ಮಂಗಳೂರು(ಏ.25): ಕೊರೋನಾ ಸೋಂಕಿನಿಂದ ಮೃತಪಟ್ಟಬಂಟ್ವಾಳ ಮೂಲದ ವೃದ್ಧೆಯ ಶವಸಂಸ್ಕಾರಕ್ಕೆ ಮಂಗಳೂರಿನ ಸ್ಮಶಾನಗಳಲ್ಲಿ ಶಾಸಕರ ಸಹಿತ ಸ್ಥಳೀಯರು ಅವಕಾಶ ನೀಡದ ಘಟನೆ ಗುರುವಾರ ನಡೆದಿದೆ. ಇದರಿಂದಾಗಿ ವೃದ್ಧೆಯ ಶವವನ್ನು ಶುಕ್ರವಾರ ನಸುಕಿನ ಜಾವ ಬಂಟ್ವಾಳ ಕೈಕುಂಜೆಯ ಹಿಂದೂ ರುದ್ರಭೂಮಿಯಲ್ಲಿ ಪೊಲೀಸರು ದಹಿಸಿದ ಘಟನೆ ನಡೆಯಿತು. ಇದೇ ವೇಳೆ ಮಂಗಳೂರಿನ ಶಾಸಕರ ಈ ನಡವಳಿಕೆ ಜಾಲತಾಣಗಳಲ್ಲಿ ಸಾಕಷ್ಟುಚರ್ಚೆಗೆ ಕಾರಣವಾಯಿತು.

ಕೊರೋನಾ ಸೋಂಕಿನಿಂದ ಏ.19ರಂದು ಮೃತಪಟ್ಟಬಂಟ್ವಾಳ ಮೂಲದ ಮಹಿಳೆಯ ಶವವನ್ನು ಮಂಗಳೂರಿನ ಬೋಳೂರು ವಿದ್ಯುತ್‌ ಚಿತಾಗಾರದಲ್ಲಿ ದಹನ ಮಾಡಲಾಗಿತ್ತು. ಇದಕ್ಕೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಮೃತಪಟ್ಟಮತ್ತೊಂದು ಕೋವಿಡ್‌- 19 ಪ್ರಕರಣದ ವೃದ್ಧೆಯ ಶವದ ಅಂತ್ಯಕ್ರಿಯೆಯನ್ನು ಮಂಗಳೂರಿನ ಯಾವುದಾದರೊಂದು ಸ್ಮಶಾನದಲ್ಲಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಇದರ ಸುಳಿವು ಪಡೆದ ಮಂಗಳೂರಿನ ಜನತೆ ರಾತ್ರೋರಾತ್ರಿ ಸ್ಮಶಾನಗಳಲ್ಲಿ ಜಮಾಯಿಸಿ ವಿರೋಧಕ್ಕೆ ಮುಂದಾದರು.

ಬಿಜೆಪಿಯ ಹಿರಿಯ ನಾಯಕ ಮಲ್ಪೆ ಸೋಮಶೇಖರ್‌ ಭಟ್‌ಗೆ ಮೋದಿ ಕರೆ

ಮಂಗಳೂರಿನ ಬೋಳೂರು, ಪಚ್ಚನಾಡಿ, ನಂದಿಗುಡ್ಡೆ, ಮೂಡುಶೆಡ್ಡೆ ಸ್ಮಶಾನಗಳಲ್ಲಿ ಜನರು ಕಾದು ಕುಳಿತು ಶವಸಂಸ್ಕಾರ ನಡೆಸಲು ಜಿಲ್ಲಾಡಳಿತಕ್ಕೆ ಸ್ಥಳೀಯರು ಅವಕಾಶ ನೀಡಲಿಲ್ಲ. ಅಲ್ಲದೆ ಸ್ಥಳೀಯ ಶಾಸಕರು ಕೂಡ ಜನತೆಯ ಪ್ರತಿಭಟನೆಗೆ ಬೆಂಬಲ ಸೂಚಿಸಿರುವುದು ಜಿಲ್ಲಾಡಳಿತದ ಕಗ್ಗಂಟಿಗೆ ಕಾರಣವಾಯಿತು. ಇದರಿಂದಾಗಿ ಮಧ್ಯರಾತ್ರಿ ಕಳೆದರೂ ಶವಸಂಸ್ಕಾರ ನಡೆಸುವುದು ಎಲ್ಲಿ ಎಂಬ ಚಿಂತೆಗೆ ಜಿಲ್ಲಾಡಳಿತ ಒಳಗಾಗಿತ್ತು.

ಸ್ಮಶಾನ ಸುತ್ತಿದ ಪೊಲೀಸರು:

ಮೃತ ವೃದ್ಧೆಯ ಮೂಲ ಬಂಟ್ವಾಳದಲ್ಲೂ ಸ್ಮಶಾನದಲ್ಲಿ ಸಂಸ್ಕಾರ ನಡೆಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಬಂಟ್ವಾಳ ಶಾಸಕರ ಗಮನಕ್ಕೆ ತಂದಾಗ, ಅವರು ಎಲ್ಲಿಯೂ ಸಿಗದಿದ್ದರೆ, ತಮ್ಮದೇ ಜಾಗದಲ್ಲಿ ಶವ ಸಂಸ್ಕಾರ ನಡೆಸಲು ಸಮ್ಮತಿ ಸೂಚಿಸಿದ್ದರು.

ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ:

ಬಂಟ್ವಾಳ ಸ್ಮಶಾನದಲ್ಲಿ ಅಂತ್ಯವಿಧಿಗೆ ವಿರೋಧ ವ್ಯಕ್ತವಾದಾಗ ಕೊನೆಗೆ ಕೈಕುಂಜೆಯ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ವೃದ್ಧೆಯ ಶವಕ್ಕೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಇದರೊಂದಿಗೆ ಇಡೀ ರಾತ್ರಿಯ ಸ್ಮಶಾನ ಹೈಡ್ರಾಮಾಕ್ಕೆ ತೆರೆ ಬಿತ್ತು.