ಆತ್ಮಭೂಷಣ್‌

ಮಂಗಳೂರು [ಸೆ.16]:  ‘ಸಾರ್‌, ತಪ್ಪನ್ನು ತಿದ್ದಿಕೊಂಡು ಮುಂದೆ ಚೆನ್ನಾಗಿ ಜೀವನ ನಡೆಸಲು ನಿರ್ಧರಿಸಿದ್ದೇನೆ. ನನ್ನ ಕುಟುಂಬಕ್ಕೆ ನೆರವಾಗಲು ಏನಾದರೂ ಉದ್ಯೋಗ ಕೊಡಿ..’

-ಹೀಗೆಂದು ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ರೌಡಿ ಶೀಟರ್‌ಗಳು ಪೊಲೀಸ್‌ ಠಾಣೆಗೆ ತೆರಳಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ! ಠಾಣೆಗೆ ಆಗಮಿಸಿ ಮುಚ್ಚಳಿಕೆ ಬರೆದುಕೊಡುತ್ತಿರುವ ರೌಡಿಶೀಟರ್‌ಗಳು ಈಗ ಬದುಕು ಕಟ್ಟಿಕೊಳ್ಳಲು ಉದ್ಯೋಗದ ಮೊರೆ ಹೋಗಲು ಅರ್ಜಿ ಬರೆದುಕೊಡುವ ಹಂತಕ್ಕೆ ತಲುಪಿದ್ದಾರೆ.

ರೌಡಿಶೀಟರ್‌ಗಳಲ್ಲಿ ಈ ಪರಿವರ್ತನೆಯ ಹಿಂದಿನ ರೂವಾರಿ ಮಂಗಳೂರು ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ. ಅವರು ಇತ್ತೀಚೆಗೆ ರೌಡಿ ಪರೇಡ್‌ನಲ್ಲಿ ಉದ್ಯೋಗದ ಆಫರ್‌ ನೀಡಿದ್ದರು. ಇದಕ್ಕೆ ಸ್ಪಂದಿಸಿ ಸುಮಾರು 40ಕ್ಕೂ ಅಧಿಕ ರೌಡಿಶೀಟರ್‌ಗಳು ಅರ್ಜಿ ಸಲ್ಲಿಸಿದ್ದು, ಮನಃಪರಿವರ್ತನೆಗೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಮತ್ತೆ ಸೇರಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ 18 ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರದಷ್ಟುರೌಡಿಶೀಟರ್‌ಗಳಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಹಲ್ಲೆ, ದೊಂಬಿಯಂತಹ ಕೋಮು ಹಿಂಸಾಚಾರಗಳಲ್ಲಿ ತೊಡಗಿಸಿಕೊಂಡವರು. ಇದರಲ್ಲಿ ಅಕ್ರಮ ಜಾನುವಾರು ಸಾಗಾಟ, ಕೊಲೆ, ದರೋಡೆ ಪ್ರಕರಣಗಳಲ್ಲಿ ರೌಡಿಶೀಟ್‌ಗೆ ಒಳಗಾದವರೂ ಇದ್ದಾರೆ. ಆಗಸ್ಟ್‌ ಕೊನೆ ವಾರದಲ್ಲಿ ನಡೆದ ರೌಡಿ ಶೀಟರ್‌ಗಳ ಪರೇಡ್‌ನಲ್ಲಿ ಕಮಿಷನರ್‌ ಅವರು ಉದ್ಯೋಗದ ಹೊಸ ಆಫರ್‌ ನೀಡಿದ್ದರು. ಇದುವೇ ಈಗ ರೌಡಿಶೀಟರ್‌ಗಳ ಮನಃಪರಿವರ್ತನೆಗೆ, ಸನ್ನಡತೆಯ ಜೀವನಕ್ಕೆ ಹಾದಿ ಮಾಡಿಕೊಟ್ಟಿದೆ.

