ಮಂಗಳೂರು(ಜ.05): ಮಂಗಳೂರು ನೆಹರೂ ಮೈದಾನವನ್ನು ಸಮಾವೇಶಗಳಿಗೆ ನೀಡುವ ವಿಚಾರದಲ್ಲಿ ಶಾಶ್ವತ ನಿರ್ಬಂಧ ವಿಧಿಸುವ ಬಗ್ಗೆ ಪೊಲೀಸ್‌ ಇಲಾಖೆಯಲ್ಲಿ ಚಿಂತನೆ ನಡೆಯುತ್ತಿದೆ.

ಮಂಗಳೂರು ಗಲಭೆ ಹಾಗೂ ನಂತರ ನಿರ್ದಿಷ್ಟ ಸಮುದಾಯದವರು ಪ್ರತಿಭಟನೆಗೆ ನೆಹರೂ ಮೈದಾನವೇ ಬೇಕು ಎಂದು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಹಾಗೂ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಡಳಿತ ಜೊತೆ ಚರ್ಚಿಸಿ ಪೊಲೀಸ್‌ ಇಲಾಖೆ ಇಂಥದ್ದೊಂದು ನಿರ್ಧಾರಕ್ಕೆ ಬರುವ ಬಗ್ಗೆ ಹೆಜ್ಜೆ ಇಟ್ಟಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಅಮೆರಿಕದ ಎಂಜಿನಿಯರ್‌ನ ಹೈಟೆಕ್ ದೋಂಟಿ, ಅಡಿಕೆ ಕೊಯ್ಯುವುದಿನ್ನು ಕಷ್ಟವಲ್ಲ..!

ಡಿ.19ರಂದು ಮಂಗಳೂರು ಗೋಲಿಬಾರ್‌ ಹಾಗೂ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ 28 ವಿವಿಧ ಸಂಘಟನೆಗಳು ಪ್ರತಿಭಟನೆಗೆ ನಿರ್ಧರಿಸಿದ್ದವು. ಈ ಪ್ರತಿಭಟನೆಯನ್ನು ನೆಹರೂ ಮೈದಾನದಲ್ಲಿ ನಡೆಸಲು ಅನುಮತಿ ನೀಡುವಂತೆ ಪಟ್ಟುಹಿಡಿದಿದ್ದವು. ಆದರೆ ಸಮೀಪದಲ್ಲೇ ನಡೆಯುತ್ತಿರುವ ಅಂಡರ್‌ಪಾಸ್‌ ಕಾಮಗಾರಿ ಹಾಗೂ ವಾಹನ ದಟ್ಟಣೆಯ ಹಿನ್ನೆಲೆಯಲ್ಲಿ ಪೊಲೀಸ್‌ ಕಮಿಷನರ್‌ರು ನೆಹರೂ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲು ಅನುಮತಿ ನಿರಾಕರಿಸಿದ್ದರು.

ವಿಮಾನ ನಿಲ್ದಾಣದಲ್ಲಿ ತುಳು ನಾಡಿನ ಸಂಸ್ಕೃತಿ..! ಇಲ್ಲಿವೆ ಕಣ್ಮನ ಸೆಳೆಯೋ ಕಲಾಕೃತಿ

ಅಲ್ಲದೆ ಕಳೆದ ವರ್ಷ ನಡೆಸಿದ ಸಮಾವೇಶದಿಂದಾಗಿ ನಗರದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತಲ್ಲದೆ, ಈ ಬಗ್ಗೆ ಸಂಘಟಕರ ವಿರುದ್ಧ ಕೇಸು ಕೂಡ ದಾಖಲಾಗಿತ್ತು. ಆದ್ದರಿಂದ ನಗರದ ಹೊರವಲಯದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲು ಅನುಮತಿಸುವುದಾಗಿ ಕಮಿಷನರ್‌ ತಿಳಿಸಿದ್ದರು. ಇದೇ ವೇಳೆ ಪೌರತ್ವ ಕಾಯ್ದೆ ಪರವಾಗಿ ಬಿಜೆಪಿ ಕೂಡ ಸಮಾವೇಶ ನಡೆಸಲು ನೆಹರೂ ಮೈದಾನವನ್ನು ಕೇಳಿತ್ತು. ಬಿಜೆಪಿಗೆ ಕೂಡ ಸಮಾವೇಶ ನಿರ್ಧಾರವನ್ನು ಮುಂದೂಡುವಂತೆ ಕಮಿಷನರ್‌ ಸೂಚಿಸಿದ್ದರು.

ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಸಲುವಾಗಿ ನೆಹರೂ ಮೈದಾನವನ್ನು ಇನ್ನು ಮುಂದೆ ಯಾವುದೇ ಸಮಾವೇಶ, ಮೆರವಣಿಗೆಗಳಿಗೆ ಬಳಸಲು ಅನುಮತಿ ನೀಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಬಗ್ಗೆ ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಡಳಿತ ನಡುವೆ ಪ್ರಾಥಮಿಕ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.