ವಿಧಾನಸಭಾ ಚುನಾವಣೆ ವೇಳಾಪಟ್ಟಿಪ್ರಕಟವಾದ ಬೆನ್ನಲ್ಲೇ ಜಿಲ್ಲೆಯ ಮಂಡ್ಯ, ಕೆ.ಆರ್‌.ಪೇಟೆ ಹಾಗೂ ಮದ್ದೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಂದ ಲಾಭಿ ತೀವ್ರಗೊಂಡಿದೆ. ರಾಜಧಾನಿಯಲ್ಲೇ ಕುಳಿತು ಟಿಕೆಟ್‌ ಘೋಷಿಸಿಕೊಂಡೇ ಹಿಂತಿರುಗುವ ಹಠಕ್ಕೆ ಬಿದ್ದಿದ್ದಾರೆ. ತಮ್ಮ ಬೆಂಬಲಿಗ ನಾಯಕರ ಬೆನ್ನುಹತ್ತಿ ಟಿಕೆಟ್‌ಗೆ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

 ಮಂಡ್ಯ ಮಂಜುನಾಥ

ಮಂಡ್ಯ : ವಿಧಾನಸಭಾ ಚುನಾವಣೆ ವೇಳಾಪಟ್ಟಿಪ್ರಕಟವಾದ ಬೆನ್ನಲ್ಲೇ ಜಿಲ್ಲೆಯ ಮಂಡ್ಯ, ಕೆ.ಆರ್‌.ಪೇಟೆ ಹಾಗೂ ಮದ್ದೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಂದ ಲಾಭಿ ತೀವ್ರಗೊಂಡಿದೆ. ರಾಜಧಾನಿಯಲ್ಲೇ ಕುಳಿತು ಟಿಕೆಟ್‌ ಘೋಷಿಸಿಕೊಂಡೇ ಹಿಂತಿರುಗುವ ಹಠಕ್ಕೆ ಬಿದ್ದಿದ್ದಾರೆ. ತಮ್ಮ ಬೆಂಬಲಿಗ ನಾಯಕರ ಬೆನ್ನುಹತ್ತಿ ಟಿಕೆಟ್‌ಗೆ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

ಮುಂದಿನ ಎರಡು-ಮೂರು ದಿನದಲ್ಲಿ ಕಾಂಗ್ರೆಸ್‌ನ ಎರಡನೇ ಪಟ್ಟಿಬಿಡುಗಡೆಯಾಗುವ ಸಾಧ್ಯತೆಗಳಿವೆ. ಪಕ್ಷದ ನಾಯಕರೂ ಟಿಕೆಟ್‌ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಹೀಗಾಗಿ ಟಿಕೆಟ್‌ ಆಕಾಂಕ್ಷಿಗಳು ರಾಜಧಾನಿಯಲ್ಲೇ ಠಿಕಾಣಿ ಹೂಡಿ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕೆ.ಕೆ.ರಾಧಾಕೃಷ್ಣ, ಡಾ.ಎಚ್‌.ಕೃಷ್ಣ ಮತ್ತು ಗಣಿಗ ರವಿಕುಮಾರ್‌ ಹೆಸರು ಪ್ರಮುಖವಾಗಿ ಚಾಲ್ತಿಯಲ್ಲಿರುವುದಾಗಿ ಹೇಳಲಾಗುತ್ತಿದೆ. ಕಾಂಗ್ರೆಸ್‌ ನಾಯಕ ಎನ್‌.ಚಲುವರಾಯಸ್ವಾಮಿ ಅವರು ಕೆ.ಕೆ.ರಾಧಾಕೃಷ್ಣ ಪರವಾಗಿ ತೀವ್ರ ಬ್ಯಾಟಿಂಗ್‌ ನಡೆಸುತ್ತಿದ್ದಾರೆ. ಜೆಡಿಎಸ್‌ನಿಂದ ಟಿಕೆಟ್‌ ಭರವಸೆ ಸಿಗದೆ ಕಾಂಗ್ರೆಸ್‌ ಸೇರಿರುವ ರಾಧಾಕೃಷ್ಣ ಅವರು ಪಕ್ಷದ ಟಿಕೆಟ್‌ ಸಿಕ್ಕೇ ಸಿಗುವುದೆಂಬ ಖಚಿತ ವಿಶ್ವಾಸದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟಿಕೆಟ್‌ಗಾಗಿ ದೆಹಲಿಯವರೆಗೆ ಹೋಗಿ ಲಾಭಿ ನಡೆಸಿಕೊಂಡು ಬಂದ ಅಮರಾವತಿ ಚಂದ್ರಶೇಖರ್‌ ನೇತೃತ್ವದ ಮೂಲ ಕಾಂಗ್ರೆಸ್ಸಿಗರ ಗುಂಪು ಇದೀಗ ಮೌನಕ್ಕೆ ಶರಣಾಗಿದೆ. ಅಲ್ಲದೇ, ಕೆ.ಕೆ.ರಾಧಾಕೃಷ್ಣ ಅವರು ದಿಲ್ಲಿಗೆ ಹೋಗಿದ್ದ ಹಲವು ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಚುನಾವಣೆಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮನವೊಲಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಸೇರಿದ ದಿನದಿಂದಲೂ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರ ವಿಶ್ವಾಸದೊಂದಿಗೆ ಕೆ.ಕೆ.ರಾಧಾಕೃಷ್ಣ ಮುಂದುವರೆಯುತ್ತಿದ್ದಾರೆ.