ಹೊಸ ಆಫರ್‌ನಲ್ಲಿ ಏನೆಲ್ಲ?:

ರೌಡಿಶೀಟರ್‌ಗಳು ಕ್ರಿಮಿನಲ್‌ ಕೃತ್ಯಗಳಿಂದ ಹೊರಬಂದು ಸಮಾಜದಲ್ಲಿ ನೆಮ್ಮದಿಯ ಬದುಕಿಗೆ ಮುಂದಾಗುವುದಿದ್ದರೆ, ಅಂತಹವರಿಗೆ ಅಥವಾ ಅವರ ಕುಟುಂಬಕ್ಕೆ ಉದ್ಯೋಗ ಕಲ್ಪಿಸುವುದಕ್ಕೆ ನೆರವಾಗುವುದಾಗಿ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಘೋಷಿಸಿದ್ದರು.

ಈ ಪರೇಡ್‌ಗೆ ಸುಮಾರು 300ಕ್ಕೂ ಅಧಿಕ ಮಂದಿ ರೌಡಿಶೀಟರ್‌ಗಳು ಆಗಮಿಸಿದ್ದರು. ಈ ಪೈಕಿ 40ಕ್ಕೂ ಅಧಿಕ ಮಂದಿ ಆಯಾ ಪೊಲೀಸ್‌ ಠಾಣೆಗೆ ಹಾಜರಾಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಪರಿಶೀಲನೆ ನಡೆಸಿ, ರೌಡಿಶೀಟರ್‌ಗಳ ವಿದ್ಯಾರ್ಹತೆಗೆ ಪೂರಕವಾದ ಉದ್ಯೋಗ ಕಲ್ಪಿಸುವ ಜವಾಬ್ದಾರಿಯನ್ನು ಪೊಲೀಸ್‌ ಅಧಿಕಾರಿಗಳು ಮಾಡಲಿದ್ದಾರೆ.

ಉದ್ಯೋಗಕ್ಕಾಗಿ ಪ್ರತ್ಯೇಕ ವಿಭಾಗ:

ರೌಡಿಶೀಟರ್‌ಗಳಿಗೆ ಉದ್ಯೋಗ ನೀಡುವ ಸಲುವಾಗಿ ಕಮಿಷನರ್‌ ಕಚೇರಿಯಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ. ಆಶಾ ಕಿರಣ ಹೆಸರಿನ ಈ ವಿಭಾಗಕ್ಕೆ ವಿಶೇಷ ನೋಡೆಲ್‌ ಅಧಿಕಾರಿ ಹಾಗೂ ಸಿಬ್ಬಂದಿ ಇರುತ್ತಾರೆ. ಈಗಾಗಲೇ 60ಕ್ಕೂ ಅಧಿಕ ಕೋರ್ಸ್‌ಗಳನ್ನು ಗುರುತಿಸಲಾಗಿದೆ. ವೆಲ್ಡರ್‌ನಿಂದ ತೊಡಗಿ ಐಟಿ ವರೆಗೆ ಉದ್ಯೋಗಾವಕಾಶ ನೀಡಲಾಗುತ್ತದೆ. ಕೌಶಲ್ಯ ಕರ್ನಾಟಕ, ಕೌಶಲ್ಯ ಅಭಿವೃದ್ಧಿ ನಿಗಮ, ಸೆಂಟರ್‌ ಫಾರ್‌ ಎಂಟರ್‌ಪ್ರೆನರ್‌ಶಿಪ್‌ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಜೊತೆಗೆ ಪೊಲೀಸ್‌ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.

ಅಕ್ಟೋಬರ್‌ನಲ್ಲಿ ಪ್ರಥಮ ಬ್ಯಾಚ್‌:

ಉದ್ಯೋಗ ಸೇರ್ಪಡೆ ಮೊದಲು ನುರಿತವರಿಂದ ತರಬೇತಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಕ್ಟೋಬರ್‌ ಪ್ರಥಮ ವಾರದಲ್ಲಿ ಪ್ರಥಮ ಬ್ಯಾಚ್‌ನಲ್ಲಿ ರೌಡಿಶೀಟರ್‌ಗಳು ಉದ್ಯೋಗ ತರಬೇತಿ ಪಡೆಯಲಿದ್ದಾರೆ. ಮೊದಲ ಬ್ಯಾಚ್‌ನಲ್ಲಿ 50ರಿಂದ 100 ಮಂದಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ.

