ಕೆ.ಆರ್‌.ಪೇಟೆ (ಡಿ.13):  ವ್ಯವಹಾರದಲ್ಲಿ ಲಕ್ಷಾಂತರ ರು. ನಷ್ಟದಿಂದಾಗಿ ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ, ಬಿಜೆಪಿ ಮುಖಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ವಳಗೆರೆಹಳ್ಳಿ ಮೆಣಸ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ತಮ್ಮ ಮನೆಯಲ್ಲಿ ತೇಜಸ್‌ಗೌಡ(39) ಕಾಳುಗಳಿಗೆ ಹಾಕುವ ಮಾತ್ರೆಗಳನ್ನು ಸೇವಿಸಿ ಆತ್ಯಹತ್ಯೆಗೆ ಶರಣಾಗಿದ್ದಾರೆ.

ವ್ಯವಹಾರದಲ್ಲಿ ಲಕ್ಷಾಂತರ ರು. ನಷ್ಟಸಂಭವಿಸಿದ್ದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ತಾವು ವಾಸಿಸುತ್ತಿರುವ ಮನೆಯಲ್ಲಿಯೇ ವಿಷಪೂರಿತ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಮ್ಮ ಪತ್ನಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸಂಬಂಧಿಕರ ಸಹಾಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಹೋಗುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಬಿಜೆಪಿ ಜತೆ ಕೈ ಜೋಡಿಸಿದ ಜೆಡಿಎಸ್ : ಮುಖಂಡರು ಕಿಡಿ ...

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಬೇರೆಯವರು ಹಣಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಡೆತ್‌ ನೋಟ್‌ ಬರೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಪಟ್ಟಣ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಪತ್ನಿ ಲಾವಣ್ಯ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮ ವಳಗೆರೆ ಮೆಣಸದಲ್ಲಿ ನಡೆಯಿತು.