ಮಂಗಳೂರು(ಏ.05): ಕೊರೋನಾ ಲಾಕ್‌ಡೌನ್‌ ವೇಳೆ ಸಮಯ ಸದುಪಯೋಗಪಡಿಸಲು ಯಕ್ಷಗಾನ ಹವ್ಯಾಸಿ ಕಲಾವಿದರು ಹೊಸ ಉಪಾಯ ಬಳಸಿ ಯಶಸ್ವಿಯಾಗಿದ್ದಾರೆ. ಕರಾ​ವ​ಳಿಯ ಯಕ್ಷ​ಗಾ​ನ ಕುಳಿತಲ್ಲಿಂದಲೇ ಆನ್‌ಲೈನ್‌ ಮೂಲಕ ಯಕ್ಷಗಾನ ತಾಳಮದ್ದಳೆಯಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ. ಕಾನ್ಫ​ರೆನ್ಸ್‌ ಕಾಲ್‌ ಮೂಲಕ ಆನ್‌ಲೈನ್‌ ಯಕ್ಷಗಾನ ತಾಳಮದ್ದಳೆ ನಡೆಸಿ ಧ್ವನಿ​ಮು​ದ್ರಿ​ಸಿ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದೆ.

ಕಲ್ಚಾರ್‌ ರೂವಾ​ರಿ:

ವಿಟ್ಲದಲ್ಲಿರುವ ನಿವೃತ್ತ ಅಧ್ಯಾಪಕ, ಪ್ರಯೋಗಶೀಲ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್‌ ಪ್ರಯೋಗದ ರೂವಾರಿ. ಯಕ್ಷಗಾನ ಪ್ರೇಮಿ ಪುತ್ತೂರಿನ ಅನಂತನಾರಾಯಣ ತಾಂತ್ರಿಕ ನೆರವು ನೀಡಿದ್ದಾರೆ. 2.15 ಗಂಟೆ ನಿರಂತರವಾಗಿ ಆನ್‌ಲೈನ್‌ ಮೂಲಕ ಯಕ್ಷಗಾನ ರೆಕಾರ್ಡಿಂಗ್‌ ಮಾಡಲಾಗಿದೆ.

ಆನ್‌​ಲೈನ್‌ ಹೇಗೆ?:

ಅರ್ಥಧಾರಿಗಳು ಅವರವರ ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ ಕಾನ್ಫರೆನ್ಸ್‌ ಕಾಲ್‌ ಮೂಲಕ ಯಕ್ಷಗಾನ ಪ್ರಸಂಗಕ್ಕೆ ಅರ್ಥ ಹೇಳಿದ್ದಾರೆ. ಆಗಲೇ ಮೊಬೈಲ್‌ನಲ್ಲಿ ಧ್ವನಿ ಮುದ್ರಿಸಿಕೊಂಡಿದ್ದಾರೆ. ಬಳಿಕ ರೆಕಾರ್ಡಿಂಗ್‌ನ್ನು ಒಟ್ಟು ಸೇರಿಸಿ, ಅದಕ್ಕೆ ಯಕ್ಷಗಾನ ಭಾಗವತಿಕೆ ಸೇರ್ಪಡೆಗೊಳಿಸಿ ತಾಂತ್ರಿಕವಾಗಿ ಸಿದ್ಧಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಆನ್‌ಲೈನ್‌ನಲ್ಲಿ ನಡೆದ ತಾಳಮದ್ದಳೆ ಎಂದು ಗೊತ್ತಾಗದಂತೆ ತಾಂತ್ರಿಕ ಕೌಶಲ್ಯ ತೋರಿಸಿದ್ದಾರೆ.

ಜನ ಜಾಗೃತಿ: ಸಾವಿರಾರು ಜನ ನೋಡಿದ್ರು ಕೊರೋನಾ ಯಕ್ಷಗಾನ..!

ಹೀಗೆ ಆಡಿಯೋ ಕಾನ್ಫರೆನ್ಸ್‌ ಕಾಲ್‌ನಲ್ಲಿ ಅರ್ಥ ಹೇಳುವಾಗ ಯಕ್ಷಗಾನ ಭಾಗವತಿಕೆಯನ್ನು ಜತೆಯಲ್ಲಿ ಬಳಸಿಲ್ಲ. ಪ್ರಸಂಗದ ಪದ್ಯವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಅರ್ಥ ಹೇಳಿದ್ದಾರೆ. ಎ​ಡಿ​ಟಿಂಗ್‌ ವೇಳೆ ಹಿಮ್ಮೇಳ ಸೇರಿಸಲಾಗಿದೆ.

ಶ್ರೀಕೃಷ್ಣ ಸಂಧಾ​ನ:

ಮಹಾಭಾರತದ ‘ಶ್ರೀಕೃಷ್ಣ ಸಂಧಾನ’ ಪ್ರಸಂಗವನ್ನು ತಾಳಮದ್ದಳೆಗೆ ಆಯ್ದುಕೊಳ್ಳಲಾಗಿದೆ. ಕೌರವನಾಗಿ ಗುಡ್ಡಪ್ಪ ಬಲ್ಯ, ವಿದುರನಾಗಿ ಭಾಸ್ಕರ ಶೆಟ್ಟಿಹಾಗೂ ಶ್ರೀಕೃಷ್ಣನಾಗಿ ರಾಧಾಕೃಷ್ಣ ಕಲ್ಚಾರ್‌ ಅರ್ಥಗಾರಿಕೆ ನಡೆಸಿದ್ದಾರೆ. ಪುತ್ತೂರು ರಮೇಶ ಭಟ್‌ ​ಭಾ​ಗ​ವ​ತಿಕೆ. ತಾಳಮದ್ದಳೆಯ ಟ್ರೈಲರ್‌ ಕೂಡ ಯೂಟ್ಯೂಬ್‌ನಲ್ಲಿ ಹಿಟ್‌ ಆಗಿದೆ.

ಕೊರೋನಾ ಕೇಸ್‌ ಪತ್ತೆಯಾದ ಜಾಗದಲ್ಲೇ ಕೊರೋನಾ ಜಾಗೃತಿ ಯಕ್ಷಗಾನ..!

ಬರಲಿದೆ ಪರಿಪೂರ್ಣ ವರ್ಶ​ನ್‌:

ಇನ್ನು ಮುಂದೆ ಇದೇ ತಂಡ ಹಿಮ್ಮೇಳ ಸಹಿತವಾಗಿ (ಕಲಾವಿದರು ಇದ್ದಲ್ಲಿಂದಲೇ) ಆನ್‌ಲೈನ್‌ ತಾಳಮದ್ದಳೆ ನಡೆಸುವ ಯೋಜನೆ ರೂಪುಗೊಳ್ಳುತ್ತಿದೆ. ಯಕ್ಷಗಾನ ಕ್ಷೇತ್ರದಲ್ಲಿ ಇದು ಹೊಸ ಪ್ರಯೋಗ. ತಾಳಮದ್ದಳೆ ಕೂಟಗಳನ್ನು ಹೀಗೂ ಮಾಡಬಹುದು ಎಂಬುದಕ್ಕೆ ಇದು ನಿದರ್ಶನ. ಇತಿಮಿತಿಯಲ್ಲಿ ಮಾಡಿತೋರಿಸಿದ್ದೇವೆ ಎಂದು ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್‌ ತಿಳಿಸಿದ್ದಾರೆ.

-ಆತ್ಮಭೂಷಣ್‌