ಚಿಕ್ಕಮಗಳೂರು(ಆ.10): ಮಲೆನಾಡಿನ ಜೀವನದಿ ತುಂಗೆಯ ಉಗಮಸ್ಥಳ ಪಶ್ಚಿಮಘಟ್ಟಗಳ ತಪ್ಪಲು ಕೆರೆಕಟ್ಟೆಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ ಎಡಬಿಡದೇ ನಿರಂತರವಾಗಿ ಮಳೆ ಆರ್ಭಟ ಮುಂದುವರಿದಿದೆ.

ತುಂಗಾನದಿಯಲ್ಲಿ ಪ್ರವಾಹ ಮುದುವರಿದು ಸಂಜೆಯಿಂದಲೇ ತಗ್ಗುಪ್ರದೇಶಗಳೆಲ್ಲ ಜಲಾವೃತಗೊಳ್ಳುತ್ತ ಸಂಜೆ ಮಂಗಳೂರು ಶೃಂಗೇರಿ ಕಲ್ಪಿಸುವ ರಾ.ಹೆ.169 ರ ನೆಮ್ಮಾರು ತನಿಕೋಡುಬಳಿ ರಸ್ತೆಯ ಮೇಲೆ ಪ್ರವಾಹ ಬಂದ ಪರಿಣಾಮ ಮಂಗಳೂರು ಶೃಂಗೇರಿ ಸಂಪರ್ಕ ಸಂಜೆಯಿಂದಲೇ ಕಡಿತಗೊಂಡಿದೆ. ಮಂಗಳೂರು ಕಡೆಯಿಂದ ಬರುವ, ಶೃಂಗೇರಿ ಕಡೆಯಿಂದ ಮಂಗಳೂರಿಗೆ ಹೋಗುವ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಾಣಿಬೈಲು ಕಿಗ್ಗಾ ಸಿರಿಮನೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಮೇಲೆ ಪ್ರವಾಹ ತುಂಬಿದ್ದು, ಸಂಜೆಯಿಂದಲೇ ಕಿಗ್ಗಾ ತೋರಣಗೆದ್ದೆ, ಹುಲುಗಾರು, ಕಿಗ್ಗಾ ಸಿರಿಮನೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ಮಾಣಿಬೈಲು ಮೂಲಕ ಸಂಚರಿಸುವ ವಾಹನ, ಜನಸಂಚಾರಕ್ಕೆ ತೊಂದರೆಯಾಗಿದೆ. ಗಾಂಧಿ ಮೈದಾನದಲ್ಲಿ, ಕುರುಬಗೇರಿಯಲ್ಲಿಯೂ ಪ್ರವಾಹ ನುಗ್ಗಿ ನೀರು ಅಪಾಯದ ಮಟ್ಟಮೀರುತ್ತಿದೆ. ಶ್ರೀ ಮಠದ ಸಂಧ್ಯಾವಂದನೆ ಮಂಟಪ, ಕಪ್ಪೆ ಶಂಕರ ದೇವಾಲಯ ಜಲಾವೃತಗೊಂಡಿದೆ.

ಕೊರಡ್ಕಲ್‌, ತೆಕ್ಕೂರು ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆಯೂ ಪ್ರವಾಹ ಹರಿಯುತ್ತಿದೆ. ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಕಾಲುವೆ, ಹಳ್ಳ, ಕಿರುನದಿಗಳು ಉಕ್ಕಿ ಹರಿಯುತ್ತಿದ್ದು ನದಿಯಲ್ಲಿ ನೀರಿನ ಮಟ್ಟಹೆಚ್ಚುತ್ತಿದೆ. ಗಾಳಿಯ ಆರ್ಭಟವೂ ಮುಂದುವರಿದಿದೆ.