ಮಗನ ಮದುವೆ ಬೀಗರ ಔತಣದ ದುಡ್ಡು ದೇಣಿಗೆಗೆ: ಸಚಿವ
ಕೇರಳದ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಲು ನಟನೊಬ್ಬರು ಮದುವೆಯನ್ನು ಮುಂದೂಡಿದ್ದಾರೆ. ಒಂಬತ್ತು ವರ್ಷಗಳಿಂದ ಸೈಕಲ್‌ಗಾಗಿ ಕೂಡಿಟ್ಟ ಹಣವನ್ನು ಪ್ರವಾಹ ಪೀಡಿತರಿಗೆ ಬಾಲಕಿಯೊಬ್ಬಳು ನೀಡಿದ್ದಾಳೆ. ಈ ಎಲ್ಲ ಮಾನವೀಯ ಕಾರ್ಯಗಳ ನಡುವೆಯೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಮಗನ ಮದುವೆಯ ಬೀಗರ ಔತಣವನ್ನು ಕ್ಯಾನ್ಸಲ್ ಮಾಡಿ, ಕೊಡಗು ಸಂತ್ರಸ್ತರ ನೆರವಿಗೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ.
ಮಂಡ್ಯ: ಕೊಡಗಿನ ಪ್ರವಾಹ ಸಂತ್ರಸ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಸಚಿವ ಎಚ್.ಡಿ.ರೇವಣ್ಣ ಒಂದೆಡೆಯಾದೆ, ನಮ್ಮನ್ನು ವಿಚಾರಿಸಲು ಬರುತ್ತಿಲ್ಲವೆಂಬ ಸಂತ್ರಸ್ತರ ಅಳಲು ಮತ್ತೊಂದೆಡೆ. ಈ ಎಲ್ಲ ಅಮಾನವೀಯ ಕೃತ್ಯಗಳ ನಡುವೆಯವೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮಹತ್ವದ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.
ಪುತ್ರ ಶಿವರಾಜು ಅವರ ಬೀಗರ ಔತಣ ಕೂಟವನ್ನು ರದ್ದು ಮಾಡಿ, ಆ ಹಣವನ್ನು ಕೊಡಗಿನ ಪ್ರವಾಹ ಸಂತ್ರಸ್ತರಿಗೆ ನೀಡಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ನೀಡುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ಪುತ್ರನ ಮದುವೆ ಬೀಗರ ಔತಣ ಭಾನುವಾರ ನಡೆಯಬೇಕಿತ್ತು. ಕೊಡಗಿನ ಜನರು ಸಂಕಷ್ಟದಲ್ಲಿರುವಾಗ ಸಂಭ್ರಮದ ಆಚರಣೆ ಸರಿಯಿಲ್ಲವೆಂದು ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ.
ಮತ್ತಷ್ಟು ಮಂಡ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