ಮಂಗಳೂರು (ಸೆ.10): ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಂಗಳೂರು ಗಲಭೆ-ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ 21 ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿ ಬುಧವಾರ ಆದೇಶ ನೀಡಿದೆ.

2019ರ ಡಿ.19ರಂದು ಬೆಳಗ್ಗೆ ಮಂಗಳೂರು ನಗರದ ಸ್ಟೇಟ್‌ಬ್ಯಾಂಕ್‌ ಸಮೀಪ ಪೌರತ್ವ ಕಾಯ್ದೆ (ಸಿಎಎ) ವಿರೋಧಿಸಿ ಕೆಲವರು ಪ್ರತಿಭಟನೆಗೆ ನಡೆಸಲು ಸಮಾವೇಶಗೊಂಡಿದ್ದರು. ನಿರ್ಬಂಧ ಇದ್ದರೂ ಅನುಮತಿ ಇಲ್ಲದೆ ನಡೆದ ಈ ಪ್ರತಿಭಟನೆ ವೇಳೆ ಪೊಲೀಸರು-ಪ್ರತಿಭಟನಾಕಾರ ನಡುವೆ ಘರ್ಷಣೆ ನಡೆದು, ಗೋಲಿಬಾರ್‌ ಆಗಿತ್ತು. ಆ ವೇಳೆ ಗಲಭೆಗೆ ಸಂಬಂಧಿಸಿ ದಾಖಲಾಗಿದ್ದ ಪ್ರಕರಣಗಳ 21 ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ಶರತ್‌ ಅರವಿಂದ್‌ ಬೋಬ್ಡೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಷರತ್ತುಬದ್ಧ ಜಾಮೀನು ನೀಡಿದೆ.

ವಿವಾದಾತ್ಮಕ ಪೋಸ್ಟ್‌ : ಮಂಗಳೂರು ಪ್ರೊಫೆಸರ್‌ಗೆ ನೋಟಿಸ್‌ ...

ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹತಾ ವಾದ ಮಂಡಿಸಿದರು. ಗಲಭೆಯಲ್ಲಿ ಆರೋಪಿಗಳು ಭಾಗಿಯಾಗಿರುವುದಕ್ಕೆ ಪುರಾವೆಗಳಿವೆ. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಧೀಶರ ಮುಂದೆ ವಾದಿಸಿದರು. ಆರೋಪಿಗಳ ಪರ ಕೇರಳದ ಮಾಜಿ ನ್ಯಾಯಾಧೀಶ ಹಾಗೂ ಹಿರಿಯ ನ್ಯಾಯವಾದಿ ಆರ್‌.ಬಸಂತ್‌ ನೇತೃತ್ವದ ತಂಡ ವಾದ ಮಂಡಿಸಿತು.