ಮಂಡ್ಯ (ಸೆ.01):  ಜಿಲ್ಲಾ ಪಂಚಾಯಿತಿಯ ಮೂರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳ ಪೈಕಿ ಒಂದು ಸಮಿತಿಯ ಅಧ್ಯಕ್ಷ ಸ್ಥಾನ ಅಲಂಕರಿಸುವಲ್ಲಿ ಕಾಂಗ್ರೆಸ್‌ ಪಕ್ಷದ ಹನುಮಂತು ಯಶಸ್ವಿಯಾಗಿದ್ದಾರೆ. ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ಹಾಗೂ ಅದಕ್ಕೂ ಮುನ್ನ ಜೆಡಿಎಸ್‌ ಬೆಂಬಲಿಸಿದ್ದರಿಂದ ಅಧ್ಯಕ್ಷ ಸ್ಥಾನ ಉಡುಗೊರೆಯಾಗಿ ಅವರಿಗೆ ದೊರಕಿದೆ.

ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೆ ಸೋಮವಾರ ಚುನಾವಣೆ ನಿಗದಿಪಡಿಸಲಾಗಿತ್ತು. ಅದರಂತೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹನುಮಂತು, ಸಾಮಾಜಿಕ ಹಾಗೂ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಿ.ಅಶೋಕ್‌, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮುತ್ತಣ್ಣ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.

ಸಚಿವ ಸ್ಥಾನ: ಎಂಟಿಬಿ, ಶಂಕರ್‌, ವಿಶ್ವನಾಥ್‌ಗೆ ನೋಟಿಸ್.

ಜಿಪಂ ಚುನಾವಣೆಯಲ್ಲಿ ಮಳವಳ್ಳಿ ತಾಲೂಕು ತಳಗವಾದಿ ಕ್ಷೇತ್ರದಿಂದ ಗೆದ್ದುಬಂದಿರುವ ಹನುಮಂತು ಅವರು ಜಿಪಂನೊಳಗೆ ಕಾಂಗ್ರೆಸ್‌ ವಿರೋಧಪಕ್ಷದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಪರಾಭವಗೊಂಡ ನಂತರದಲ್ಲಿ ನಿಧಾನವಾಗಿ ಅವರಿಂದ ದೂರವಾಗುತ್ತಾ ಜೆಡಿಎಸ್‌ಗೆ ಹತ್ತಿರವಾಗುತ್ತಾ ಬಂದರು. ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರೊಂದಿಗೆ ಮುನಿಸು ಪ್ರದರ್ಶಿಸುತ್ತಲೇ ನಿರಂತರವಾಗಿ ಕಾಂಗ್ರೆಸ್‌ ವಿರೋಧಿ ನಿಲುವು ಪ್ರದರ್ಶಿಸುತ್ತಾ ಬಂದಿದ್ದರು.

ಜಿಪಂ ಬಜೆಟ್‌ ಸಭೆಯ ಸಮಯದಲ್ಲೂ ಜೆಡಿಎಸ್‌ ಪಾಳಯದಲ್ಲಿ ಬಹಿರಂಗವಾಗಿಯೇ ಗುರುತಿಸಿಕೊಂಡರು. ಕಾಂಗ್ರೆಸ್‌ ಸದಸ್ಯರೆಲ್ಲರೂ ಸಭೆಗೆ ಹಾಜರಾಗಿದ್ದರೆ ಹನುಮಂತು ಮಾತ್ರ ಜೆಡಿಎಸ್‌ ಪಾಳಯದಲ್ಲಿ ಉಳಿದಿದ್ದರು. ಆನಂತರ ನಡೆದ ಜಿಪಂ ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳ ಚುನಾವಣೆಯಲ್ಲೂ ಹನುಮಂತು ಅಧ್ಯಕ್ಷೆ ನಾಗರತ್ನಸ್ವಾಮಿ ವಿರೋಧಿ ಜೆಡಿಎಸ್‌ ಬಣದವರ ಜೊತೆ ಕೈಜೋಡಿಸಿ ಗೆಲುವಿಗೆ ಸಾಥ್‌ ನೀಡಿದರು.

ಎಲ್ಲ ಸ್ಥಾಯಿ ಸಮಿತಿಗಳಲ್ಲೂ ಜೆಡಿಎಸ್‌ ಬಲ ಹೆಚ್ಚಿದ್ದ ಕಾರಣ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ, ಸಾಮಾಜಿಕ ಹಾಗೂ ನ್ಯಾಯ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಇಲ್ಲದೆ ಅಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಜೆಡಿಎಸ್‌ ಬೆಂಬಲಕ್ಕೆ ನಿಂತ ಕಾಂಗ್ರೆಸ್‌ನ ಹನುಮಂತು ಅವರಿಗೆ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕೊಟ್ಟು ಜೆಡಿಎಸ್‌ ಋುಣ ತೀರಿಸಿದೆ.

ಮೂರು ಸ್ಥಾನ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌ ಅಭಿನಂದಿಸಿದರು.