ಮಂಗಳೂರು(ಡಿ.14): ಶಾಲೆಗೆ ಹೋಗುವುದಕ್ಕೆ ಮನೆಯಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಮಹಾನಗರ ಪಾಲಿಕೆ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡ ಘಟನೆ ನಡೆದಿದ್ದು, ಇದಕ್ಕೆ ಅಧಿಕಾರಿಗಳಿಂದ ಸಹಾಯಹಸ್ತ ನೀಡುವ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ಅಧಿಕಾರಿಗಳು- ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಕಂಕನಾಡಿ ಸೈಂಟ್‌ ಜೋಸೆಫ್‌ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮುರ್ಶಿದಾ ತನ್ನ ಸಮಸ್ಯೆಯನ್ನು ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ.

ಮನೆಗಳಿಗೆ ಕಲುಷಿತ ನೀರು ಬಿಟ್ಟ ಜಲಮಂಡಳಿಗೆ ದಂಡ!

ನಮ್ಮ ಮನೆಯಲ್ಲಿ ತಂದೆ ‘ನೀನು ಶಾಲೆಗೆ ಹೋಗುವುದು ಬೇಡ’ ಎಂದು ಆಕ್ಷೇಪಿಸುತ್ತಿದ್ದಾರೆ. ತಾಯಿ ಮಾತ್ರ ಬೆಂಬಲಿಸುತ್ತಿದ್ದಾರೆ. ನಾನು ಏನು ಮಾಡಬೇಕು ವಿದ್ಯಾರ್ಥಿನಿ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಪಾಲಿಕೆ ಉಪಾಯುಕ್ತೆ ಗಾಯತ್ರಿ ನಾಯಕ್‌, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮನೆಗೆ ಬಂದು ಪೋಷಕರನ್ನು ಭೇಟಿ ಮಾಡಿ ಮನವೊಲಿಸುವ ಕೆಲಸ ಮಾಡುತ್ತಾರೆ. ನಿಮ್ಮ ಶಿಕ್ಷಣ ಮುಂದುವರಿಸಲು ತೊಂದರೆ ಆಗದಂತೆ ನೋಡಿ ಕೊಳ್ಳುತ್ತಾರೆ ಎಂದು ಭರವಸೆ ನೀಡಿದರು. ಈ ಸಂದರ್ಭ ಹಾಜರಿದ್ದ ವಕ್ಫ್ ಅಧಿಕಾರಿ ಕೂಡ ಸ್ಪಂದಿಸಿ, ಮುರ್ಶಿದಾ ಹೆತ್ತವರನ್ನು ಮನವೊಲಿಸಲಾಗುವುದು ಎಂದು ಹೇಳಿದ್ದಾರೆ.

ಉಡುಪಿ: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗಾಗಿ 'ಸಖಿ'

ನಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಪೋಷಕರು ವಿವಿಧ ಹಂತದಲ್ಲಿ ಮೊಟಕುಗೊಳಿಸುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದೂ ಮುರ್ಶಿದಾ ಹೇಳಿಕೊಂಡರು. ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಪೋಷಕರಿಗೆ ಮನವರಿಕೆ ಮಾಡಬೇಕಿದೆ. ಜಾಗೃತಿ ಮೂಡಿಸುವ ಕೆಲಸ ಆಗ ಬೇಕಾಗಿದೆ ಎಂದು ಪಾಲಿಕೆಯ ಉಪಾಯುಕ್ತೆ ಗಾಯತ್ರಿ ಎನ್‌.ನಾಯಕ್‌ ಹೇಳಿದ್ದಾರೆ.

