ಮಂಡ್ಯ (ಅ.05):  ಕೊರೊನಾ ನಿಯಂತ್ರಣದಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಪೌರಕಾರ್ಮಿಕರು ಹಾಗೂ ಜಿಲ್ಲಾಡಳಿತದ ಉತ್ತಮ ಕಾರ್ಯದಿಂದ ಇದು ಸಾಧ್ಯವಾಗಿದೆ ಎಂದು ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ, ಕೊರೋನಾ ಸಂಕಷ್ಟದ ನಡುವೆಯೂ ನಿತ್ಯವೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ನಮ್ಮೆಲ್ಲರನ್ನೂ ರಕ್ಷಣೆ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆ ಹಿರಿದು. ಪ್ರಧಾನಿ ನರೇಂದ್ರ ಮೋದಿಯವರೇ ಪೌರಕಾರ್ಮಿಕರ ಪಾದ ತೊಳೆದು ಅಭಿನಂದನೆ ಸಲ್ಲಿಸಿದ್ದಾರೆ. ಸುಂದರ ನಗರ-ಪಟ್ಟಣ ನಿರ್ಮಾಣ ಪೌರ ಕಾರ್ಮಿಕರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಹೆಚ್ಚಾಗುತ್ತಿದೆ ಕೋವಿಡ್ ಸೋಂಕು; ಅಸ್ತಮಾ ಇರುವವರೇ ಇರಲಿ ಆರೋಗ್ಯದ ಬಗ್ಗೆ ನಿಗಾ ..

ಕೊರೋನಾ ತಡೆಗಟ್ಟುವಲ್ಲಿ ಶ್ರಮಿಸಿದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸಚಿವರು ಬಹುಮಾನ ವಿತರಿಸಿದರು. ನಗರಸಭೆಯ ನೂತನ ಸ್ವಚ್ಚತಾ ನಿರ್ವಹಣಾ ವಾಹನಗಳಿಗೆ ಸಚಿವರು ಹಸಿರು ನಿಶಾನೆ ತೋರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಪೌರಾಯುಕ್ತ ಎಸ್‌.ಲೋಕೇಶ್‌, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್‌, ನಗರಸಭೆ ಮಾಜಿ ಅಧ್ಯಕ್ಷ ಎಂ.ಅರುಣ್‌ಕುಮಾರ್‌ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.

ಪೌರ ಕಾರ್ಮಿಕರ ಜೊತೆ ಊಟ ಮಾಡಿದ ಸಚಿವ

ಮಂಡ್ಯ: ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಪೌರ ಕಾರ್ಮಿಕರಿಗೆ ಊಟ ಬಡಿಸುವುದರ ಜೊತೆಗೆ ತಾವೂ ಅವರ ಜೊತೆ ಕುಳಿತು ಊಟ ಮಾಡುವುದರೊಂದಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸರಳತೆ ಮೆರೆದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಪೌರಕಾರ್ಮಿಕ ದಿನಾಚರಣೆ ಮುಗಿಸಿ ಪೌರ ಕಾರ್ಮಿಕರ ಜೊತೆ ಊಟಕ್ಕೆ ತೆರಳಿದ ಸಚಿವರು ಮೊದಲು ಪೌರ ಕಾರ್ಮಿಕರಿಗೆ ಊಟ ಬಡಿಸಿದರು. ಆನಂತರ ಪೌರ ಕಾರ್ಮಿಕರ ಜೊತೆಯಲ್ಲೇ ಕುಳಿತು ಊಟ ಮಾಡಿದರು. ಸಚಿವರೊಟ್ಟಿಗೆ ಕುಳಿತು ಊಟ ಮಾಡುವುದರೊಂದಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಕೂಡ ಸಾಥ್‌ ನೀಡಿದರು.