ಕೆ.ಆರ್‌.ಪೇಟೆ (ನ.02): ತಾಲೂಕಿನ ಹೇಮಗಿರಿ ನದಿ ದಂಡೆಯಲ್ಲಿ ಯುವಕ ಶವ ಪತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಕೆ.ಆರ್‌.ಪೇಟೆ ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿ ಮೆಸ್‌ ನಡೆಸುತ್ತಿದ್ದ ಬೆಟ್ಟೇಗೌಡರ ಪುತ್ರ ಅಭಿಷೇಕ್‌ (28) ಸಾವಿಗೀಡಾಗಿರುವ ಯುವಕ.

ಮೃತ ಯುವಕನ ತಂದೆ ಬೆಟ್ಟೇಗೌಡ ಮೂಲತಃ ಪಾಂಡವಪುರ ತಾಲೂಕಿನ ನಳ್ಳೇನಹಳ್ಳಿಯವರು. ಹೊಟ್ಟೆಪಾಡಿಗಾಗಿ ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿ ಭೈರವೇಶ್ವರ ಮೆಸ್‌ ನಡೆಸಿಕೊಂಡು ಜೀವನ ಮಾಡುತ್ತಿದ್ದರು. ಅಭಿಷೇಕ್‌ ತನ್ನ ಸ್ನೇಹಿತರ ಜೊತೆಗೂಡಿ ಶನಿವಾರ ರಾತ್ರಿ ಹತ್ತು ಗಂಟೆಯ ಸಮಯದಲ್ಲಿ ಮನೆಯಿಂದ ತೆರಳಿದ್ದಾನೆ. ಹೇಮಗಿರಿಯ ಬಳಿಯಿರುವ ಪಂಪ್‌ಹೌಸ್‌ ಬಳಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾನೆ.

ಭಾನುವಾರ ಬೆಳಗಿನ ಜಾವ 4 ಗಂಟೆ ವೇಳೆಗೆ ಅಭಿಷೇಕ್‌ ಸ್ನೇಹಿತರು ಆತ ಮರಣಹೊಂದಿರುವ ವಿಚಾರವನ್ನು ಕುಟುಂಬಸ್ಥರಿಗೆ ದೂರವಾಣಿಯ ಮೂಲಕ ತಿಳಿಸಿದ್ದಾರೆ. ಪಾರ್ಟಿ ವೇಳೆಯಲ್ಲಿ ಯುವಕರ ಮಧ್ಯೆ ಗಲಾಟೆ ಸಂಭವಿಸಿ ಆತನ ಜೊತೆಯಿದ್ದ ಸ್ನೇಹಿತರೇ ಅಭಿಷೇಕನನ್ನು ಕೊಲೆ ಮಾಡಿ ನದಿ ದಂಡೆಯಲ್ಲಿ ಹಾಕಿರುವ ಶಂಕೆ ವ್ಯಕ್ತವಾಗಿದೆ.

ಮನೆಗೆಲಸದ ವಿಚಾರಕ್ಕೆ ತಾಯಿ ಬೈದಿದ್ದಕ್ಕೆ ಬಾಲಕಿ ಆತ್ಮಹತ್ಯೆ

ಮೃತ ಯುವಕನಿಗೆ 3 ವರ್ಷದ ಹಿಂದೆ ವಿವಾಹವಾಗಿದೆ. ಗರ್ಭಿಣಿ ಪತ್ನಿಯಿದ್ದಾಳೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹವನ್ನು ನೀಡಲಾಯಿತು.

ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಅಭಿಷೇಕ್‌ ಜೊತೆ ಪಾರ್ಟಿ ಮಾಡಿದ್ದ ನಾಲ್ವರು ಸ್ನೇಹಿತರನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.