ಮಂಡ್ಯ(ಆ.06): ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಮದ್ದೂರು ಪಟ್ಟಣದಲ್ಲಿ ಸೋಮವಾರ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಕೊಪ್ಪ ಹೊಸ ಸರ್ಕಲ್‌ನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸೇರಿದ್ದ ರೈತ ಸಂಘದ ಕಾರ್ಯಕರ್ತರು, ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಪ್ರತಿಭಟನೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕವಾಗಿ ಪರದಾಡಿದರು.

ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ತಮಿಳುನಾಡು ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಾಲೆಗೆ ನೀರಿಲ್ಲ, ತಮಿಳುನಾಡಿಗೆ ನಿರಂತರ ನೀರು:

ಈ ಹಿಂದೆ ಜಿಲ್ಲಾಡಳಿತ ಕೆಆರ್‌ಎಸ್‌ ಜಲಾಶಯದಿಂದ ಹತ್ತು ದಿನಗಳ ಕಾಲ ಜಿಲ್ಲೆಯ ಕೊನೇ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸುವುದಾಗಿ ಹೇಳಿತ್ತು. ಆದರೆ, ಮದ್ದೂರು ಹಾಗೂ ಮಳವಳ್ಳಿ ತಾಲೂಕಿನ ಎಡ ಮತ್ತು ಬಲದಂಡೆ ನಾಲೆಗಳ ಕೊನೇ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿದಿಲ್ಲ. ಇಂತಹ ಸಂದರ್ಭದಲ್ಲಿ ರೈತರು ಬೆಳೆದಿದ್ದ ಕಬ್ಬು, ಹಿಪ್ಪನೇರಳೆ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ಆದರೆ, ಜಿಲ್ಲಾಡಳಿತ ನಾಲೆಗೆ ನೀರನ್ನು ನಿಲ್ಲಿಸಿ, ತಮಿಳುನಾಡಿಗೆ ಹರಿಸುವ ಮೂಲಕ ಕೆಆಸ್‌ಎಸ್‌ ಅಣೆಕಟ್ಟೆಯ ನೀರನ್ನು ಖಾಲಿ ಮಾಡುವ ಉದ್ದೇಶ ಹೊಂದಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಎಚ್ಚರಿಕೆ:

ಪ್ರತಿಭಟನೆ ವೇಳೆ ಮಾತನಾಡಿದ ರೈತ ಮುಖಂಡ ವರದರಾಜು, ಸರ್ಕಾರ ಈ ತಕ್ಷಣ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ, ರೈತರ ಜಮೀನುಗಳಿಗೆ ನೀರು ಹರಿಸಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲವಾಗುವಂತೆ ಕೆರೆ ಕಟ್ಟೆಗಳಿಗೆ ತುಂಬಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರು ಜನ-ಜಾನುವಾರುಗಳೊಂದಿಗೆ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಮಿಳುನಾಡಿಗೆ ನೀರು: ಮಂಡ್ಯದಲ್ಲಿ ಹೆದ್ದಾರಿ ತಡೆದ ರೈತರು

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಲಿಂಗಪ್ಪಾಜಿ, ನಂಜುಂಡಯ್ಯ, ಕೀಳಘಟ್ಟನಂಜುಂಡಯ್ಯ, ಮಹೇಂದ್ರ,ಕ್ಯಾತಘಟ್ಟರವಿಕುಮಾರ, ಶ್ರೀನಿವಾಸ್‌, ಗೊಲ್ಲರದೊಡ್ಡಿ ಅಶೋಕ, ವೆಂಕಟೇಶ್‌, ಸಾದೊಳಲು ಸಿದ್ದೇಗೌಡ, ಪುಟ್ಟಸ್ವಾಮಿ, ಜಗದೀಶ್‌, ವೆಂಕಟೇಶ್‌, ಜಯವೀರೇಗೌಡ ಮತ್ತಿತರರಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