ಮನೆಗಳಿಗೆ ಕಲುಷಿತ ನೀರು ಬಿಟ್ಟ ಜಲಮಂಡಳಿಗೆ ದಂಡ!
ಕಲುಷಿತ ನೀರು ಪೂರೈಕೆ ಮಾಡಿದ ಜಲ ಮಂಡಳಿಗೆ ಮಾನವ ಹಕ್ಕುಗಳ ಆಯೋಗ ದಂಡ ವಿಧಿಸಿ ಆದೇಶಿಸಲಾಗಿದೆ.
ಬೆಂಗಳೂರು [ಡಿ.14]: ನಗರದ ದೊಡ್ಡನೆಕ್ಕುಂದಿ ಬಳಿಯ ನಿಸರ್ಗ ಬಡಾವಣೆ ಮನೆಗಳಿಗೆ ಕಲುಷಿತ ನೀರು ಪೂರೈಕೆ ಮಾಡಿದ ಜಲ ಮಂಡಳಿಗೆ ಮಾನವ ಹಕ್ಕುಗಳ ಆಯೋಗ 6,400 ರು.ಗಳ ದಂಡ ವಿಧಿಸಿ ಆದೇಶಿಸಿದೆ.
ಅಲ್ಲದೆ, ಕಲುಷಿತ ನೀರು ಸೇವನೆ ಮಾಡುವುದರಿಂದ ಈ ಭಾಗದ ಜನತೆಗೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಗರದ ಯಾವುದೇ ಭಾಗಗಳಿಗೂ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.
2019ರ ಆಗಸ್ಟ್ ಮೊದಲ ವಾರದಲ್ಲಿ ಜಲ ಮಂಡಳಿಯಿಂದ ಕಲುಷಿತ ನೀರನ್ನು ಪೂರೈಕೆ ಮಾಡಲಾಗಿತ್ತು. ಈ ಕುರಿತು ಮಾಹಿತಿ ಇಲ್ಲದ ನಿವಾಸಿಗಳು ಅದೇ ನೀರನ್ನು ಮನೆಗಳ ಸಂಪ್‌ನಲ್ಲಿ ಸಂಗ್ರಹಿಸಿಕೊಂಡು ಎರಡು ದಿನಗಳ ಕಾಲ ಸೇವನೆ ಮಾಡಿದ್ದರು. ಜೊತೆಗೆ ದೈನಂದಿನ ಚಟುವಟಿಕೆಗಳಿಗೆ ಬಳಸಿಕೊಂಡಿದ್ದರು.
ಘಟನೆ ನಡೆದ ಎರಡು ದಿನಗಳ ಬಳಿಕೆ ಸಂಪ್‌ಗಳಲ್ಲಿ ಕೆಟ್ಟವಾಸನೆ ಬರುತ್ತಿತ್ತು. ಇದರಿಂದ ಸಂಶಯಗೊಂಡು ನೀರನ್ನು ಪರಿಶೀಲಿಸಿದಾಗ ನೀರು ಕಲುಷಿತ ಗೊಂಡಿದ್ದ ಅಂಶ ಗೊತ್ತಾಗಿತ್ತು. ಈ ಸಂಬಂಧ ನಿಸರ್ಗ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷ ವಿ.ಸುರೇಶ್ ಬಾಬು ತಪ್ಪಿತಸ್ಥ ಆಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೂರಿಗೆ ಸಂಬಂಧಿಸಿದಂತೆ ಜಲ ಮಂಡಳಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದ ಆಯೋಗ, ಈ ಘಟನೆಗೆ ಕಾರಣವನ್ನು ತಿಳಿಸಲು ಸೂಚಿಸಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಜಲ ಮಂಡಳಿ, ನಿಸರ್ಗ ಬಡಾವಣೆಗೆ ನೀರು ಪೂರೈಕೆಯಾಗುವ ಕೊಳವೆ ಮಾರ್ಗದಲ್ಲಿ ಭಾರತೀಯ ಗ್ಯಾಸ್ ಪ್ರಾಧಿಕಾರ ಕಾಮಗಾರಿ ನಡೆಸುತ್ತಿತ್ತು. ಅಲ್ಲಿನ ಸಿಬ್ಬಂದಿ ನೀರು ಪೂರೈಕೆಯಾಗುತ್ತಿದ್ದ ಕೊಳವೆಗೆ ಹಾನಿ ಮಾಡಿದ್ದರು. ಪರಿಣಾಮ ನೀರು ಕಲುಷಿತ ಗೊಳ್ಳಲು ಕಾರಣವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದರು.
ಅಲ್ಲದೆ, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದ್ದರು. ಈ ಅಂಶವನ್ನು ದಾಖಲಿಸಿಕೊಂಡಿದ್ದ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ನ್ಯಾ.ಡಿ.ಎಚ್.ವಘೇಲಾ ಕಲುಷಿತ ನೀರು ಪೂರೈಕೆಯಾಗಿದ್ದ ಮನೆಗಳ ಸಂಪ್‌ಗಳ ಸ್ವಚ್ಛತೆ ಮಾಡಲು .6,400 ಪಾವತಿಸುವಂತೆ ಜಲ ಮಂಡಳಿಗೆ ಆದೇಶಿಸಿದ್ದಾರೆ.