ಬೆಂಗಳೂರು [ಸೆ.08]:  ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಹಣವಿದ್ದ ಲಾಕರನ್ನೇ ದೋಚಿ ಪರಾರಿಯಾಗಲು ಯತ್ನಿಸಿದ್ದ ಖಾಸಗಿ ಕಂಪನಿ ನೌಕರನೊಬ್ಬ ಬಂಡೇಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮುನೇಶ್ವರ ನಗರದಲ್ಲಿ ನಿಂಜಾ ಕಾರ್ಟ್‌ ಕಂಪನಿ ನೌಕರ ಮುಜಾಕೀರ್‌ ಹುಸೇನ್‌ ಬಂಧಿತನಾಗಿದ್ದು, ಆರೋಪಿಯಿಂದ 12 ಲಕ್ಷವಿದ್ದ ಲಾಕರ್‌ ಜಪ್ತಿ ಮಾಡಲಾಗಿದೆ. ಗಣೇಶ ಹಬ್ಬದ ರಜೆ ವೇಳೆ ಕಂಪನಿಯ ಲಾಕರ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಪುಟ್ಟೇನಹಳ್ಳಿಯ ಉದ್ಯಮಿ ಗುರುಪ್ರಸಾದ್‌ ಅವರು, ಬಂಡೇಪಾಳ್ಯದ ಮುನೇಶ್ವರನಗರದಲ್ಲಿ ಆನ್‌ಲೈನ್‌ ಮೂಲಕ ಗ್ರಾಹಕರಿಗೆ ದಿನಬಳಕೆಯ ಆಹಾರ ಸಾಮಾಗ್ರಿ ಪೂರೈಸುವ ‘ನಿಂಜಾ ಕಾರ್ಟ್‌’ ಹೆಸರಿನಲ್ಲಿ ಕಂಪನಿಯನ್ನು ನಡೆಸುತ್ತಿದ್ದರು. ಈ ಕಂಪನಿಯಲ್ಲಿ ಅಸ್ಸಾಂ ಮೂಲದ ಹುಸೇನ್‌, ಒಂದು ತಿಂಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿ ದಿನ ಆ ಕಂಪನಿ ಲಕ್ಷಾಂತರ ರುಪಾಯಿ ವಹಿವಾಟು ನಡೆಸುತ್ತದೆ. ಅದರಂತೆ ಆ.31 ಮತ್ತು ಸೆ.1ರಂದು ಆಹಾರ ಪೂರೈಕೆದಾರರಿಂದ ಸಂಗ್ರಹವಾಗಿದ್ದ 12 ಲಕ್ಷವನ್ನು ಕಂಪನಿಯ ಲಾಕರ್‌ನಲ್ಲಿ ಇಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಹುಸೇನ್‌, ಲಾಕರ್‌ ಸಮೇತ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗಣೇಶ ಹಬ್ಬದ ರಜೆ ಹಿನ್ನೆಲೆಯಲ್ಲಿ ಹಣವನ್ನು ಬ್ಯಾಂಕ್‌ಗೆ ಸಂದಾಯ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಂಪನಿಯಲ್ಲಿಯೇ ಇದ್ದ ಸೇಫ್‌ ಲಾಕರ್‌ನಲ್ಲಿಟ್ಟು ಬಾಗಿಲು ಮುಚ್ಚಿಕೊಂಡು ಹೋಗಿದ್ದರು. ರಜೆ ಬಳಿಕ ಸೆ.3ರಂದು ಬೆಳಗ್ಗೆ ಕಂಪನಿ ಬಾಗಿಲು ತೆರೆದು ಒಳ ಪ್ರವೇಶಿಸಿದ ಸಿಬ್ಬಂದಿಗೆ ಗೋಡೆ ಒಡೆದು ಲಾಕರ್‌ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಕೂಡಲೇ ಬಂಡೇಪಾಳ್ಯ ಠಾಣೆ ಪೊಲೀಸರಿಗೆ ಕಂಪನಿ ಅಧಿಕಾರಿಗಳು ದೂರು ಕೊಟ್ಟಿದ್ದರು. ಅದರಂತೆ ಸಿಸಿಟಿವಿ ಕ್ಯಾಮೆರಾ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ತನ್ನೂರು ಅಸ್ಸಾಂಗೆ ಪರಾರಿಯಾಗಲು ಕೆ.ಆರ್‌.ಪುರ ರೈಲ್ವೆ ನಿಲ್ದಾಣದಲ್ಲಿ ಸಜ್ಜಾಗಿದ್ದ ಆರೋಪಿಯನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಲಾಕರ್‌ ಬಿಚ್ಚಲಾಗದೆ ಬಚ್ಚಿಟ್ಟ!

ಕಬ್ಬಿಣದ ಸಲಾಕೆಯಿಂದ ಬೀಗ ಒಡೆದು ಕಂಪನಿಯೊಳಗೆ ಪ್ರವೇಶಿಸಿದ ಹುಸೇನ್‌, ಬಳಿಕ ಗೋಡೆಗೆ ಅಂಟಿಸಿದ್ದ ಡಿಜಿಟಲ್‌ ಲಾಕರ್‌ ಬೇರ್ಪಡಿಸಿದ್ದ. ಆದರೆ ಲಾಕರ್‌ಗೆ ಪಾಸ್‌ವರ್ಡ್‌ ಇಟ್ಟಿದ್ದರಿಂದ ತೆರೆಯಲು ಸಾಧ್ಯವಾಗಿಲ್ಲ. ಇದರಿಂದ ಬೇಸತ್ತ ಆತ, ಕೊನೆಗೆ ಲಾಕರ್‌ ಸಮೇತ ಕಂಪನಿಯಿಂದ ಹೊರ ಬಂದಿದ್ದ. ಆ ವೇಳೆ 25 ಕೆ.ಜಿ. ತೂಕವಿದ್ದ ಕಾರಣ ಲಾಕರ್‌ ಸಾಗಿಸಲು ಸಾಧ್ಯವಾಗದೆ ಕಂಪನಿಯಿಂದ 300 ಮೀಟರ್‌ ದೂರದಲ್ಲೇ ಅದನ್ನು ಬಚ್ಚಿಟ್ಟು ಕಾಲ್ಕಿತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.