ಮಂಡ್ಯ(ಜ.30): ಕರೆಂಟ್‌, ಇಂಟರ್ನೆಟ್‌, ನೆಟ್‌ವರ್ಕ್ ಸಮಸ್ಯೆಗಳ ಬಗ್ಗೆ ಏನು ತಿಳಿಯದ ಕೂಲಿ ಮಾಡಿ ಜೀವನ ಸಾಗಿಸುವ ಮುಗ್ಧ ಜನರಿಗೆ ಪಿಎಸ್‌ಕೆ ಮೂಲಕ ಹೆಬ್ಬೆಟ್ಟು ನೀಡಿ ಆಹಾರ ಪದಾರ್ಥಗಳನ್ನು ಪಡೆಯಬೇಕೆಂಬ ಸರ್ಕಾರದ ಆದೇಶದಿಂದಾಗಿ ಬಡ ಜನರಿಗೆ ಗಂಟಲಿನಲ್ಲಿ ಕಡುಬು ತುರುಕಿದಂತಾಗಿದೆ.

 ಮಳವಳ್ಳಿಯಲ್ಲಿ ನಿತ್ಯ ಕೂಲಿಗೆ ಹೋಗಬೇಕಾದವರು ಸಹಕಾರ ಸಂಘಗಳ ಮುಂದೆ ಆಹಾರ ಪದಾರ್ಥ ಕೊಳ್ಳಲು ಸಾಲುಗಟ್ಟಿನಿಲ್ಲಬೇಕಿದೆ. ನೆಟ್‌ವರ್ಕ್, ಸರ್ವರ್‌ ಸಮಸ್ಯೆಯಿಂದಾಗಿ ಅಧಿಕಾರಗಳ ನಿರ್ಲಕ್ಷ್ಯದ ವಿರುದ್ಧ ಜನರು ದಂಗೆ ಹೇಳುವ ಸ್ಥಿತಿ ನಿರ್ಮಾಣವಾಗಿದೆ. ಅಕ್ಕಿ ಖರೀದಿ ಮಾಡಲು ಕೂಲಿಗೆ ಹೋಗದೇ ನ್ಯಾಯ ಬೆಲೆ ಅಂಗಡಿ ಅಥವಾ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹಾಜರಾಗುವ ಮಹಿಳೆಯರಿಗೆ ಜನರು ಸಾಲುಗಟ್ಟಿನಿಂತಿರುವುದು ಕಣ್ಣಿಗೆ ಕಾಣಿಸುತ್ತದೆ. ಇನ್ನೇನು ಕೂಲಿಗೆ ಹೋಗೋದಿಲ್ವಲ್ಲ, ಒಂದೇ ಸಾರಿ ಅಕ್ಕಿ ತಕ್ಕೊಂಡು ಹೋಗುಮ ಎಂದು ನಿರ್ಧರಿಸಿ ಸಾಲಿನಲ್ಲಿ ನಿಂತಿರಬೇಕು.

ಅಕ್ಕಿಗಾಗಿ ರಜೆ ಹಾಕಬೇಕು:

ಉದ್ಯೋಗವನ್ನು ಅರಸಿಕೊಂಡು ಹಳ್ಳಿಯಿಂದ ಪಟ್ಟಣಕ್ಕೆ ಹೋಗಿರುವ ಗ್ರಾಮೀಣ ಕುಟುಂಬಗಳು ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಅಕ್ಕಿಯನ್ನು ಖರೀದಿ ಮಾಡಲು ಒಂದು ದಿನ ರಜೆ ಹಾಕಿ ಹಳ್ಳಿಗೆ ಬರುವಂತಾಗಿದೆ. ಒಂದು ತಿಂಗಳು ಹೆಬ್ಬೆಟ್ಟು ಗುರುತು ಪಡೆದರೆ ಮತ್ತೊಂದು ತಿಂಗಳು ಆಗದಿರುವುದರಿಂದ ಕಾರ್ಡಿನಲ್ಲಿರುವವರೆಲ್ಲರೂ ಆಹಾರ ಪದಾರ್ಥಗಳಿಗಾಗಿ ನ್ಯಾಯಬೆಲೆ ಅಂಗಡಿಗೆ ಅಲೆಯುವಂತಾಗಿದೆ.

