ಮಂಡ್ಯ (ಡಿ.10):  ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಸ್ವಾಭಿಮಾನದ ಹೆಸರಿನಲ್ಲಿ ದಾಖಲೆಯ ಗೆಲುವು ಸಾಧಿಸಿ ಹೊಸ ಇತಿಹಾಸ ಸೃಷ್ಟಿಸಿದ ಸಂಸದೆ ಸುಮಲತಾ ಅಂಬರೀಶ್‌, ಪ್ರಸ್ತುತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸದೆ ನಿಗೂಢವಾಗಿರಿಸಿದ್ದಾರೆ. ಸುಮಲತಾ ಈ ನಡೆ ಅವರ ಬೆಂಬಲದ ನಿರೀಕ್ಷೆಯಲ್ಲಿರುವವರಲ್ಲಿ ಗೊಂದಲ, ಅಸಮಾಧಾನಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಸ್ಥಳೀಯ ನಾಯಕತ್ವವನ್ನು ಹುಟ್ಟುಹಾಕುವ ಚುನಾವಣೆ. ಭವಿಷ್ಯದಲ್ಲಿ ಲೋಕಸಭೆ-ವಿಧಾನಸಭೆಗೆ ಸ್ಪರ್ಧಿಸುವವರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದು ಸಾಮಾನ್ಯವಾಗಿದೆ. ಬೂತ್‌ ಮಟ್ಟದಲ್ಲಿ ಬಲವರ್ಧನೆಗೆ ಗ್ರಾಪಂ ಚುನಾವಣೆಯೇ ಆಧಾರಸ್ತಂಭವಾಗಿದೆ. ಇಂತಹ ಹೊತ್ತಿನಲ್ಲಿ ಸುಮಲತಾ ಅಂಬರೀಶ್‌ ನಿಲುವನ್ನು ಪ್ರಕಟಿಸದೆ ಮೌನಕ್ಕೆ ಶರಣಾಗಿರುವುದು ದೊಡ್ಡ ಪ್ರಶ್ನೆಯಾಗಿದೆ.

ಜಿಲ್ಲೆ ಕಡೆ ಮುಖ ಮಾಡಿಲ್ಲ:

ಗ್ರಾಪಂ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವಭಾವಿ ಸಭೆಗಳನ್ನು ನಡೆಸಿ ಪಕ್ಷದ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಆದರೆ, ಚುನಾವಣೆ ಘೋಷಣೆಯಾದ ದಿನದಿಂದಲೂ ಸಂಸದೆ ಸುಮಲತಾ ಅಂಬರೀಶ್‌ ಜಿಲ್ಲೆಯ ಕಡೆ ಮುಖ ಮಾಡದಿರುವುದು ಕಾಂಗ್ರೆಸ್‌, ಬಿಜೆಪಿ ಹಾಗೂ ರೈತಸಂಘದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡ ಪ್ರವೇಶಿಸಿದ್ದ ಸುಮಲತಾ ಅಂಬರೀಶ್‌ ಅವರಿಗೆ ಕಾಂಗ್ರೆಸ್‌, ಬಿಜೆಪಿ, ರೈತಸಂಘದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿ ಗೆಲುವನ್ನು ತಂದುಕೊಟ್ಟಿದ್ದರು. ತಮ್ಮ ಲೋಕಸಭಾ ಪ್ರವೇಶಕ್ಕೆ ಕಾರಣರಾದ ಕಾರ್ಯಕರ್ತರು, ಬೆಂಬಲಿಗರಿಗೆ ಗ್ರಾಪಂ ಚುನಾವಣೆಯಲ್ಲಿ ಶಕ್ತಿ ತುಂಬುವುದಕ್ಕೆ ಸುಮಲತಾ ಮುಂದಾಗದಿರುವುದು ಹಲವರಲ್ಲಿ ಬೇಸರ ಮೂಡಿಸಿದೆ.

ನಂಬಿಕೆ, ವಿಶ್ವಾಸ ಹುಸಿಗೊಳಿಸಿದ ಭಾವನೆ:

ಪಕ್ಷೇತರ ಸಂಸದೆಯಾಗಿ ಆಯ್ಕೆಯಾದ ಬಳಿಕ ತಮಗೆ ಬೆಂಬಲವಾಗಿ ನಿಂತ ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳೊಂದಿಗೆ ವಿಶ್ವಾಸಾರ್ಹ ಸಂಬಂಧ ಮುಂದುವರೆಸಿದ್ದಾರೆ. ರೈತಸಂಘದ ಕಾರ್ಯಕರ್ತರೊಂದಿಗೂ ಉತ್ತಮ ನಂಟನ್ನು ಸುಮಲತಾ ಹೊಂದಿದ್ದಾರೆ. ಆದರೆ, ಗ್ರಾಪಂ ಚುನಾವಣೆಯಲ್ಲಿ ಅವರ ನಿರ್ಧಾರವೇನು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸುಮಲತಾ ಮೌನ ಗ್ರಾಪಂ ಚುನಾವಣೆಯಲ್ಲಿ ತಮಗೆ ಬೆಂಬಲವಾಗಿ ನಿಲ್ಲುವರೆಂಬ ನಂಬಿಕೆ, ವಿಶ್ವಾಸವನ್ನು ಹುಸಿಗೊಳಿಸಿದ್ದಾರೆಂಬ ಭಾವನೆ ಬೆಂಬಲಿಗ ಕಾರ್ಯಕರ್ತರಲ್ಲಿ ಮೂಡಿದೆ.

