ಬೆಂಗಳೂರು(ಜ.29): ಬಿರಿಯಾನಿ ಪಾರ್ಸಲ್‌ ನೆಪದಲ್ಲಿ ಚಾಲಕನನ್ನು ಯಾಮಾರಿಸಿದ ಚಾಲಾಕಿ ಕಳ್ಳನೊಬ್ಬ, ಆಟೋ ಕದ್ದು ಪರಾರಿಯಾಗಿರುವ ಘಟನೆ ಶಿವಾಜಿನಗರ ಸಮೀಪ ನಡೆದಿದೆ. ಹನುಮಂತನಗರದ ಜೆ.ಎಂ.ಅರುಣ್‌ ಎಂಬುವರೇ ವಂಚನೆಗೊಳಗಾಗಿದ್ದು, ಐದು ದಿನಗಳ ಹಿಂದೆ ಮೈಸೂರು ರಸ್ತೆಯಿಂದ ಶಿವಾಜಿನಗರಕ್ಕೆ ಪ್ರಯಾಣಿಕನನ್ನು ಕರೆ ತಂದಾಗ ಈ ಕೃತ್ಯ ನಡೆದಿದೆ.

ಜ.23ರಂದು ಮೈಸೂರು ರಸ್ತೆ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದ ಬಳಿ ಅರುಣ್‌ ಅವರ ಆಟೋ ಹತ್ತಿದ ಆರೋಪಿ, ಶಿವಾಜಿನಗರಕ್ಕೆ ಹೋಗುವಂತೆ ತಿಳಿಸಿದ್ದ. ನಂತರ ಮಾರ್ಗ ಮಧ್ಯೆ ತಾಜ್‌ ಹೋಟೆಲ್‌ ಸಮೀಪ ಆಟೋ ನಿಲ್ಲಿಸುವಂತೆ ಹೇಳಿದ ಆತ, ಹೋಟೆಲ್‌ಗೆ ಹೋಗಿ ಬಿರಿಯಾನಿ ತರುವಂತೆ ಚಾಲಕನಿಗೆ ಕೇಳಿದ್ದ. ಆದರೆ ಮೊದಲು ಅರುಣ್‌, ನೀವೇ ಹೋಗಿ. ನಾನು ಆಟೋದಲ್ಲೇ ಕಾಯುತ್ತಿರುವೆ ಎಂದಿದ್ದಾರೆ.

ಬಾರ್‌ ಗರ್ಲ್‌ಗೆ ಉಡುಗೊರೆ ನೀಡಲು ವಾಚ್‌ ಅಂಗಡಿಗೆ ಕನ್ನ!

ಆಗ ಆರೋಪಿ, ನನ್ನ ಜತೆ ಹೋಟೆಲ್‌ ಸಿಬ್ಬಂದಿಗೆ ಗಲಾಟೆಯಾಗಿದೆ. ಮತ್ತೆ ಹೋದರೆ ಸಮಸ್ಯೆಯಾಗುತ್ತದೆ ಎಂದು ಹೇಳಿ ಪುಸಲಾಯಿಸಿ ಚಾಲಕನನ್ನು ಕಳುಹಿಸಿದ್ದಾನೆ. ಈ ಮಾತಿನಿಂದ ಮರುಳಾದ ಚಾಲಕ, ಬಿರಿಯಾನಿ ತರಲು ತೆರಳುತ್ತಿದ್ದಂತೆ ಆಟೋ ಚಾಲೂ ಮಾಡಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ಬಿರಿಯಾನಿ ತೆಗೆದುಕೊಂಡ ಬಂದ ಚಾಲಕ, ಆಟೋ ಇಲ್ಲದೆ ಕಂಗಾಲಾಗಿದ್ದಾರೆ. ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.