ್ವರಿತ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದರು. ಗಣ್ಯರು ಉಪಸ್ಥಿತರಿದ್ದ ಕೋಚ್‌ನಲ್ಲೇ ಎಲ್‌ಇಡಿ ಮೂಲಕ ಪ್ರಧಾನಿ ರೈಲು ಸಂಚಾರಕ್ಕೆ ಚಾಲನೆ ನೀಡುವುದನ್ನು ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರೈಲಿನಲ್ಲಿ ಎಲ್ಲ ಪ್ರಯಾಣಿಕರಿಗೆ ಮಧ್ಯಾಹ್ನದ ಫಲಾಹಾರ ವ್ಯವಸ್ಥೆ ಮಾಡಲಾಗಿತ್ತು.

ಮೆಟ್ರೋ ಮಾದರಿ ರೈಲು ಬೋಗಿ:

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಎಲ್ಲ ಬೋಗಿ ಮೆಟ್ರೋ ರೈಲು ಮಾದರಿಯನ್ನು ಹೊಂದಿದೆ. ಎಲ್ಲ ಕೋಚ್‌ಗಳ ಬಾಗಿಲು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ. ಹಾಗಾಗಿ ಒಮ್ಮೆ ಬಾಗಿಲು ಮುಚ್ಚಿದ ಬಳಿಕ ಮತ್ತೆ ಮುಂದಿನ ನಿಲ್ದಾಣದಲ್ಲಷ್ಟೆ ಬಾಗಿಲು ತೆರೆದುಕೊಳ್ಳುತ್ತದೆ.

ಎಂಟು ಬೋಗಿಗಳ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದ್ದು, ಏರ್ ಲೈನ್ ಮಾದರಿ ಸೀಟುಗಳ ಜೊತೆಗೆ ಎಕ್ಸಿಕ್ಯುಟಿವ್ ಚೇರ್ ಇದೆ. ಆನ್ ಬೋರ್ಡ್ ಸಸ್ಯಾಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ ಇದೆ. ಆನ್‌ಬೋರ್ಡ್ ವೈ-ಫೈ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಔಟ್‌ಲೆಟ್‌ಗಳು ಮತ್ತು ರೀಡಿಂಗ್ ಟೇಬಲ್‌, ಮೇಲ್ಭಾಗದಲ್ಲಿ ಲೈಟ್‌ಗಳ ಸೌಲಭ್ಯ, ಸ್ಮೋಕ್ ಅಲರ್ಟ್, ಸಿಸಿಟಿವಿ ಕ್ಯಾಮೆರಾಗಳು, ಸೆನ್ಸಾರ್ ಆಧಾರಿತ ವಾಶ್ ಬೇಸಿನ್ ಇದರ ವಿಶೇಷತೆ. ಮುಂದಿನ ನಿಲ್ದಾಣ, ರೈಲಿನ ವೇಗ ತಿಳಿಸುವ ಡಿಜಿಟಲ್‌ ಬೋರ್ಡ್‌, ತುರ್ತು ಸಂದರ್ಭ ಸಂವಹನಕ್ಕೆ ಸೀಟಿನ ಮೇಲ್ಭಾಗದಲ್ಲಿ ಬಟನ್‌ ಒತ್ತುವ ಮೂಲಕ ಮಾತನಾಡಿದರೆ, ಕೂಡಲೇ ಪ್ರತಿಕ್ರಿಯೆ ನೀಡುವ ವ್ಯವಸ್ಥೆ ಇದರ ವಿಶೇಷತೆ. ಆತ್ಮನಿರ್ಭರ ಭಾರತ್‌ ಪರಿಕಲ್ಪನೆಯಲ್ಲಿ ಸ್ವದೇಶಿಯವಾಗಿ ಈ ರೈಲನ್ನು ನಿರ್ಮಿಸಲಾಗಿದೆ.