ಕೈ ನಾಯಕಿ ಮರಳಿ ಜೆಡಿಎಸ್ ಸೇರ್ಪಡೆ : ಚುನಾವಣೆ ಬೆನ್ನಲ್ಲೇ ಶಾಕ್

ಕಾರ‍್ಯಕರ್ತರು ಕೈಬಿಟ್ಟುಹೋಗುವ ಆತಂಕ?

ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಸುಮಲತಾ ಬಿಜೆಪಿ ಬೆಂಬಲವಾಗಿ ನಿಂತಿದ್ದು ಸುಳ್ಳಲ್ಲ. ಈಗ ಘೋಷಣೆಯಾಗಿರುವ ಗ್ರಾಪಂ ಚುನಾವಣೆಯಲ್ಲಿ ಯಾರ ಪರ ನಿಲ್ಲಬೇಕು ಎಂಬ ಗೊಂದಲ ಬಹುಶಃ ಅವರನ್ನೂ ಕಾಡುತ್ತಿರಬಹುದು. ಲೋಕಸಭಾ ಚುನಾವಣಾ ಗೆಲುವಿಗೆ ಕಾಂಗ್ರೆಸ್‌, ಬಿಜೆಪಿ ಹಾಗೂ ರೈತಸಂಘದ ಕಾರ್ಯಕರ್ತರು ಸುಮಲತಾ ಪರ ಶ್ರಮಿಸಿದ್ದಾರೆ. ಈ ಸಮಯದಲ್ಲಿ ಯಾವುದೇ ಒಂದು ಪಕ್ಷದ ಪರವಾಗಿ ಬೆಂಬಲ ಘೋಷಿಸಲಾಗದಂತಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಲತಾ ನಿಲುವು ಪ್ರಕಟಿಸದಿದ್ದರೆ ಮುಂದೆ ಆ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು, ಮುಖಂಡರ ವಿಶ್ವಾಸ ಕಳೆದುಕೊಳ್ಳಬೇಕಾಗುವ ಆತಂಕವೂ ಎದುರಾಗಿದೆ.

ಗ್ರಾಮಮಟ್ಟದ ಸಂಘಟನೆಗೆ ಒಲವಿಲ್ಲ:

ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗ್ರಾಮ ಪಂಚಾಯಿತಿ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಿಕೊಂಡು ತಮ್ಮ ವರ್ಚಸ್ಸು, ಪ್ರಾಬಲ್ಯ, ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದ್ದರೂ ಸಂಸದೆ ಸುಮಲತಾ ಅದಕ್ಕೆ ಆಸಕ್ತಿಯನ್ನೇ ತೋರಿಸದಿರುವುದು ಯಾರಿಗೂ ಅರ್ಥವಾಗದ ಸಂಗತಿಯಾಗಿದೆ.

ಸುಮಾ ನಿರೀಕ್ಷೆಯಲ್ಲಿ ಕಾರ‍್ಯಕರ್ತರು:

ಗ್ರಾಪಂ ಚುನಾವಣೆಗೆ ಸ್ಪರ್ಧಿಸಲಿಚ್ಚಿಸಿರುವ ಕಾಂಗ್ರೆಸ್‌, ಬಿಜೆಪಿ, ರೈತಸಂಘದ ಕಾರ್ಯಕರ್ತರು ಸಂಸದೆ ಸುಮಲತಾ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ. ಅವರಿಗಾಗಿ ನಿತ್ಯವೂ ಎದುರು ನೋಡುತ್ತಿದ್ದಾರೆ. ಆದರೆ, ಸುಮಲತಾ ಅವರು ಚುನಾವಣೆ ಘೋಷಣೆಯಾದಂದಿನಿಂದ ಈವರೆಗೆ ಪಕ್ಷಾತೀತವಾಗಿ ಯಾವುದೇ ಸಭೆಯನ್ನು ನಡೆಸಿಲ್ಲ, ಚುನಾವಣೆಯಲ್ಲಿ ಬೆಂಬಲವಾಗಿ ನಿಂತವರ ರಾಜಕೀಯ ಆಸೆ-ಆಕಾಂಕ್ಷೆಗಳ ಬಗ್ಗೆ ಸಭೆ ಕರೆದು ತಿಳಿದುಕೊಳ್ಳುವ ಯಾವುದೇ ಪ್ರಯತ್ನ ಮಾಡಿಲ್ಲ. ಇದರಿಂದ ಸುಮಲತಾ ಬೆಂಬಲಿಗರು, ಪಕ್ಷಗಳ ಕಾರ್ಯಕರ್ತರು ರೋಸಿಹೋಗಿದ್ದಾರೆಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ.

ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗಿರುವ ಅಂಬರೀಶ್‌ ಬೆಂಬಲಿಗರು ಸುಮಲತಾ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಹೇಗಾದರೂ ಮಾಡಿ ಸುಮಲತಾ ಅಂಬರೀಶ್‌ರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿದ್ದರೂ ಅವೆಲ್ಲವೂ ಕೈಗೂಡುತ್ತಿಲ್ಲ.