ರೌಡಿಶೀಟರ್‌ ಅಥವಾ ಕುಟುಂಬಕ್ಕೆ ಉದ್ಯೋಗ!

ರೌಡಿಶೀಟರ್‌ಗಳು ಉದ್ಯೋಗಕ್ಕೆ ಸೇರ್ಪಡೆಯಾದರೂ ತಕ್ಷಣವೇ ರೌಡಿಶೀಟ್‌ನಿಂದ ಮುಕ್ತಗೊಳ್ಳುವುದಿಲ್ಲ. ಕನಿಷ್ಠ ಆರು ತಿಂಗಳು ಕಾಲ ಪೊಲೀಸರ ನಿಗಾದಲ್ಲಿ ಇರುತ್ತಾರೆ. ಬಳಿಕ ಸನ್ನಡತೆಯಲ್ಲಿರುವುದು ದೃಢಪಟ್ಟರೆ ರೌಡಿಶೀಟ್‌ನಿಂದ ತೆಗೆಯುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು.

ಪರೇಡ್‌ನಲ್ಲಿ ಭಾಗವಹಿಸಿದ ರೌಡಿಶೀಟರ್‌ಗಳು ಒಂದು ತಿಂಗಳ ಕಾಲ ಪ್ರತಿ ವಾರ ನಿಯಮಿತವಾಗಿ ಪೊಲೀಸ್‌ ಠಾಣೆಗೆ ತೆರಳಿ ವಾರದ ದಿನಚರಿಯ ಬಗ್ಗೆ ಲಿಖಿತವಾಗಿ ವರದಿ ನೀಡಬೇಕು ಎಂದು ತಿಳಿಸಲಾಗಿತ್ತು. ಅದರಂತೆ ರೌಡಿಶೀಟರ್‌ಗಳು ನೀಡುವ ದಿನಚರಿ ಮಾಹಿತಿಯನ್ನು ಪೊಲೀಸರು ಅಡ್ಡಪರಿಶೀಲನೆ ಮಾಡುತ್ತಾರೆ. ರೌಡಿಶೀಟರ್‌ಗಳು ನೀಡಿದ ವಿವರ ನಿಜವೆಂದು ಕಂಡುಬಂದರೆ, ಅಂತಹವರು ಸಲ್ಲಿಸಿದ ಉದ್ಯೋಗ ಕೋರಿಕೆಯ ಅರ್ಜಿಯನ್ನು ಪರಿಶೀಲನೆ ನಡೆಸುತ್ತಾರೆ. ಇಲ್ಲವೇ ತಮ್ಮ ಕುಟುಂಬಕ್ಕೆ ಉದ್ಯೋಗ ನೀಡಿ ಎಂದು ರೌಡಿಶೀಟರ್‌ ಕೋರಿಕೆ ಸಲ್ಲಿಸಿದರೆ, ಅದನ್ನು ಕೂಡ ಪೊಲೀಸ್‌ ಇಲಾಖೆ ಪುರಸ್ಕರಿಸಲಿದೆ.

ರಾಜ್ಯದಲ್ಲೇ ಇದೊಂದು ವಿನೂತನ ಪ್ರಯೋಗ. ರೌಡಿಶೀಟರ್‌ಗಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವುದು ಇದರ ಉದ್ದೇಶ. ಇದರಿಂದಾಗಿ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಸಾಧ್ಯವಾದಷ್ಟುಕಡಿಮೆ ಮಾಡಲು ಪ್ರಯತ್ನಿಸಲಾಗುವುದು.

-ಡಾ.ಪಿ.ಎಸ್‌.ಹರ್ಷ, ಪೊಲೀಸ್‌ ಕಮಿಷನರ್‌, ಮಂಗಳೂರು