ನ್ಯಾಯಬೆಲೆ ಅಂಗಡಿ:

ತಾಲೂಕಿನಲ್ಲಿ 109 ನ್ಯಾಯಬೆಲೆ ಅಂಗಡಿಗಳಿವೆ. ಸುಮಾರು 78 ಸಾವಿರ ಪಡಿತರ ಚೀಟಿ ಇದೆ. ಎಲ್ಲಾ ಅಂಗಡಿಗಳಲ್ಲಿ ಏಕ ಕಾಲದಲ್ಲಿ ಇಂಟರ್ನೆಟ್‌ ಬಳಸುವುದರಿಂದ ಸರ್ವರ್‌ ಸಮಸ್ಯೆ ಹೆಚ್ಚಾಗುತ್ತಿದೆ. ಆಹಾರ ಇಲಾಖೆ ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ಇರುವುದರಿಂದ ಸಮಸ್ಯೆ ಮತ್ತಷ್ಟುದ್ವಿಗುಣಗೊಂಡಿದೆ.

ಕೆಲಸಕ್ಕೆ ಹೋದರೆ ಪಡಿತರ ಸಿಗಲ್ಲ, ಹೋಗದಿದ್ರೆ ಹಣವಿಲ್ಲದ ಸಂದಿಗ್ಧ!

ಸಹಕಾರ ಸಂಘದಲ್ಲಿ ವಿದ್ಯುತ್‌, ಇಂಟರ್ನೆಟ್‌, ಸರ್ವರ್‌ ಬ್ಯೂಸಿ ಸೇರಿದಂತೆ ಇತರೆ ತಾಂತ್ರಿಕ ತೊಂದರೆಯಿಂದಾಗಿ ಪಡಿತರ ಸಿಗುತ್ತದೋ ಸಿಗುವುದಿಲ್ಲವೋ ಎಂಬ ಕಾರಣಕ್ಕೆ ಸಾರ್ವಜನಿಕರು ಸಾಲಿನಲ್ಲಿ ನಿಲ್ಲಬೇಕಾದ್ದರಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆಯುತ್ತಲೇ ಇದೆ. ಕೆಲಸ ಅರಸಿ ಪಟ್ಟಣಕ್ಕೆ ತೆರಳಿದವರಿಗೆ ಇನ್ನಿಲ್ಲದ ಸಂಕಟ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಗ್ರಾಮಕ್ಕೆ ಬಂದು ಪಡಿತರ ಪಡೆಯಲು ಬಯೋಮೆಟ್ರಕ್‌ನಲ್ಲಿ ಹೆಬ್ಬೆಟ್ಟು ಗುರುತು ನೀಡಲೇಬೇಕು. ಹೆಬ್ಬೆಟ್ಟು ಕೊಡದಿದ್ದರೆ ಆ ತಿಂಗಳ ಅಕ್ಕಿಯನ್ನು ಕಡಿತಗೊಳಿಸಲಾಗುತ್ತಿದೆ. ಹಿಂದಿನ ತಿಂಗಳು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎರಡು ತಿಂಗಳದು ಒಂದೇ ಬಾರಿ ಕೊಡಿ ಎಂದು ಕೇಳಿಕೊಂಡರೂ, ಅಕ್ಕಿ ವಾಪಸ್‌ ಹೋಗಿದೆ ಎಂದು ಪಡಿತರ ವಿತರಕರು ಸಿದ್ಧ ಉತ್ತರವನ್ನು ನೀಡುತ್ತಾರೆ. ಇದರಿಂದ ಬಡಜನರಿಗೆ ಕೆಲಸಕ್ಕೆ ಹೋದರೆ ಅಕ್ಕಿ ಇಲ್ಲ, ಕೆಲಸಕ್ಕೆ ಹೋಗದಿದ್ದರೆ ಹಣವಿಲ್ಲ ಎಂಬ ಸಂದಿಗ್ಧ ಪರಿಸ್ಥಿತಿಯಲ್ಕಿ ಬದುಕು ದೂಡುವಂತಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಯಾವಾಗ ಎಂಬುದು ಮಾತ್ರ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

