ಸರ್ಕಾರದಿಂದ ಬರಬೇಕಿದ್ದನ್ನು ಕಾಯದೇ ಸ್ವಂತ ದುಡ್ಡಿನಲ್ಲಿ ಮಂಡ್ಯ ಜನರ ರಕ್ಷಣೆಗೆ ನಿಂತ ಸುಮಲತಾ
ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಯಾಗದ ಕಾರಣ 24 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸದ್ಯ ಈ ಆಕ್ಸಿಜನ್ ದುರಂತದ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಎಚ್ಚೆತ್ತುಕೊಂಡಿದ್ದು, ಕ್ಷೇತ್ರದ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ.
ಮಂಡ್ಯ, (ಮೇ.04): ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಸಾವಿನ ಸಂಖ್ಯೆಯಲ್ಲೂ ಕೂಡ ಏರಿಕೆಯಾಗಿದೆ.
ಇಂತಹ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿ ರೋಗಿಗಳಿಗೆ ಪೂರೈಕೆಯಾಗಬೇಕಿರುವ ಆಕ್ಸಿಜನ್ ಕೊರತೆ ಕಂಡುಬರುತ್ತಿದೆ. ಇನ್ನು ಆರಂಭದಿಂದಲೂ ಮಂಡ್ಯ ಜಿಲ್ಲೆಯಲ್ಲಿ ಸದ್ಯಕ್ಕೆ ಆಕ್ಸಿಜನ್ ಸಮಸ್ಯೆ ಇಲ್ಲಾ ಎಂದು ಹೇಳುತ್ತಲೇ ಬಂದಿದ್ದ ಜಿಲ್ಲಾಡಳಿತ ಈಗ ನಮ್ಮಲ್ಲಿ ಆಕ್ಸಿಜನ್ ಸ್ಟಾಕ್ ಇಲ್ಲವೇ ಇಲ್ಲ ಎಂದು ಕೈ ಚೆಲ್ಲಿ ಕುಳಿತಿದೆ.
ಇದರಿಂದ ಎಚ್ಚೆತ್ತ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ತಮ್ಮ ಸ್ವಂತ ದುಡ್ಡಿನಲ್ಲಿ ಪ್ರತಿ ದಿನ ಎರಡು ಸಾವಿರ ಲೀಟರ್ ಆಮ್ಲಜನಕ ಪೂರೈಸಲು ನಿರ್ಧರಿಸಿದ್ದಾರೆ.
ಆಕ್ಸಿಜನ್ ಇಲ್ಲದೇ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20 ಮಂದಿ ಸಾವು
ಹೌದು.. ಮಂಡ್ಯದಲ್ಲಿ ಪ್ರತಿ ನಿತ್ಯ 3000 ಲೀಟರ್ ಆಕ್ಸಿಜನ್ ಕೊರತೆಯಾಗ್ತಿದ್ದು, ತಮ್ಮ ಕೈಲಾಗುವ ಸೇವೆ ಮಾಡಲು ಸುಮಲತಾ ಇದೀಗ ಮುಂದೆ ಬಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಂಸದೆ ಸುಮಲತಾ ಅಂಬರೀಶ್, ಮಂಡ್ಯ ಜಿಲ್ಲೆಯ ಎಂ.ಪಿ ಆಗಿ ಈ ಕೊರೋನಾ ಸಂಕಷ್ಟದ ಕಾಲದಲ್ಲಿ ನನ್ನ ಹೋರಾಟ ಜಾರಿಯಲ್ಲಿದೆ. ನನ್ನ ಸ್ವ-ಪ್ರಯತ್ನದಿಂದ ತಡೆರಹಿತವಾಗಿ ಸೇವೆ ಮುಂದುವರೆಯುತ್ತದೆ. ಮಂಡ್ಯ ಜಿಲ್ಲೆಯ ಈಗಿನ ಹಾಗೂ ಮುಂದಿನ ಅಗತ್ಯತೆಗಳು ಸದ್ಯ ನನ್ನ ಆದ್ಯತೆಯಾಗಿದೆ. ಇದು ರಾಜಕೀಯ ಮಾಡುವ ಸಮಯವಲ್ಲ. ಎಲ್ಲರೂ ಒಟ್ಟಾಗಿ ಕೈಜೋಡಿಸಿದರೆ ಇದನ್ನ ಗೆಲ್ಲಬಹುದು' ಅಂದಿದ್ದಾರೆ. ಜೊತೆಗೆ ಎಲ್ಲರಲ್ಲೂ ಮಾಸ್ಕ್ ಬಳಸಿ, ಸ್ಯಾನಿಟೈಸರ್ ಯೂಸ್ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಚಾಮರಾಜನಗರ ಆಸ್ಪತ್ರೆ ದುರಂತ : ಘಟನೆಯ ತನಿಖೆಗೆ ರಾಜ್ಯ ಸರ್ಕಾರ ಆದೇಶ
ಇನ್ನು ಮಂಡ್ಯ ಜಿಲ್ಲೆಗೆ ಪ್ರತಿ ನಿತ್ಯ 3000 ಲೀಟರ್ ಆಕ್ಸಿಜನ್ ಅಗತ್ಯವಿದ್ದು, ಸುಮಲತಾ ಅಂಬರೀಶ್ ತಮ್ಮ ಸ್ವಂತ ದುಡ್ಡಿನಲ್ಲಿ ಯಾಕಾಗಿ ಆಮ್ಲಜನಕ ಪೂರೈಸುತ್ತಿದ್ದಾರೆ ಅನ್ನೋ ಪ್ರಶ್ನೆಗೂ ಉತ್ತರಿಸಿದ್ದಾರೆ. ಅದಲ್ಲದೇ, ಮಂಡ್ಯ ಜಿಲ್ಲೆಯ ಪರವಾಗಿ ಈ ಬಗ್ಗೆ ತಮ್ಮ ಮುಂದಿನ ಕ್ರಮಗಳ ಬಗ್ಗೆಯೂ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು DHO ಅವರು ಮಂಡ್ಯ ಜಿಲ್ಲೆಗೆ ಪ್ರತಿದಿನ 3000 ಲೀಟರ್ ಆಕ್ಸಿಜನ್ ಕೊರತೆ ಎದುರಾಗಿದೆ ಎಂದು ನನ್ನ ಗಮನಕ್ಕೆ ತಂದರು. ಸದ್ಯದ ಪರಿಸ್ಥಿತಿಯಲ್ಲಿ ಎಂ.ಪಿ ಫಂಡ್ ಇಲ್ಲದ ಕಾರಣ ಹಾಗೂ ಅನುದಾನದ ಮೂಲಗಳಿಂದ ದುಡ್ಡು ಒದಗಿ ಬರುವುದು ತಡವಾಗಬಹುದಾದ ಕಾರಣ, ಸದ್ಯಕ್ಕೆ ತುರ್ತಿನ ಪರಿಸ್ಥಿತಿಯನ್ನು ಎದುರಿಸಲು ನನ್ನ ಸ್ವಂತ ದುಡ್ಡಿನಿಂದ ಪ್ರತಿದಿನ 2000 ಲೀಟರ್ ಆಕ್ಸಿಜನ್ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇನೆ. ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು-ನೋವು ಜಿಲ್ಲೆಯಲ್ಲಿ ಸಂಭವಿಸದಂತೆ ಅಧಿಕಾರಿಗಳಿಗೆ ಎಚ್ಚರ ವಹಿಸಲು ಸೂಚಿಸಿದ್ದೇನೆ ಎಂದಿದ್ದಾರೆ.