Mangaluru: ಸೆ. 9ರಂದು ಮಂಗ್ಳೂರು ಮೇಯರ್ ಚುನಾವಣೆ: ದಕ್ಷಿಣೋತ್ತರ ಕ್ಷೇತ್ರಗಳ ನಡುವೆಯೇ ಪೈಪೋಟಿ..!
ಮೇಯರ್ ಸ್ಥಾನಕ್ಕೆ ಸುಧೀರ್ ಶೆಟ್ಟಿ ವರ್ಸಸ್ ಶರತ್, ಜಯಾನಂದ, ಕಿರಣ್ ಕೋಡಿಕಲ್, ಹೆಸರು ಮುಂಚೂಣಿಯಲ್ಲಿ, ಉಪ ಮೇಯರ್ ಸ್ಥಾನಕ್ಕೆ ಹೊಸ ಮುಖ ಆಯ್ಕೆ?
ಮಂಗಳೂರು(ಸೆ.07): ಮಂಗಳೂರು ಮಹಾನಗರ ಪಾಲಿಕೆ ಮೂರನೇ ಅವಧಿಯ ಮೇಯರ್-ಉಪ ಮೇಯರ್ ಸ್ಥಾನಕ್ಕೆ ಸೆ.9ರಂದು ಚುನಾವಣೆ ನಿಗದಿಯಾಗಿದೆ. ಈ ಬಾರಿ 23ನೇ ಮೀಸಲಾತಿಯನ್ವಯ ಮೇಯರ್ ಸ್ಥಾನ ಸಾಮಾನ್ಯ ಮತ್ತು ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿದೆ. ಮೇಯರ್ ಸ್ಥಾನಕ್ಕೆ ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳ ಆಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಪಾಲಿಕೆಯಲ್ಲಿ ಒಟ್ಟು 60 ಸ್ಥಾನಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್‌ಡಿಪಿಐ ಇಬ್ಬರು ಸದಸ್ಯರನ್ನು ಹೊಂದಿದೆ. ಬಿಜೆಪಿ ಸಹಜವಾಗಿ ಗದ್ದುಗೆ ಹಿಡಿಯಲಿದೆ.
ಮೂರನೇ ಬಾರಿ ಸದಸ್ಯರಾಗಿರುವ, ದಕ್ಷಿಣ ಕ್ಷೇತ್ರದ ಕೊಡಿಯಾಲಬೈಲ್ ವಾರ್ಡ್‌ನ ಸುಧೀರ್ ಶೆಟ್ಟಿಕಣ್ಣೂರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉತ್ತರ ಕ್ಷೇತ್ರದಿಂದ ಕುಂಜತ್ತಬೈಲ್ ವಾರ್ಡ್‌ನ ಶರತ್, ಪದವು ವಾರ್ಡ್‌ನ ಜಯಾನಂದ ಹಾಗೂ ಬಂಗ್ರಕೂಳೂರಿನ ಕಿರಣ್ ಕೋಡಿಕಲ್ ಹೆಸರು ಕೇಳಿಬರುತ್ತಿದೆ. ಇದರಲ್ಲೂ ಶರತ್, ಜಯಾನಂದ ಹೆಸರು ಮುಂಚೂಣಿಯಲ್ಲಿದ್ದು, ಪಕ್ಷ ಮುಖಂಡರ ಅಂತಿಮ ಮುದ್ರೆ ಯಾರಿಗೆ ಎನ್ನುವುದು ಕುತೂಹಲದಲ್ಲಿದೆ.
ಮಳೆ ಬಾರದಿದ್ದರೂ ಚಾರ್ಮಾಡಿ ಪರಿಸರದ ನದಿಗಳಲ್ಲಿ ನೀರಿನ ಮಟ್ಟದಿಢೀರ್ ಏರಿಕೆ
ಉತ್ತರ ಕ್ಷೇತ್ರಕ್ಕೆ ಸಿಗುತ್ತಾ ಮೇಯರ್ ಪಟ್ಟ?:
22ನೇ ಅವಧಿಯ ಮೇಯರ್ ಮೀಸಲಾತಿ ಸಾಮಾನ್ಯ ಬಂದಿತ್ತು. ಈಗ 23ನೇ ಅವಧಿ, 24ನೇ ಅವಧಿಯೂ ಸಾಮಾನ್ಯ ಸ್ಥಾನಕ್ಕೆ ನಿಗದಿಯಾಗಿದೆ. ಹೀಗಿರುವಾಗ ಈಗಲೂ ಸಾಮಾನ್ಯ ಮೀಸಲು ಇರುವುದರಿಂದ ಹಿರಿತನದ ಆಧಾರದಲ್ಲಿ ಮೇಯರ್ ಸ್ಥಾನಕ್ಕೆ ಸುಧೀರ್ ಶೆಟ್ಟಿಕಣ್ಣೂರು ಅವರನ್ನು ಪಕ್ಷ ಆಯ್ಕೆ ಮಾಡುವುದನ್ನು ತಳ್ಳಿ ಹಾಕುವಂತಿಲ್ಲ. ಹಾಲಿ ಮೇಯರ್ ಪ್ರೇಮಾನಂದ ಶೆಟ್ಟಿಕೂಡ ಬಂಟ ಸಮುದಾಯಕ್ಕೆ ಸೇರಿದವರು. ಹಾಗಾಗಿ ಎರಡನೇ ಬಾರಿ ಮತ್ತೆ ಬಂಟ ಸಮುದಾಯಕ್ಕೆ ಪಟ್ಟನೀಡುವುದು ಸುಲಭದ ಮಾತಲ್ಲ. ಸುಧೀರ್ ಶೆಟ್ಟಿಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವುದು ಪ್ಲಸ್ ಪಾಯಿಂಟ್.