ವಂದೇ ಭಾರತ್‌ ದರ 985 ರು., 1,955 ರು.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಎರಡು ರೀತಿಯ ಸೀಟಿಂಗ್‌ ಸೌಲಭ್ಯ ಇದೆ. ಕಾಮನ್‌ ಕಾರ್‌(ಸಿಸಿ) ಹಾಗೂ ಎಕನಾಮಿಕ್‌ ಕಾರ್‌(ಇಸಿ)ಗೆ ಪ್ರತ್ಯೇಕ ಪ್ರಯಾಣ ದರ ಇದೆ. ಬೇಸಿಕ್‌, ರಿಸರ್ವೇಷನ್‌, ಸೂಪರ್ ಫಾಸ್ಟ್‌, ಜಿಎಸ್‌ಟಿ ಜಾರ್ಜ್ ಸೇರಿ ಸಿಸಿಗೆ 985 ರು. ಹಾಗೂ ಇಸಿಗೆ 1,955 ರು. ದರ ನಿಗದಿಪಡಿಸಲಾಗಿದೆ. ಆನ್‌ಲೈನ್‌ ಮೂಲಕ ಮಾತ್ರ ಮುಂಗಡ ಬುಕ್ಕಿಂಗ್‌ ಮಾಡಿ ಸಂಚರಿಸಬೇಕಾಗಿದೆ. ಮುಂಗಡ ಬುಕ್ಕಿಂಗ್ ವೇಳೆ ರೈಲಿನಲ್ಲಿ ಆಹಾರ ಬೇಕಾದರೆ ಅದನ್ನು ಕೂಡ ಒಟ್ಟಿಗೆ ಬುಕ್‌ ಮಾಡಿಕೊಳ್ಳಲು ಅವಕಾಶ ಇದೆ.

ಮಂಗಳೂರು-ಮಡ್ಗಾಂವ್‌ ವೇಳಾಪಟ್ಟಿ :

ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 8.30ಕ್ಕೆ ಹೊರಟು 9.48ಕ್ಕೆ ಉಡುಪಿ, ಮಧ್ಯಾಹ್ನ 12.08 ಗಂಟೆಗೆ ಕಾರವಾರ, 1.15 ಗಂಟೆ ಮಡ್ಗಾಂವ್‌. ಅಲ್ಲಿಂದ ಸಂಜೆ 6.10ಕ್ಕೆ ಹೊರಟು 6.55 ಕಾರವಾರ, ರಾತ್ರಿ 9.12 ಉಡುಪಿ, 10.45 ಮಂಗಳೂರು ಸೆಂಟ್ರಲ್ ತಲುಪಲಿದೆ.

ಈ ರೈಲಿಗೆ ಮಡ್ಗಾಂವ್‌ನಿಂದ ಮುಂಬೈಗೆ ವಂದೇ ಭಾರತ್‌ ರೈಲಿನ ಸಂಪರ್ಕ ಇರಲಿದೆ. ಅದೇ ರೀತಿ ರಾತ್ರಿ ಮಂಗಳೂರು ಸೆಂಟ್ರಲ್‌ಗೆ ಆಗಮಿಸುವ ಈ ರೈಲಿಗೆ ಚೆನ್ನೈ ಎಕ್ಸ್‌ಪ್ರೆಸ್‌ ರೈಲಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಅವರ ವಂದೇ ಭಾರತ್‌ ರೈಲಿನ ಕನಸು ನನಸಾಗಿದೆ. ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ದಾಪುಗಾಲು ಕಾಣುತ್ತಿದೆ. ನಾನು ಚಿತ್ರದುರ್ಗದವನಾಗಿದ್ದು, ಮೊದಲ ಬಾರಿಗೆ ಮಡ್ಗಾಂವ್‌ಗೆ ತೆರಳುತ್ತಿದ್ದೇನೆ.

-ಬಸವರಾಜ, ಪ್ರಯಾಣಿಕ.

ವಂದೇ ಭಾರತ್‌ ರೈಲಿನಲ್ಲಿ ಪ್ರಯಾಣಿಸಲು ಖುಷಿಯಾಗುತ್ತಿದೆ. ಮೆಟ್ರೋ ರೈಲಿನಲ್ಲಿ ಸಂಚರಿಸಿದ ಅನುಭವ ಆಗುತ್ತಿದೆ. ಮುಂದಿನ ಬಾರಿ ಮನೆ ಮಂದಿಯನ್ನು ಕರೆದುಕೊಂಡು ಗೋವಾಕ್ಕೆ ತೆರಳುವ ಉದ್ದೇಶ ಹೊಂದಿದ್ದೇನೆ.

-ಶೋಭಾ ಶೆಟ್ಟಿ, ಉಳ್ಳಾಲ

ಸೂಪರ್‌ ರೈಲು ಇದು, ಮೋದಿಯವರ ಸಾಧನೆ ಏನು ಎಂಬುದು ಇದರಿಂದ ಗೊತ್ತಾಗುತ್ತದೆ. ಕರಾವಳಿ ಜನತೆಗೆ ಇದರ ಪ್ರಯೋಜನ ಸಿಗಲಿ. ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಯಾಗಲಿ.

-ಶಿವ ಮುಡಿಪು, ನಮೋ ಬ್ರಿಗೇಡ್‌ ಸದಸ್ಯ

Latest Videos
Follow Us:
Download App:
  • android
  • ios