Asianet Suvarna News Asianet Suvarna News

ಬರಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ : ಜಿಲ್ಲಾಧಿಕಾರಿ ಶುಭ ಕಲ್ಯಾಣ್

ಮಳೆಯ ಕೊರತೆಯಿಂದ ಜಿಲ್ಲೆಯ 10 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದ್ದು, ಬೆಳೆ ನಷ್ಟ ಪರಿಹಾರ, ಕುಡಿಯುವ ನೀರಿನ ವ್ಯವಸ್ಥೆ, ಮೇವು ಕೊರತೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ ಬರಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

Manage the drought situation adequately: District Collector Shubh Kalyan snr
Author
First Published Feb 11, 2024, 10:32 AM IST

  ತುಮಕೂರು :  ಮಳೆಯ ಕೊರತೆಯಿಂದ ಜಿಲ್ಲೆಯ 10 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದ್ದು, ಬೆಳೆ ನಷ್ಟ ಪರಿಹಾರ, ಕುಡಿಯುವ ನೀರಿನ ವ್ಯವಸ್ಥೆ, ಮೇವು ಕೊರತೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ ಬರಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಹೋಬಳಿ ಮಟ್ಟದಲ್ಲಿರುವ ಬರಪರಿಸ್ಥಿತಿಯ ವಾಸ್ತವಾಂಶವನ್ನು ಪರಿವೀಕ್ಷಿಸಲು ಹಾಗೂ ಸರ್ಕಾರದಿಂದ ನೀಡುವ ನಿರ್ದೇಶನಗಳನ್ನು ಸಕಾಲದಲ್ಲಿ ಅನುಷ್ಠಾನ ಮಾಡುವ ಸಲುವಾಗಿ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಬರ ಸಮಸ್ಯೆ ಎದುರಿಸುತ್ತಿರುವ ವಾರ್ಡ್/ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಲಿಖಿತ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ಜಿಲ್ಲೆಯಲ್ಲಿರುವ ಗ್ರಾಮ/ವಾರ್ಡ್‌ಗಳಲ್ಲಿನ ಕುಡಿಯುವ ನೀರಿನ ಮೂಲಗಳು, ಅವುಗಳ ಸ್ಥಿತಿ-ಗತಿ ಬಗ್ಗೆ ಪರಿಶೀಲಿಸಬೇಕು. ಕುಡಿಯುವ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಪರ್ಯಾಯವಾಗಿ ನೀರು ಸರಬರಾಜು ಮಾಡಲು ಸದರಿ ಗ್ರಾಮ ಅಥವಾ ಹತ್ತಿರದ ಗ್ರಾಮದಲ್ಲಿ ಉತ್ತಮ ನೀರಿನ ಇಳುವರಿ ಹೊಂದಿರುವ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಒಪ್ಪಂದ ಮಾಡಿಕೊಳ್ಳಬೇಕು. ಗ್ರಾಮಗಳಲ್ಲಿನ ಜಾನುವಾರುಗಳ ಸಂಖ್ಯಾನುಸಾರ ಮೇವು ಲಭ್ಯತೆ, ಮೇವು ಮಿನಿ ಕಿಟ್ ಮೂಲಕ ಮೇವು ಉತ್ಪಾದನೆಯ ಪ್ರಗತಿ ಬಗ್ಗೆ ಪರಿಶೀಲಿಸಬೇಕು ಎಂದರಲ್ಲದೆ ಜಿಲ್ಲೆಯಲ್ಲಿ ಜಾನುವಾರು ಮೇವು ದಾಸ್ತಾನಿನ ಬಗ್ಗೆ ಮಾಹಿತಿ ಪಡೆದರು.

ಪಾವಗಡ ತಾಲೂಕಿನಲ್ಲಿ ಫ್ಲೋರೈಡ್‌ಯುಕ್ತ ನೀರು ಇರುವುದರಿಂದ ಎಲ್ಲ ಆರ್‌ಓ ಪ್ಲಾಂಟ್‌ಗಳು ಸುಸ್ಥಿತಿಯಲ್ಲಿರುವಂತೆ ನಿಗಾ ವಹಿಸಬೇಕು. ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನಗರ ಸೇರಿದಂತೆ ಎಲ್ಲ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ಮುಂದಿನ ಶುಕ್ರವಾರದೊಳಗೆ ವರದಿ ನೀಡಬೇಕು ಎಂದು ನಿರ್ದೇಶಿಸಿದರು.