ಈ ಬಾರಿ ಉತ್ತರ ಕ್ಷೇತ್ರಕ್ಕೆ ಮೇಯರ್ ಗಾದಿ ನೀಡುವುದಿದ್ದರೆ, ಎರಡನೇ ಬಾರಿ ವಾರ್ಡ್ ಪ್ರತಿನಿಧಿಸುತ್ತಿರುವ ಶರತ್ ಅಥವಾ ಜಯಾನಂದ್‌ಗೆ ನೀಡಬೇಕು. ಬಂಟ ಸಮುದಾಯ ಹೊರತುಪಡಿಸಿ ಜಾತಿ, ಸಂಘಟನಾ ಸಾಮರ್ಥ್ಯ ಅವಲೋಕಿಸಿದರೆ ಮೊದಲ ಬಾರಿ ಆಯ್ಕೆಯಾದ ಕಿರಣ್ ಕುಮಾರ್ ಕೋಡಿಕಲ್ ಹೆಸರು ಜಾಸ್ತಿಯಾಗಿ ಕೇಳಿಬರುತ್ತಿದೆ. ಇವರು ಹಾಲಿ ಶಾಸಕ ಡಾ.ಭರತ್ ಶೆಟ್ಟಿಅವರ ಆಪ್ತ ಸಹಾಯಕರಾಗಿದ್ದರು. ಜಯಾನಂದ್ ಮತ್ತು ಕಿರಣ್ ಕುಮಾರ್ ಬಿಲ್ಲವ ಸಮುದಾಯಕ್ಕೆ ಸೇರಿದವರು.
Praveen Nettaru Murder Case: ದ.ಕ.ದಲ್ಲಿ 32ಕ್ಕೂ ಹೆಚ್ಚು ಕಡೆ NIA ದಾಳಿ!
ಉಪ ಮೇಯರ್ ಹೊಸ ಮುಖ?:
ಉಪ ಮೇಯರ್ ಸ್ಥಾನಕ್ಕೆ ದಕ್ಷಿಣದಲ್ಲಿ 2ನೇ ಬಾರಿ ಆಯ್ಕೆಯಾದ ಸೆಂಟ್ರಲ್ ವಾರ್ಡ್‌ನ ಪೂರ್ಣಿಮಾ, ಕದ್ರಿ ವಾರ್ಡ್‌ನ ಶಕೀಲ ಕಾವಾ, ವೀಣಾ ಮಹಾಬಲ, ಜಯಶ್ರೀ ಕುಡ್ವ ಹೆಸರು ಇದೆ. ಉತ್ತರ ಕ್ಷೇತ್ರದಲ್ಲಿ ತಿರುವೈಲು ವಾರ್ಡ್‌ನ ಹೇಮಲತಾ, ಶ್ವೇತಾ, ಲಕ್ಷ್ಮೇ, ಸಂಗೀತಾ ನಾಯಾಕ್ ಹೆಸರು ಕೇಳಿಬರುತ್ತಿದೆ. ಮೇಯರ್ ಒಂದು ಕ್ಷೇತ್ರಕ್ಕೆ ನೀಡಿದರೆ, ಉಪ ಮೇಯರ್ ಇನ್ನೊಂದು ಕ್ಷೇತ್ರಕ್ಕೆ ನೀಡುವುದು ಕ್ರಮ. ಶಕೀಲ ಕಾವ ಈ ಹಿಂದೆ ಉಪ ಮೇಯರ್ ಆಗಿದ್ದರು. ಹಾಗಾಗಿ ಅವರು ಮತ್ತೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿಲ್ಲ ಎನ್ನಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಉಪ ಮೇಯರ್ ಸ್ಥಾನಕ್ಕೆ ಹೊಸ ಮುಖಕ್ಕೆ ಅವಕಾಶ ನೀಡುವ ಸಾಧ್ಯತೆಯೇ ಅಧಿಕ ಎನ್ನುತ್ತವೆ ಮೂಲ.
ಮೇಯರ್ ಚುನಾವಣೆ ದಿನ ಬೆಳಗ್ಗೆ ನಮ್ಮ ಅಭ್ಯರ್ಥಿಯ ಆಯ್ಕೆ ಘೋಷಣೆಯಾಗಲಿದೆ. ಮೇಯರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನೇ ಆರಿಸಲಾಗುವುದು. ಇಬ್ಬರು ಶಾಸಕರು, ಮಂಡಲ ಅಧ್ಯಕ್ಷರು, ಪಾಲಿಕೆಯ ಬಿಜೆಪಿ ಸದಸ್ಯರ ಅಭಿಪ್ರಾಯ ಪಡೆದು ಅಂತಿಮ ಆಯ್ಕೆ ಮಾಡಲಾಗುವುದು. ಇದರಲ್ಲಿ ಯಾವುದೇ ಗೊಂದಲ ಇಲ್ಲ ಅಂತ ದ.ಕ. ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ತಿಳಿಸಿದ್ದಾರೆ.