ಗಣಿಗ ರವಿಕುಮಾರ್‌ಗೆ ಕಳೆದ ಬಾರಿಯ ಸೋಲಿನ ಅನುಕಂಪ ತಮ್ಮ ಕೈ ಹಿಡಿಯಬಹುದೆಂಬ ವಿಶ್ವಾಸದಲ್ಲಿದ್ದಾರೆ. ಮಂಡ್ಯ ನಗರ ಸೇರಿದಂತೆ ಗ್ರಾಮಾಂತರದಲ್ಲೂ ತಮ್ಮ ಹಿಡಿತವಿದೆ. ಜೆಡಿಎಸ್‌ ಪಕ್ಷದೊಳಗಿರುವ ಗೊಂದಲ, ಬಿಜೆಪಿ ಹೆಚ್ಚು ಪ್ರಾಬಲ್ಯವಿಲ್ಲದಿರುವುದರಿಂದ ಗೆಲುವಿನ ಸಾಧ್ಯತೆಗಳು ಹೆಚ್ಚಿದೆ. ಅದಕ್ಕಾಗಿ ತಮಗೇ ಟಿಕೆಟ್‌ ನೀಡುವಂತೆ ನಾಯಕರೆದುರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಡಾ.ಎಚ್‌.ಕೃಷ್ಣ ಅವರೂ ಕೂಡ ಟಿಕೆಟ್‌ ಹೋರಾಟ ಮುಂದುವರೆಸಿದ್ದಾರೆ. ಟಿಕೆಟ್‌ಗಾಗಿ ದೆಹಲಿವರೆಗೂ ಹೋಗಿಬಂದಿರುವ ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರ ಬೆನ್ನುಹತ್ತಿ ಟಿಕೆಟ್‌ಗೆ ಲಾಭಿ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 16 ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದು, ಇದೀಗ ಕೆ.ಕೆ.ರಾಧಾಕೃಷ್ಣ, ಡಾ.ಎಚ್‌.ಕೃಷ್ಣ, ಗಣಿಗ ರವಿಕುಮಾರ್‌ ಮೂವರಿಗೆ ಸೀಮಿತವಾಗಿ ಟಿಕೆಟ್‌ ಕದನ ನಡೆಯುತ್ತಿದೆ ಎನ್ನಲಾಗಿದೆ. ಉಳಿದಂತೆ ಎಲ್ಲರೂ ಬಹುತೇಕ ಶಾಂತಿಗೊಂಡಿದ್ದಾರೆ. ಇದರಲ್ಲಿ ಕೆ.ಕೆ.ರಾಧಾಕೃಷ್ಣ ಅವರಿಗೇ ಟಿಕೆಟ್‌ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಾಕ್ಸ್‌...

