ಮಂಡ್ಯ(ಮಾ.14): ತುಮಕೂರಿನ ತಿಪ್ಪೂರು ಗ್ರಾಮದ ರೈತ ಮಹಿಳೆ ಸಿದ್ದಮ್ಮ ಅವರ ಜಮೀನಿನಲ್ಲಿ ಬೆಳೆದು ನಿಂತ ಫಲವತ್ತಾದ ಅಡಕೆ, ತೆಂಗಿನ ಮರಗಳನ್ನು ನಿಯಮ ಬಾಹಿರವಾಗಿ ಕಡಿದು ಹಾಕಿರುವ ಜಿಲ್ಲಾಡಳಿತ, ತಾಲೂಕು ಆಡಳಿತ ಕ್ರಮವನ್ನು ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಖಂಡಿಸಿದರಲ್ಲದೆ, ಸಂತ್ರಸ್ತ ಮಹಿಳೆಗೆ 12 ಕೋಟಿ ರು. ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ಹಲವು ವರ್ಷಗಳಿಂದ ಅನುಭವದಲ್ಲಿದ್ದಾರೆ. 15 ವರ್ಷಕ್ಕೂ ಹೆಚ್ಚು ವರ್ಷದ ಫಲವತ್ತಾದ ಮರಗಳನ್ನು ಅಕ್ರಮವಾಗಿ ಕಡಿದು ಹಾಕಿರುವುದು ಅಧಿಕಾರಿಗಳ ಬೇಜವಾಬ್ದಾರಿ ನಡೆಯಾಗಿದೆ. ಇದರಿಂದ ರೈತ ಮಹಿಳೆ ಸಿದ್ದಮ್ಮ ಅವರಿಗೆ 12 ಕೋಟಿ ರು. ಆರ್ಥಿಕ ನಷ್ಟಉಂಟಾಗಿದೆ. ಒಂದು ಮರ ವರ್ಷಕ್ಕೆ 250 ಕಾಯಿ ಬಿಡುವುದಾಗಿ ಲೆಕ್ಕ ಹಾಕಿದರೂ 5 ಸಾವಿರವಾಗುತ್ತದೆ. ವರ್ಷಕ್ಕೆ ಒಂದು ಮರದ ಫಲದಿಂದ 12 ಕೋಟಿಗೂ ಹೆಚ್ಚು ನಷ್ಟಉಂಟಾಗುತ್ತದೆ ಎಂದು ದೂರಿದರು.

ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ

ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯಾಲಯದಲ್ಲಿ ಇರುವ ಪ್ರಕರಣ ವಾಪಸ್ಸು ಪಡೆದು ಸಿದ್ದಮ್ಮಗೆ ಜಮೀನು ಸಕ್ರಮಗೊಳಿಸಿಕೊಡಬೇಕು. ಆ ಜಮೀನಿನ ಅಭಿವೃದ್ಧಿಗಾಗಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ದತ್ತು ಪಡೆದು ಇಪ್ಪತ್ತೈದು ವರ್ಷ ಸಮಗ್ರ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿದರು.

ಸಿದ್ದಮ್ಮ ಹೆಸರಿನಲ್ಲಿ ವಿಶೇಷ ಯೋಜನೆ ರೂಪಿಸಿ ಸಣ್ಣ ಮತ್ತು ಅತಿ ಸಣ್ಣ ರೈತರು ಎರಡು ಎಕರೆ ಒಳಗೆ ಜೀವನಾಧಾರಕ್ಕೆ ರೂಪಿಸಿಕೊಂಡ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವುದನ್ನು ಸಕ್ರಮ ಮಾಡಬೇಕು. ಅದಕ್ಕಾಗಿ ಸರ್ಕಾರ ತಕ್ಷಣವೇ ಸುಗ್ರೀವಾಜ್ಞೆ ಹೊರಡಿಸಿ ರೈತರ ಕೃಷಿ ಜಮೀನು ತೆರವುಗೊಳಿಸದಂತೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್‌, ಮುಖಂಡರಾದ ಯಡಗನಹಳ್ಳಿ ಮಹಲಿಂಗಯ್ಯ, ರೈತ ಸಂಘದ ಕುದರಗುಂಡಿ ನಾಗರಾಜು ಉಪಸ್ಥಿತರಿದ್ದರು.