ಪೋಷಕರ ಮೈಂಡ್‌ ಸೆಟ್‌ ಬೇರೆ: ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಖಿಲಾ ಮಾತನಾಡಿ, ಕೆಲವೊಂದು ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿಯೇ ಭಿನ್ನವಾಗಿರುತ್ತದೆ. ಅದಕ್ಕೆ ಅವಕಾಶಗಳು ಕಡಿಮೆ ಇರುತ್ತವೆ. ಆದರೆ ಪೋಷಕರ ಮೈಂಡ್‌ಸೆಟ್‌ ಬೇರೆಯೇ ಆಗಿರುತ್ತದೆ. ಇದಕ್ಕೇನು ಮಾಡುವುದು ಎಂದರು. ಮಕ್ಕಳಿಗೆ 14ನೇ ವಯಸ್ಸಿನ ತನಕ ಪ್ರಾಥಮಿಕ ಶಿಕ್ಷಣ ಒದಗಿಸುವುದು ಸರ್ಕಾರದ ಜವಾಬ್ದಾರಿ. ಪೋಷಕರು ತಮ್ಮ ಮಕ್ಕಳ ಬದುಕಿನ ಸುರಕ್ಷತೆಗಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಕ್ಕಳು ತಮ್ಮ ಆಸಕ್ತಿಗಳನ್ನು ಶಿಕ್ಷಕರು ಅಥವಾ ಪೋಷಕರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಬಹುದಾಗಿದೆ ಎಂದು ಉಪಾಯುಕ್ತೆ ಹೇಳಿದ್ದಾರೆ.

ಮಕ್ಕಳಲ್ಲೂ ಸಿಗರೆಟ್‌ ಚಟ:

ಇಂದು ಮಕ್ಕಳು ಕೂಡ ಧೂಮಪಾನ ಮತ್ತು ಮದ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಹಿರಿಯರು ಕಾರಣ ಅಲ್ಲವೇ? ಇವುಗಳನ್ನು ಬೇರು ಸಹಿತ ಕಿತ್ತು ಹಾಕಲು ಸರ್ಕಾರದಿಂದ ಸಾಧ್ಯ ಇಲ್ಲವೇ, ವಿದ್ಯಾರ್ಥಿಗಳಿಂದಲೇ ರಾರ‍ಯಲಿ ಮಾಡಿಸಿದರೆ ಹೇಗೆ ಎಂದು ವಿದ್ಯಾರ್ಥಿನಿ ವೀಣಾ ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿಗಳು, ವಿದ್ಯಾರ್ಥಿಗಳು ಶಿಕ್ಷಕರ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ರಾರ‍ಯಲಿಗಳನ್ನು ಮಾಡಬೇಕಾಗುತ್ತದೆ. ಇದು ಒಳ್ಳೆಯ ವಿಷಯವಾದ ಕಾರಣ ಸಮಾಜ ವಿದ್ಯಾರ್ಥಿಗಳನ್ನು ಬೆಂಬಲಿಸಬಹುದು ಎಂದರು. ಪೊಲೀಸ್‌ ಉಪ ನಿರೀಕ್ಷಕಿ ಶ್ರೀಕಲಾ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳ ಒಳಿತಿಗಾಗಿ ಮಾದಕ ವಸ್ತು ಮಾರಾಟ ಅಡ್ಡೆಗಳಿಗೆ ದಾಳಿ ನಡೆಸಿದರೆ ಹಿರಿಯ ಅಧಿಕಾರಿಗಳು ಬೆಂಬಲಿಸುವ ಖಾತ್ರಿ ಇಲ್ಲ. ನಾನು ದಾಳಿ ಮಾಡಿ ಬಲಿಪಶು ಆಗಿದ್ದೇನೆ ಎಂದು ಉತ್ತರಿಸಿದ್ದು ವ್ಯವಸ್ಥೆಗೆ ಕನ್ನಡಿಯಾಗಿತ್ತು.

ಬಸ್‌ ಸಿಬ್ಬಂದಿ ಒರಟುತನ:

ಬಸ್ಸು ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸ್ಟಾಪ್‌ ಕೊಡುವುದಿಲ್ಲ. ಮಾತ್ರವಲ್ಲದೆ ಒರಟಾಗಿ ವರ್ತಿಸುತ್ತಾರೆ ಎಂದು ಬೊಕ್ಕಪಟ್ಣ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿ ಮಹೇಶ ದೂರು ಹೇಳಿಕೊಂಡರು. ನಿರ್ದಿಷ್ಟಬಸ್ಸುಗಳ ಕುರಿತು ದೂರು ನೀಡಿದರೆ ಕ್ರಮ ವಹಿಸಲಾಗುವುದು. ಬಸ್ಸು ಸಿಬ್ಬಂದಿಗೆ ಈ ವಿಷಯದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸಾರಿಗೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಕೆಎಸ್‌ಆರ್‌ಟಿಸಿ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದ್ದರು.