ಮಂಗಳೂರು(ಫೆ.01): ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆ.ಎಸ್‌. ರಾವ್‌ ನಗರದ ಬಳಿಯ ರೈಲು ನಿಲ್ದಾಣದ ಸಮೀಪ ಯುವಕನೊಬ್ಬನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಶುಕ್ರವಾರ ಕಂಡು ಬಂದಿದೆ. ಮೂಲ್ಕಿಯ ಲಿಂಗಪ್ಪಯ್ಯ ಕಾಡು ನಿವಾಸಿ ಮೂಲತಃ ಸಿಂದಗಿ ತಾಲೂಕಿನ ಶರಣಪ್ಪ (30) ಕೊಲೆಯಾದ ಯುವಕ.

ಗುರುವಾರ ರಾತ್ರಿ ಸ್ಥಳೀಯ ಬಾರ್‌ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತಂಡವೊಂದರ ನಡುವೆ ಗಲಾಟೆ ನಡೆದಿದ್ದು, ಇದೇ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಕೊಲೆ ಆರೋಪಿಗಳಾದ ಬಿಹಾರ ಮೂಲದ ನವೀನ್‌ ಕುಮಾರ್‌ ಯಾನೆ ಗುಲ್ಲು (19) ಹಾಗೂ ಸನ್ನಿ ಬಾಬು (19) ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೂಲಿ ಕಾರ್ಮಿಕರಾಗಿರುವ ಇವರೆಲ್ಲರೂ ಪರಸ್ಪರ ಒಟ್ಟಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.