ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಲ್ಲಿ ದಸರಾ ಜಂಬೂ ಸವಾರಿ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕನ್ನಡಪರ ಮುಖಂಡರನ್ನು ಪೊಲೀಸರು ತಡೆದಿದ್ದರಿಂದ ವಾಗ್ವಾದ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಶಾಸಕ ರಮೇಶ ಬಂಡಿಸಿದ್ದೇಗೌಡ ಮಧ್ಯಪ್ರವೇಶಿಸಿ ಎಲ್ಲರನ್ನು ಸಮಾಧಾನಪಡಿಸಿ ಒಳಗೆ ಕರೆದೊಯ್ದರು.

ಶ್ರೀರಂಗಪಟ್ಟಣ: ದಸರಾ ಜಂಬೂ ಸವಾರಿ ಕೇಂದ್ರ ಬಿಂದು ಕಿರಂಗೂರು ಬನ್ನಿಮಂಟಪಕ್ಕೆ ಪ್ರವೇಶಿಸಲು ಮುಂದಾದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ತಡೆದು ತಳ್ಳಾಡಿದ ಘಟನೆ ಗುರುವಾರ ನಡೆಯಿತು.

ಗೇಟಿನಲ್ಲೇ ತಡೆದ ಪೊಲೀಸರು

ಮನ್ಮುನ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಿ. ಬೋರೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಗಿರೀಶ್, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ ರವಿಶಂಕರ್, ಪುರಸಭೆ ಮಾಜಿ ಅಧ್ಯಕ್ಷ ಶಿವಾಜಿರಾವ್, ಗ್ರಾಪಂ ಮಾಜಿ ಸದಸ್ಯ ಹೆಬ್ಬಾಡಿಹುಂಡಿ ಶಿವಮಲ್ಲು, ಮುಖಂಡ ಬಿ.ಆರ್.ಕೊಪ್ಪಲು ದೀಪಕ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಒಳ ಪ್ರವೇಶಿಸಲು ಅವಕಾಶ ನೀಡದೆ ಗೇಟಿನಲ್ಲೇ ತಡೆದು ಹೊರ ಕಳುಹಿಸಲು ಮುಂದಾದರು.

ಶಾಸಕ ಬಂಡಿಸಿದ್ದೇಗೌಡ ಓಡಿಬಂದು ಸಮಾಧಾನಪಡಿಸಿದರು

ಈ ವೇಳೆ ಮಾತಿನ ಚಕಮಕಿ ನಡೆಯಿತು. ಘಟನೆ ಕಂಡ ಇನ್ಸ್ ಪೆಕ್ಟರ್ ಬಿ.ಬಿ ಕುಮಾರ್ ಹಾಗೂ ಸಿಪಿಐ ವಿವೇಕಾನಂದ ತಕ್ಷಣ ಮದ್ಯ ಪ್ರವೇಶಿಸಿ, ತಮ್ಮ ಪೊಲೀಸ್ ಸಿಬ್ಬಂದಿಗೆ ತಿಳಿಹೇಳಿ ಒಳಗೆ ಕಳುಹಿಸುವಂತೆ ತಿಳಿಸಿದರು. ಇದಕ್ಕೆ ಒಪ್ಪದ ಸಿಬ್ಬಂದಿಗಳು ಪುನಃ ವಾಗ್ವಾದಕ್ಕೆ ಇಳಿದ ಕಾರಣ ಪರಿಸ್ಥಿತಿ ಬಿಗಿಡಾಯಿಸಿತು. ಶಾಸಕ ರಮೇಶ ಬಂಡಿಸಿದ್ದೇಗೌಡ ಖುದ್ದು ಓಡಿ ಬಂದು ಎಲ್ಲರನ್ನು ಸಮಾಧಾನ ಪಡಿಸಿ ಮುಖಂಡರನ್ನು ಒಳ ಕರೆಸಿಕೊಂಡರು.