ಮಂಗಳೂರು(ಜು.31): ಬಡ ಜನತೆಯ ಅನುಕೂಲಕ್ಕೆಂದು ಪುತ್ತೂರಿನಲ್ಲಿ ಆರಂಭಿಸಲಾದ ಇಂದಿರಾ ಕ್ಯಾಂಟೀನ್ ಮೂಲಭೂತ ವ್ಯವಸ್ಥೆಗಳಿಲ್ಲದೆ ಸೊರಗುತ್ತಿದೆ. ಬಿರು ಮಳೆಗೆ ಕ್ಯಾಂಟೀನ್ ಒಳಗಡೆಗೆ ನೀರು ಸೋರುತ್ತಿದೆ. ಹೊರ ಭಾಗದ ಸುತ್ತಲೂ ನೀರು ನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗುತ್ತಿದೆ.

ಊಟ- ಉಪಾಹಾರಕ್ಕಾಗಿ ಕ್ಯಾಂಟೀನ್‌ಗೆ ಪ್ರತಿದಿನ ನೂರಾರು ಇಲ್ಲಿಗೆ ಮಂದಿ ಬರುತ್ತಿದ್ದು, ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕಾಗಿ ಜನರು ಹೊರಗಡೆ ಭಾಗದಲ್ಲಿ ಸರದಿಯಲ್ಲಿ ಕಾಯಬೇಕಾಗುತ್ತದೆ. ಆದರೆ ಹೊರಭಾಗದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಯಾವುದೇ ವ್ಯವಸ್ಥೆಗಳಿಲ್ಲದ ಕಾರಣ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಹಕರು ಕೊಡೆ ಹಿಡಿದುಕೊಂಡು, ಮಳೆಗೆ ತೋಯ್ದುಕೊಂಡು ನಿಲ್ಲಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ತಿನ್ನಲು ಟೇಬಲ್‌ನಲ್ಲಿ ಕೂರುವಂತಿಲ್ಲ:

ಕ್ಯಾಂಟೀನ್ ಹೊರ ಭಾಗದಲ್ಲಿ ಊಟ, ಉಪಾಹಾರ ಸೇವಿಸಲು ಟೇಬಲ್‌ಗಳಿದ್ದರೂ ಮೇಲ್ಭಾಗದಲ್ಲಿ ಶೀಟ್ ಅಳವಡಿಸದ ಕಾರಣ ಈ ವ್ಯವಸ್ಥೆ ಪ್ರಯೋಜನಕ್ಕೆ ಇಲ್ಲವಾಗಿದೆ. ಕೈ ತೊಳೆಯುವ ಸ್ಥಳದಲ್ಲಿಯೂ ಮಳೆಗೆ ಒದ್ದೆಯಾಗಿಕೊಂಡು ಸಮಸ್ಯೆ ಅನುಭವಿಸಬೇಕಾಗಿದೆ. ಇಲ್ಲಿ ಕನಿಷ್ಠ ಶೀಟ್ ಅಳವಡಿಸಿದಲ್ಲಿ ಗ್ರಾಹಕರಿಗೆ ಆಗುತ್ತಿರುವ ತೊಂದರೆ ತಡೆಯಬಹುದು ಎಂಬುದು ಕ್ಯಾಂಟೀನ್‌ಗೆ ಬರುವ ಜನರ ಅಭಿ ಪ್ರಾಯವಾಗಿದೆ.

ಕ್ಯಾಂಟೀನ್ ಸುತ್ತ ಕಟ್ಟಿನಿಲ್ಲುವ ನೀರು:

ಕ್ಯಾಂಟೀನ್ ಸುತ್ತಲು ಅಳವಡಿಸಲಾಗಿರುವ ಇಂಟರ್‌ಲಾಕ್‌ನಲ್ಲಿ ಸರಿಯಾಗಿ ಮಳೆ ನೀರು ಹರಿದು ಹೋಗುತ್ತಿಲ್ಲ. ಇದರಿಂದಾಗಿ ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಾಡುಗೊಂಡಿದೆ. ಕ್ಯಾಂಟೀನ್ ತ್ಯಾಜ್ಯ ಸಂಗ್ರಹ ಪೈಪ್ ಬಳಿ ಅಳವಡಿಸಲಾಗಿದ್ದ ಇಂಟರ್ ಲಾಕ್ ತೆರವುಗೊಳಿಸಿರುವುದರಿಂದ ಅಲ್ಲಿ ಗುಂಡಿ ನಿರ್ಮಾಣವಾಗಿದ್ದು, ಅದರಲ್ಲಿ ಮಳೆನೀರು ತುಂಬಿಕೊಂಡಿದೆ. ಕ್ಯಾಂಟೀನ್ ಸುತ್ತ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದ ಕಾರಣ ನೀರು ನಿಂತುಕೊಂಡು ಸೊಳ್ಳೆಗಳ ಉತ್ಪತ್ತಿಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ.

ಸ್ವಚ್ಛತೆಯ ಕೊರತೆ:

ಶೌಚಾಲಯದ ತ್ಯಾಜ್ಯವೂ ಸಮರ್ಪಕವಾಗಿ ವಿಲೇವಾರಿಯಾಗುವ ವ್ಯವಸ್ಥೆ ಮಾಡಲಾಗಿಲ್ಲ. ಶೌಚ ತ್ಯಾಜ್ಯಗಳು ಚರಂಡಿ ಪೈಪ್‌ನ ಮುಂಭಾಗದ ಪಿಟ್ ನಲ್ಲಿ ಸಂಗ್ರಹವಾಗುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಸ್ವಚ್ಛತೆ ಮತ್ತು ಮೂಲಭೂತ ಸೌಲಭ್ಯಗಳನ್ನು ಇಂದಿರಾ ಕ್ಯಾಂಟೀನ್ ವ್ಯವಸ್ಥೆಗೆ ನೀಡಬೇಕಾದ ಅಗತ್ಯವಿದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಇಲ್ಲಿ ನೂರಾರು ವಿದ್ಯಾರ್ಥಿನಿಯರು ಮಳೆಗೆ ತೊಯ್ದುಕೊಂಡು ಊಟ ಮಾಡುವ ಪರಿಸ್ಥಿತಿ ಇದ್ದರೂ ಇದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿಲ್ಲ.

ಇಂದಿರಾ ಕ್ಯಾಂಟೀನ್‌ನ ಹೆಸರು ಬದಲಾವಣೆ ?

ಛಾವಣಿ ಅಳವಡಿಸಲು ಆಗ್ರಹ:

ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಬದಲಾಗುತ್ತಿರುವ ಇಂದಿರಾ ಕ್ಯಾಂಟೀನ್ ಪರಿಸರದ ಸ್ವಚ್ಛತೆಗೆ ಅಧಿಕಾರಿಗಳು ಮುಂದಾಗಿಲ್ಲ. ಕ್ಯಾಂಟೀನ್ ಸುತ್ತಲೂ ನೀರು ನಿಲ್ಲದಂತೆ ಸಮರ್ಪಕ ನೀರು ಹರಿಯಲು ವ್ಯವಸ್ಥೆ, ಶೌಚಾಲಯ ಪೈಪ್ ದುರಸ್ತಿ ವ್ಯವಸ್ಥೆ ಸೇರಿದಂತೆ ಮೇಲ್ಭಾಗದ ಛಾವಣಿ ಅಳವಡಿಸುವ ಕಾರ್ಯ ತುರ್ತಾಗಿ ನಡೆಯಬೇಕಿದೆ ಎಂಬುದು ಇಲ್ಲಿಗೆ ಬರುವ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