ಮುಂಬರುವ ಏಪ್ರಿಲ್-ಮೇ ಮಾಹೆಯಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಅವಶ್ಯಕತೆ ಇರುವ ಕಡೆ ಮಾತ್ರ ಕೊಳವೆಬಾವಿ ಕೊರೆಸಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಬೇಕು. ಸೋಮವಾರದೊಳಗೆ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ವರದಿ ನೀಡಬೇಕು. ಹೊಸದಾಗಿ ಕೊರೆದಿರುವ ಕೊಳವೆ ಬಾವಿಗಳಿಗೆ ಕೂಡಲೇ ವಿದ್ಯುದೀಕರಣಗೊಳಿಸಬೇಕೆಂದು ಸೂಚನೆ ನೀಡಿದರು.

ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರವೀಶ್ ಮಾತನಾಡಿ, ತುರ್ತು ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ ಹೊಸದಾಗಿ ೨೯ ಕೊಳವೆಬಾವಿ ಕೊರೆಯಲಾಗಿದೆ. ಇದಕ್ಕಾಗಿ ಪ್ರತೀ ತಾಲೂಕಿಗೆ ತಲಾ ೨೫ಲಕ್ಷ ರು.ಗಳ ಅನುದಾನ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಜಿಲ್ಲಾ ಪಂಚಾಯತಿಯ ಸಣ್ಣ ಮಸಿಯಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಗಿರೀಶ್‌ಬಾಬುರೆಡ್ಡಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಂಗಸ್ವಾಮಿ, ಎಲ್ಲ ತಹಶೀಲ್ದಾರ್‌ಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕುವಾರು ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳ ವಿವರ:

ಚಿಕ್ಕನಾಯಕನಹಳ್ಳಿ:

ಕಸಬಾ ಹೋಬಳಿಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರು, ಶೆಟ್ಟಿಕೆರೆ ಹೋಬಳಿಗೆ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಗ್ರೇಡ್-1, ಕಂದಿಕೆರೆ ಹೋಬಳಿ-ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ, ಹಂದನಕೆರೆ ಹೋಬಳಿ-ಜಿ.ಪಂ. ಮುಖ್ಯ ಯೋಜನಾಧಿಕಾರಿ, ಹುಳಿಯಾರ್‌-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ.

ಗುಬ್ಬಿ:

ಕಸಬಾ ಹೋಬಳಿ-ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌, ಕಡಬ-ಕೆಆರ್‌ಐಡಿಎಲ್ ಕಾರ್ಯಪಾಲಕ ಅಭಿಯಂತರರು, ಸಿ.ಎಸ್.ಪುರ-ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ, ಚೇಳೂರು-ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ನಿಟ್ಟೂರು-ಕಾರ್ಮಿಕ ಅಧಿಕಾರಿ, ಹಾಗಲವಾಡಿ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು.

ಕುಣಿಗಲ್:

ಎಡೆಯೂರು ಹೋಬಳಿ-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಹುಲಿಯೂರುದುರ್ಗ-ಎಪಿಎಂಸಿ ಜಂಟಿ ನಿರ್ದೇಶಕರು, ಕೊತ್ತಿಗೆರೆ-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಅಮೃತೂರು-ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಹುತ್ರಿದುರ್ಗ-ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿ, ಕಸಬ-ಬೆಸ್ಕಾಂ ಕಾರ್ಯಪಾಲಕ ಅಭಿಯಂತರರು.