ಮದ್ಯ ಮಾರಾಟ ತಡೆಗೆ ಏಕಾಂಗಿ ಧರಣಿ

ಅಂಗಡಿ ಮತ್ತು ಸಹಕಾರಿ ಸಂಘಗಳಿಂದ ಆಹಾರ ಪದಾರ್ಥಗಳನ್ನು ಖರೀದಿಗೆ ಪಿಒಎಸ್‌ ಮೂಲಕ ಹೆಬ್ಬೆಟ್ಟು ನೀಡಿ ಆಹಾರ ಪದಾರ್ಥಗಳನ್ನು ಪಡೆಯಬೇಕೆಂಬ ಸರ್ಕಾರದ ಅದೇಶದಿಂದಾಗಿ ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ. ಈ ವಿಧಾನವನ್ನು ಸರ್ಕಾರ ತೆಗೆದುಹಾಕಲು ಕ್ರಮ ಕೈಗೊಳ್ಳಬೇಕು ಎಂದು ರಾಗಿಬೊಮ್ಮನಹಳ್ಳಿ ಮೋಹನ್‌ ತಿಳಿಸಿದ್ದಾರೆ.

ಸರ್ಕಾರಗಳು ದಿನಕ್ಕೊಂದು ಕಾನೂನು ತಂದು ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿವೆ. ಮೊದಲು ಪಡಿತರ ಚೀಟಿಗೆ ಆಧಾರ್‌ ಜೋಡಣೆ, ನಂತರ ಸದಸ್ಯರ ಹೆಬ್ಬೆಟ್ಟು ಕೊಟ್ಟು ಅಕ್ಕಿಯನ್ನು ಪಡೆಯಬೇಖು, ಈಗ ಮನೆಮಂದಿಯಲ್ಲಾ ಹೆಬ್ಬೆಟ್ಟು ಕೊಡಬೇಕೆನ್ನುತ್ತಿದ್ದಾರೆ. ಸರ್ಕಾರ ಹಳ್ಳಿ ಜನರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಳವಳ್ಳಿಯ ಕೃಷ್ಣಮೂರ್ತಿ ಹೇಳಿದ್ದಾರೆ.

ಇನ್ಮೇಲೆ ಹೆಬ್ಬೆಟ್ಟು ಒತ್ತದಿದ್ರೂ ಪಡಿತರ ಲಭ್ಯ

ನೆಟ್‌ವರ್ಕ್, ಸರ್ವರ್‌ ಸಮಸ್ಯೆಯಿಂದಾಗಿ ಹೆಬ್ಬೆಟ್ಟು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನರು ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಂತ್ರಿಕ ತೊಂದರೆಯ ಬಗ್ಗೆ ಜನರಿಗೆ ಅರಿವು ಇಲ್ಲದಿರುವುದರಿಂದ ವೈಷ್ಯಮ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಮೇಲ್ಮಟ್ಟದ ಅಧಿಕಾರಿಗಳು ಸಮಸ್ಯೆ ನಿವಾರಿಸಲು ಮುಂದಾಗಬೇಕು ಎಂದು ಪಡಿತರ ವಿತರಕ ಅಂತರಹಳ್ಳಿ ರಾಜಣ್ಣ ಹೇಳಿದ್ದಾರೆ.

-ಸಿ. ಸಿದ್ದರಾಜು, ಮಾದಹಳ್ಳಿ