ಕೆ.ಆರ್‌.ಪೇಟೆ ಕೈ ಟಿಕೆಟ್‌ಗೂ ನಿಲ್ಲದ ಸಮರ

ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಿಂದ ವಿಜಯ್‌ ರಾಮೇಗೌಡ ಹಾಗೂ ಜೆಡಿಎಸ್‌ನಿಂದ ಮೊನ್ನೆಯಷ್ಟೇ ಪಕ್ಷ ಸೇರಿರುವ ಬಿ.ಎಲ್‌.ದೇವರಾಜು ನಡುವೆ ತಿಕ್ಕಾಟ ನಡೆಯುತ್ತಿದೆ. ವಿಜಯ್‌ ರಾಮೇಗೌಡರ ಪರವಾಗಿ ಮಾಜಿ ಸಚಿವರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಮತ್ತಿತರರು ಬೆಂಬಲವಾಗಿ ನಿಂತಿದ್ದಾರೆ. ಚುನಾವಣೆಯನ್ನು ಗುರಿಯಾಗಿಸಿಕೊಂಡು ಕಳೆದೊಂದು ವರ್ಷದಿಂದ ಕ್ಷೇತ್ರದಾದ್ಯಂತ ವಿಜಯ್‌ರಾಮೇಗೌಡ ಸುತ್ತಾಡಿದ್ದಾರೆ. ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿ ವರ್ಚಸ್ಸನ್ನು ವೃದ್ಧಿಸಿಕೊಂಡಿದ್ದಾರೆ. ಅವರಿಗೆ ಟಿಕೆಟ್‌ ಕೊಟ್ಟರೆ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿ ನಾರಾಯಣಗೌಡರು ಪಕ್ಷ ಸೇರುವುದನ್ನು ತಡೆಯಲು ಪಕ್ಷದ ಆರು ಮಂದಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಯಾರಿಗೇ ಟಿಕೆಟ್‌ ನೀಡಿದರೂ ಗೆಲುವಿಗೆ ಶ್ರಮಿಸುವುದಾಗಿ ಹೇಳುತ್ತಿದ್ದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್‌, ಬಿ.ಪ್ರಕಾಶ್‌ ಅವರು ಜೆಡಿಎಸ್‌ ತೊರೆದು ಪಕ್ಷ ಸೇರಿರುವ ಬಿ.ಎಲ್‌.ದೇವರಾಜು ಪರ ಇದೀಗ ಬ್ಯಾಟಿಂಗ್‌ ನಡೆಸುತ್ತಿರುವುದು ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ ಎನ್ನಲಾಗಿದೆ.

ಗುರುವಾರ ಬೆಂಗಳೂರಿನಲ್ಲಿ ಕೆ.ಆರ್‌.ಪೇಟೆ ಟಿಕೆಟ್‌ ಆಕಾಂಕ್ಷಿಗಳ ಸಭೆ ಕರೆಯಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹಾಗೂ ರಾಜ್ಯಸಭಾ ಸದಸ್ಯ ಜಿ.ಕೆ.ರಾಜಶೇಖರ್‌ ಪಾಲ್ಗೊಂಡಿದ್ದರು. ಏಳು ಜನ ಟಿಕೆಟ್‌ ಆಕಾಂಕ್ಷಿಗಳಲ್ಲಿ ಐವರು ಹಾಜರಿದ್ದರು. ವೈಯಕ್ತಿಕ ಕಾರಣಗಳಿಂದ ಕೆ.ಬಿ.ಚಂದ್ರಶೇಖರ್‌, ಬಿ.ಪ್ರಕಾಶ್‌ ಗೈರು ಹಾಜರಾಗಿದ್ದರು. ಇದರಿಂದ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ. ಹಾಗಾಗಿ ಅಭ್ಯರ್ಥಿ ಆಯ್ಕೆ ಹೊಣೆಯನ್ನು ರಾಜ್ಯಸಭೆ ಮಾಜಿ ಸದಸ್ಯ ಬಿ.ರೆಹಮಾನ್‌ಖಾನ್‌ ಹೆಗಲಿಗೆ ಹೊರಿಸಲಾಗಿದೆ. ಅವರಿಂದ ಬರುವ ಹೆಸರನ್ನು ಅಂತಿಮಗೊಳಿಸುವುದಾಗಿ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಮದ್ದೂರಿಗೂ ಬಿರುಸಿನ ಕದನ

