*  ಮಂಗಳೂರು ವಿಮಾನ ನಿಲ್ದಾಣದಲ್ಲಿ ತ್ವರಿತ ಆರ್‌ಟಿ-ಪಿಸಿಆರ್‌ ಪರೀಕ್ಷಾ ವ್ಯವಸ್ಥೆ *  ಮಂಗಳೂರಿನಿಂದ ಕೇವಲ ಐದು ಮಂದಿ ಮಾತ್ರ ದುಬೈಗೆ ಪ್ರಯಾಣ *  ಬುಕ್ಕಿಂಗ್‌ಗೆ ಒಂದೇ ದಿನ ಅವಕಾಶ 

ಮಂಗಳೂರು(ಆ.19): ಕೊರೋನಾ 2ನೇ ಅಲೆಯಿಂದಾಗಿ ಸ್ಥಗಿತಗೊಂಡಿದ್ದ ಮಂಗಳೂರು-ದುಬೈ ವಿಮಾನಯಾನ ಮೂರೂವರೆ ತಿಂಗಳ ಬಳಿಕ ಪುನಾರಂಭವಾಗಿದೆ. 

ಮಂಗಳೂರು ವಿಮಾನ ನಿಲ್ದಾಣದಿಂದ ಬುಧವಾರ ಮಧ್ಯಾಹ್ನ 2.45ಕ್ಕೆ ಹೊರಟ ಏರ್‌ ಇಂಡಿಯಾ ವಿಮಾನ ಕೇರಳದ ತಿರುವನಂತಪುರಂ ಮೂಲಕ ದುಬೈಗೆ ಪ್ರಯಾಣ ಬೆಳೆಸಿದೆ. ದುಬೈಗೆ ವಿಮಾನಯಾನ ಆರಂಭಿಸುತ್ತಿರುವ ಬಗ್ಗೆ ಏರ್‌ ಇಂಡಿಯಾ ಕೊನೇ ಕ್ಷಣದಲ್ಲಿ ಘೋಷಣೆ ಮಾಡಿದ್ದರಿಂದ ಮಂಗಳೂರಿನಿಂದ ಕೇವಲ ಐದು ಮಂದಿ ಮಾತ್ರ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಮಂಗಳೂರಿನಿಂದ ನೇರ ದುಬೈಗೆ ಮುಂದಿನ ವಿಮಾನ ಆ.20ರಂದು ಹೊರಡಲಿದ್ದು, ಹೆಚ್ಚಿನ ಪ್ರಯಾಣಿಕರನ್ನು ನಿರೀಕ್ಷಿಸಲಾಗಿದೆ.

ಭಾರತದಿಂದ ಆಗಮಿಸುವ ಪ್ರಯಾಣಿಕರು ಭಾರತದಿಂದ ಹೊರಡುವ 48 ಗಂಟೆ ಮೊದಲು ನಡೆಸಿದ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರುವುದನ್ನು ದುಬೈ ಆಡಳಿತ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅರ್ಧ ಗಂಟೆಯೊಳಗೆ ವರದಿ ನೀಡುವ ಅತ್ಯಾಧುನಿಕ ಪರೀಕ್ಷಾ ತಂತ್ರಜ್ಞಾನ ಅಳವಡಿಸಲಾಗಿದ್ದು, ಬುಧವಾರ ಎಲ್ಲ ಪ್ರಯಾಣಿಕರ ಪರೀಕ್ಷೆ ನಡೆಸಿ ನೆಗೆಟಿವ್‌ ವರದಿ ದೃಢೀಕರಿಸಿ ಕಳುಹಿಸಲಾಗಿದೆ. ಪ್ರಸ್ತುತ ಅಂಥ 30 ಯಂತ್ರಗಳನ್ನು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರೀಕ್ಷಾ ಯಂತ್ರಗಳನ್ನು ಸ್ಥಾಪಿಸುವ ಉದ್ದೇಶವಿದೆ.

ದೆಹಲಿ-ಬೆಳಗಾವಿ ಮಧ್ಯೆ ವಿಮಾನ ಶುರು

ಭಾರತದಲ್ಲಿ ಕೊರೋನಾ ಅಲೆ ಏರಿಕೆ ಗತಿಯಲ್ಲಿ ಸಾಗುತ್ತಿದ್ದಾಗ ಏ.25ರಿಂದ ಭಾರತೀಯ ಪ್ರಯಾಣಿಕರಿಗೆ ಯುಎಇ ಪ್ರವೇಶ ನಿರಾಕರಿಸಿತ್ತು. ಆ.5ರಂದು ಹಲವು ಷರತ್ತು ವಿಧಿಸಿ ಭಾರತದ ಪ್ರಯಾಣಿಕರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿತ್ತು. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ತ್ವರಿತ ಆರ್‌ಟಿ-ಪಿಸಿಆರ್‌ ಪರೀಕ್ಷಾ ವ್ಯವಸ್ಥೆ ಲಭ್ಯವಿಲ್ಲದ ಕಾರಣ ವಿಮಾನಯಾನ ಆರಂಭವಾಗಿರಲಿಲ್ಲ.

ಬುಕ್ಕಿಂಗ್‌ಗೆ ಒಂದೇ ದಿನ ಅವಕಾಶ!: 

ದುಬೈಗೆ ವಿಮಾನಕ್ಕೆ ಕೇವಲ ಒಂದು ದಿನ ಮುಂಚಿತವಾಗಿ (ಮಂಗಳವಾರ) ಬುಕ್ಕಿಂಗ್‌ ಆರಂಭಿಸಿದ್ದರಿಂದ ಮೊದಲ ದಿನ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಗುರುವಾರ ಅಬುದಾಭಿಗೆ ವಿಮಾನ ಹೊರಡಲಿದ್ದು, ಈಗಾಗಲೇ 78 ಮಂದಿ ಟಿಕೆಟ್‌ ಕಾಯ್ದಿರಿಸಿದ್ದಾರೆ. ಈ ಸಂಖ್ಯೆ ನಾಳೆಯ ಹೊತ್ತಿಗೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಏರ್‌ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.