ಉಳ್ಳಾಲ [ಅ.07] : ಆಯುಧ ಪೂಜೆಗೆಂದು ತೊಳೆದು ನಿಲ್ಲಿಸಿದ್ದ ಖಾಸಗಿ ಸಿಟಿ ಬಸ್‌ ಒಂದನ್ನು ಕದ್ದೊಯ್ಯುತ್ತಿದ್ದ ಆರೋಪಿಯನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಮಂಗಳೂರು ಸಮೀಪದ ಉಳ್ಳಾಲ ನಿವಾಸಿ ಮಹಮ್ಮದ್‌ ನಿಫಾಝ್ (20) ಪೊಲೀಸರ ವಶದಲ್ಲಿರುವ ಆರೋಪಿ.

ಉಳ್ಳಾಲದ ಅಬ್ಬಾಸ್‌ ಅಲಿ ಮಾಲೀಕತ್ವದ ಬಸ್‌ ಎ.ಆರ್‌.ಟ್ರಾವೆಲ್ಸ್‌ ಅನ್ನು ಕೋಟೆಪುರದಲ್ಲಿ ಶನಿವಾರ ರಾತ್ರಿ ಚಾಲಕ ನಿಲ್ಲಿಸಿ ಮನೆಗೆ ತೆರಳಿದ್ದರು. ಬೆಳಗ್ಗೆ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ ಬಸ್‌ ಇರಲಿಲ್ಲ. ವಿಷಯ ಗೊತ್ತಾದ ತಕ್ಷಣ ಬಸ್‌ ಮಾಲೀಕರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಬಸ್‌ ಮಾಲೀಕರ ಮಿತ್ರರೊಬ್ಬರು ಉಡುಪಿ ಕಡೆಯಿಂದ ಕರೆ ಮಾಡಿದ್ದು, ನಿಮ್ಮ ಸಿಟಿ ಬಸ್‌ ಉಡುಪಿ ಹೆದ್ದಾರಿಯಲ್ಲಿ ಸಂಚರಿಸುತ್ತಿದೆ. ಎಲ್ಲಿಗಾದರೂ ಪ್ರವಾಸಕ್ಕೆ ಹೋಗ್ತಿದೆಯಾ ಎಂದು ವಿಚಾರಿಸಿದ್ದಾರೆ. ತಕ್ಷಣವೇ ಬಸ್‌ ಮಾಲೀಕರು ಬಸ್‌ ತಡೆಯುವಂತೆ ಮಿತ್ರನಿಗೆ ತಿಳಿಸಿದ್ದು ಅವರು ಉಡುಪಿ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಉಡುಪಿ ಪೊಲೀಸರು ಆರೋಪಿ ಸಹಿತ ಬಸ್‌ ವಶಪಡಿಸಿಕೊಂಡಿದ್ದಾರೆ.

ಆರೋಪಿ ನಿಫಾಝ್‌ ಗಾಂಜಾ ವ್ಯಸನಿ ಎನ್ನಲಾಗಿದ್ದು ಇದೀಗ ಉಡುಪಿ ಪೊಲೀಸರ ತನಿಖೆ ವೇಳೆ ಮಾನಸಿಕ ರೋಗಿಯಂತೆ ಅಭಿನಯಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳಬೇಕಾದರೆ ಟೋಲ್‌ನಲ್ಲಿ ಶುಲ್ಕವನ್ನೂ ಪಾವತಿಸದೆ ಪರಾರಿಯಾಗಿದ್ದಾನೆ. ಈ ಭರದಲ್ಲಿ ಬಸ್‌ನ ಗಾಜು ಒಡೆದಿದೆ.