ತಿಪಟೂರು:

ಕಸಬಾ ಹೋಬಳಿ-ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ಕಿಬ್ಬನಹಳ್ಳಿ-ಬೆಸ್ಕಾಂ ಕಾರ್ಯಪಾಲಕ ಅಭಿಯಂತರರು, ನೊಣವಿನಕೆರೆ-ಜಿಲ್ಲಾ ಉದ್ಯೋಗ ವಿನಮಯಾಧಿಕಾರಿಗಳು, ಹೊನ್ನವಳ್ಳಿ- ಜಿ.ಪಂ. ಕಾರ್ಯನಿರ್ವಾಹಕ ಅಭಿಯಂತರರು,

ತುರುವೇಕೆರೆ:

ಕಸಬಾ ಹೋಬಳಿ-ತೂಕ ಮತ್ತು ಅಳತೆ ಇಲಾಖೆ ಸಹಾಯಕ ನಿಯಂತ್ರಕರು, ದಂಡಿನಶಿವರ-ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರು, ದಬ್ಬೆಘಟ್ಟ- ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು, ಮಾಯಸಂದ್ರ- ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯಪಾಲಕ ಅಭಿಯಂತರರು.

ತುಮಕೂರು:

ಬೆಳ್ಳಾವಿ ಹೋಬಳಿ-ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಗೂಳೂರು-ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌, ಹೆಬ್ಬೂರು-ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪನಿರ್ದೇಶಕರು, ಊರ್ಡಿಗೆರೆ-ಕೃಷಿ ಇಲಾಖೆಯ ಉಪನಿರ್ದೇಶಕರು, ಕಸಬಾ- ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಕೋರಾ-ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕರು.

ಶಿರಾ: ಕಸಬಾ-ಮಧುಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಹುಲಿಕುಂಟೆ-ಕೃಷಿ ಉತ್ಪನ್ನ ಮಾರುಕಟ್ಟೆಯ ಉಪನಿರ್ದೇಶಕರು, ಬುಕ್ಕಾಪಟ್ಟಣ-ಆಹಾರ ಮತ್ತು ನಾಗರಿಕ ಇಲಾಖೆ ಜಂಟಿ ನಿರ್ದೇಶಕರು, ಕಳ್ಳಂಬೆಳ್ಳ- ಮಧುಗಿರಿ ಕಾರ್ಮಿಕ ಅಧಿಕಾರಿ, ಗೌಡಗೆರೆ-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ.

ಪಾವಗಡ:

ಕಸಬಾ ಹೋಬಳಿ- ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು, ವೈ.ಎನ್. ಹೊಸಕೋಟೆ-ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ನಾಗಲಮಡಿಕೆ-ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ನಿಡಗಲ್- ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು.

ಮಧುಗಿರಿ:

ಕಸಬಾ ಹೋಬಳಿ-ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಐ.ಡಿ.ಹಳ್ಳಿ-ಮಧುಗಿರಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಪುರವರ-ಸಹಕಾರಿ ಸಂಘಗಳ ಇಲಾಖೆಯ ಉಪನಿಬಂಧಕರು, ಮಿಡಿಗೇಶಿ-ರೇಷ್ಮೆ ಇಲಾಖೆಯ ಉಪನಿರ್ದೇಶಕರು, ಕೊಡಿಗೇನಹಳ್ಳಿ-ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ, ದೊಡ್ಡೇರಿ-ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ.

ಕೊರಟಗೆರೆ:

ಕಸಬಾ ಹೋಬಳಿ-ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಹೊಳವನಹಳ್ಳಿ-ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು, ಕೋಳಾಲ-ಮಧುಗಿರಿ ಕೃಷಿ ಇಲಾಖೆಯ ಉಪನಿರ್ದೇಶಕರು ಹಾಗೂ ಸಿ.ಎನ್.ದುರ್ಗ ಹೋಬಳಿಗೆ ಮಧುಗಿರಿ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಕೋಟ್‌

ಜಿಲ್ಲಾ ಮಟ್ಟದ ಅಧಿಕಾರಿಗಳು ಹೋಬಳಿಗೆ ಭೇಟಿ ನೀಡಿದಾಗ ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳದಲ್ಲಿದ್ದು ಅಗತ್ಯ ಮಾಹಿತಿ ನೀಡಬೇಕು. ಬರಪರಿಸ್ಥಿತಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ತಾಲೂಕು ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆ ಎಲ್ಲ ಸಾರ್ವಜನಿಕರಿಗೆ ತಿಳಿಯುವಂತೆ ಪ್ರಚುರಪಡಿಸಬೇಕು.

ಶುಭ ಕಲ್ಯಾಣ್‌ ಜಿಲ್ಲಾಧಿಕಾರಿ

Follow Us:
Download App:
  • android
  • ios