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಟಿಕೆಟ್‌ ಕದನ ಬಿರುಸಾಗಿ ನಡೆಯುತ್ತಿದೆ. ಗುರುಚರಣ್‌ ಹಾಗೂ ಕದಲೂರು ಉದಯ್‌ ಕೈ ಟಿಕೆಟ್‌ಗಾಗಿ ಕಾದಾಟ ನಡೆಸುತ್ತಿದ್ದಾರೆ. ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮೂಲಕ ಗುರುಚರಣ್‌ ಪರವಾಗಿ ಪ್ರಭಾವ ಬೀರುತ್ತಿದ್ದಾರೆ. ಕದಲೂರು ಉದಯ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಡಿ.ಕೆ.ಶಿವಕುಮಾರ್‌ ಯಾರಿಗೆ ಟಿಕೆಟ್‌ ನೀಡುವುದು ಎಂಬ ಬಗ್ಗೆ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಇಬ್ಬರಲ್ಲಿ ಒಬ್ಬರ ಮನವೊಲಿಸುವ ಪ್ರಕ್ರಿಯೆ ನಡೆಸುತ್ತಿದ್ದರೂ ಅದು ಡಿಕೆಶಿಗೆ ಸುಲಭ ತುತ್ತಾಗಿ ಪರಿಣಮಿಸಿಲ್ಲ ಎನ್ನಲಾಗಿದೆ.

ಗುರುಚರಣ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಲು ತವಕಿಸುತ್ತಿದ್ದಾರೆ. ಈಗಾಗಲೇ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರನ್ನು ಭೇಟಿಯಾಗಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಅವರನ್ನು ಮಣಿಸಲು ಗುರುಚರಣ್‌ ಸಮರ್ಥ ಅಭ್ಯರ್ಥಿ ಅಲ್ಲ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಗುರುಚರಣ್‌ ಪರವಾಗಿ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಬ್ಯಾಟಿಂಗ್‌ ಮಾಡುತ್ತಿರುವುದರಿಂದ ಅವರ ಮೇಲಿನ ಅಭಿಮಾನದಿಂದ ಇತರರು ಮೌನವಾಗಿದ್ದಾರೆ ಎಂದು ತಿಳಿದುಬಂದಿದೆ.

ಕದಲೂರು ಉದಯ್‌ ಅವರು ಉದಯಯಾನ ಮೂಲಕ ಕ್ಷೇತ್ರದೊಳಗೆ ಸಂಚಲನ ಸೃಷ್ಟಿಸಿದ್ದಾರೆ. ಯುವಕರನ್ನು ಸೆಳೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಚುನಾವಣೆಯಲ್ಲಿ ಡಿ.ಸಿ.ತಮ್ಮಣ್ಣ ಅವರಿಗೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಉದಯ್‌ಗೆ ಇರುವುದರಿಂದ ಅವರಿಗೇ ಟಿಕೆಟ್‌ ನೀಡಬೇಕೆಂಬ ಒತ್ತಡವೂ ಡಿ.ಕೆ.ಶಿವಕುಮಾರ್‌ ಮೇಲೆ ಬೀಳುತ್ತಿದೆ. ಇದು ಡಿಕೆಶಿ ಪಾಲಿಗೆ ನುಂಗಲಾರದ ತುತ್ತಾಗಿದೆ.