ಮದ್ದೂರು(ಮೇ 06)  ಕೊರೋನಾ ಸೋಂಕಿಗೆ ಒಳಗಾಗಿ ಉಸಿರಾಟದ ಸಮಸ್ಯೆಯಿಂದ ಸಾವು-ಬದುಕಿನ ನಡುವೆ ಸೆಣಸಾಡುತ್ತಿರುವವರ ನೆರವಿಗೆ ಸಂಸದೆ ಸುಮಲತಾ ಧಾವಿಸಿದ್ದಾರೆ. ವೈಯಕ್ತಿಕವಾಗಿ ೨೦ ಆಕ್ಸಿಜನ್ ಸಿಲಿಂಡರ್‌ಗಳನ್ನು ನೀಡುವ ಮೂಲಕ ಪ್ರಾಣಾಪಾಯದಲ್ಲಿರುವವರಿಗೆ ಪ್ರಾಣವಾಯು ನೀಡಿದ್ದಾರೆ.

ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಸಂಸದೆ ಸುಮಲತಾ ಬುಧವಾರ ತಮ್ಮ ಸ್ವಂತ ಹಣದಿಂದ 2000 ಲೀಟರ್ ಸಾಮರ್ಥ್ಯದ 20 ಆಕ್ಸಿಜನ್ ಜಂಬೋ ಸಿಲಿಂಡರ್‌ಗಳನ್ನು ನೀಡಿದ್ದಾರೆ. ಎರಡು ದಿನಗಳ ಹಿಂದೆ ಕೋವಿಡ್ ನಿರ್ವಹಣೆ ಸಂಬಂಧ ನಡೆದ ವಿಡಿಯೋ ಸಂವಾದದಲ್ಲಿ ಜಿಲ್ಲೆಯಲ್ಲಿ ಎದುರಾಗಿರುವ ಆಕ್ಸಿಜನ್ ಸಮಸ್ಯೆ ಬಗ್ಗೆ ಅಧಿಕಾರಿಗಳು ಸಂಸದೆ ಸುಮಲತಾ ಅವರ ಗಮನಕ್ಕೆ ತಂದಿದ್ದರು.

ಸ್ವಂತ ದುಡ್ಡಿನಲ್ಲಿ ಜನರ ರಕ್ಷಣೆಗೆ ನಿಂತ ಸುಮಲತಾ

ಈ ಹಿನ್ನೆಲೆಯಲ್ಲಿ ಸುಮಲತಾ ಅವರು ಸ್ವಂತ ಹಣದಲ್ಲಿ 20 ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಕೆ ಮಾಡಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ ಆಕ್ಸಿಜನ್ ಸಿಲಿಂಡರ್‌ಗಳನ್ನು ತಹಸೀಲ್ದಾರ್ ಎಚ್.ವಿ.ವಿಜಯಕುಮಾರ್ ಹಸ್ತಾಂತರ ಮಾಡಿಕೊಂಡ ನಂತರ ಪಟ್ಟಣದಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಗೆ ನೀಡಿದ್ದಾರೆ.

ಆಕ್ಸಿಜನ್ ಸಿಲಿಂಡರ್ ಅಗತ್ಯವಿರುವ ಬಗ್ಗೆ ತಮ್ಮ ಗಮನಕ್ಕೆ ತಂದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ನೀಡುವುದಾಗಿ ಹೇಳಿದ್ದರು. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್‌ಗಳು ಖಾಲಿಯಾಗಿದ್ದರೆ ಅದನ್ನು ರೀ-ಫಿಲ್ಲಿಂಗ್ ಮಾಡಿಸಿಕೊಡುವುದಾಗಿಯೂ ಸಂಸದೆ ಭರವಸೆ ನೀಡಿದ್ದಾರೆ ಎಂದು ತಹಸೀಲ್ದಾರ್‌ವಿಜಯಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದರು.

ಮಂಡ್ಯದಲ್ಲಿ ದಿನವೊಂದಕ್ಕೆ ಮೂರು ಸಾವಿರ ಲೀಟರ್ ಆಕ್ಸಿಜನ್ ಕೊರತೆ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಈ ವರ್ಷ ಎಂಪಿ ಫಂಡ್ ಇಲ್ಲ. ಸರ್ಕಾರಿ ಅನುದಾನ ಮೂಲಗಳು ಬರುವವರೆಗೂ ಕಾಯುವಂತ ಸ್ಥಿತಿಯಲ್ಲಿ ನಾವಿಲ್ಲ. ಅಲ್ಲಿಯವರೆಗೂ ಪ್ರತಿದಿನ 2000 ಲೀಟರ್ ಆಕ್ಸಿಜನ್ ಸ್ವಂತ ಖರ್ಚಿನಲ್ಲಿ ತಲುಪಿಸುವ ವ್ಯವಸ್ಥೆ ಮಾಡಿದ್ದೇನೆ. ಇದು ನನ್ನ ಕರ್ತವ್ಯ ಎಂದು ಟ್ವೀಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.