*   ಸಚಿವ ಗೋಪಾಲಯ್ಯ ಅವರಿಂದ ಬಸ್‌ ವ್ಯವಸ್ಥೆ*   ಉತ್ತರ ಪ್ರದೇಶದಲ್ಲಿ ಭುಗಿಲೆದ್ದಿರುವ ಆಕ್ರೋಶ*   ಬೆಂಗಳೂರು, ಮೈಸೂರು ಕಡೆಗೆ ತೆರಳಲಿರುವ ರೈಲುಗಳಲ್ಲಿ 20 ರಿಂದ 25 ಟಿಕೆಟ್‌ ಬುಕ್‌ 

ಮಂಡ್ಯ(ಜೂ.20): ಅಗ್ನಿಪಥ್‌ ಯೋಜನೆ ವಿರುದ್ಧ ಉತ್ತರ ಪ್ರದೇಶದಲ್ಲಿ ಭುಗಿಲೆದ್ದಿರುವ ಆಕ್ರೋಶದಿಂದ ಮೂರು ದಿನದಿಂದ ತವರಿಗೆ ಮರಳಲಾಗದೆ ಕಾಶಿಯಲ್ಲಿ ಅತಂತ್ರ ಸ್ಥಿತಿ ಎದುರಿಸುತ್ತಿದ್ದ ಮಂಡ್ಯದ 72 ಮಂದಿಯನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಿಕೊಡುವ ವ್ಯವಸ್ಥೆಯಾಗಿದೆ.

ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿಯವರಾದ ವಾರಾಣಸಿ ಪ್ರಾದೇಶಿಕ ಆಯುಕ್ತ ರವಿಕುಮಾರ್‌, ಸಚಿವ ಕೆ.ಗೋಪಾಲಯ್ಯ, ಮಂಡ್ಯ ಡಿಸಿ ಎಸ್‌.ಅಶ್ವಥಿ, ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತಿತರರ ನೆರವಿನೊಂದಿಗೆ 72 ಮಂದಿಯನ್ನು ತವರಿಗೆ ಕಳುಹಿಸಿಕೊಡಲು 2 ಬಸ್‌ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಮಧ್ಯಾಹ್ನ ಅಥವಾ ಸಂಜೆ ಬಸ್‌ಗಳು ಮಂಡ್ಯದತ್ತ ಹೊರಡಲಿವೆ.

ಅಗ್ನಿಪಥ್‌ ಹಿಂಸಾಚಾರ: ಮಂಡ್ಯದ 70 ಮಂದಿ ವಾರಾಣಸಿಯಲ್ಲಿ ಅತಂತ್ರ

ಜೂ.9ರಂದು ಕಾಶಿ-ಅಯೋಧ್ಯೆ ಯಾತ್ರೆಗೆ ಹೊರಟಿದ್ದ ಮಂಡ್ಯದ 72 ಮಂದಿ ಜೂ.17ರಂದು ಸಂಘಮಿತ್ರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಾಪಸಾಗಬೇಕಿತ್ತು. ಅಗ್ನಿಪಥ್‌ ಯೋಜನೆ ವಿರುದ್ಧದ ಹಿಂಸಾಚಾರದಿಂದಾಗಿ ರೈಲು ಸಂಚಾರ ರದ್ದಾದವು. ಇದರಿಂದ ಕಾಶಿಯ ಜಂಗಮವಾಡಿ ಮಠದಲ್ಲಿ ಆಶ್ರಯ ಪಡೆದಿರುವ ಮಂಡ್ಯ ನಿವಾಸಿಗಳು ವಿಡಿಯೋ ಸಂದೇಶದ ಮೂಲಕ ರಕ್ಷಣೆಗಾಗಿ ಸಿಎಂ, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಸ್‌.ಅಶ್ವತಿ ವಾರಾಣಸಿ ಡಿಸಿಯೊಂದಿಗೆ ಮಾತುಕತೆ ನಡೆಸಿದರು. ಆಗ ವಾರಾಣಸಿ ಪ್ರಾದೇಶಿಕ ಆಯುಕ್ತ ರವಿಕುಮಾರ್‌ ಮಂಡ್ಯದ ಪ್ರವಾಸಿಗರನ್ನು ಸಂಪರ್ಕಿಸಿ ಊಟ-ತಿಂಡಿ ವೆಚ್ಚ ಪಾವತಿಸಿದರು. 

ಬೆಂಗಳೂರು, ಮೈಸೂರು ಕಡೆಗೆ ತೆರಳಲಿರುವ ರೈಲುಗಳಲ್ಲಿ 20 ರಿಂದ 25 ಟಿಕೆಟ್‌ ಬುಕ್‌ ಮಾಡಿಕೊಡುವ ಭರವಸೆ ನೀಡಿದರು. ಆದರೆ ಮಂಡ್ಯದ ನಿವಾಸಿಗಳು ಎಲ್ಲರೂ ಜತೆಗೇ ಹೊರಡುವುದಾಗಿ ಹಟ ಹಿಡಿದಿದ್ದರಿಂದ ಅಬಕಾರಿ ಸಚಿವ ಗೋಪಾಲಯ್ಯನವರ ನೆರವಿನೊಂದಿಗೆ 2 ಬಸ್‌ಗಳ ವ್ಯವಸ್ಥೆ ಮಾಡಲಾಯಿತು. ಬಸ್‌ ವೆಚ್ಚ ಗೋಪಾಲಯ್ಯನವರೇ ಭರಿಸುವ ಭರವಸೆ ನೀಡಿದ್ದಾರೆ.